Chief Editor
Manohar. R (Manu)
Photo Journalist
chitrataramanu@gmail.com
+91 9845549026
ಟಕ್ಕರ್ ಹಾಡು ನೋಡಿ ಹೀಗಂದರು ಧೃವ ಸರ್ಜಾ
Posted date: 19 Thu, Mar 2020 09:46:22 AM

ಧೃವ ಸರ್ಜಾ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆದುನಿಂತಿರುವ ನಾಯಕನಟ. ಧೃವಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಾಗ ನಟ ದರ್ಶನ್ ಸಾಕಷ್ಟು ಸಹಕಾರ ನೀಡಿದ್ದರು. ಭರ್ಜರಿ ಚಿತ್ರಕ್ಕೆ ಹಿನ್ನೆಲೆ ಧ್ವನಿ ಕೂಡಾ ನೀಡಿದ್ದರು. ಈಗ ದರ್ಶನ್ ಕುಟುಂಬದ ಹುಡುಗ ಮನೋಜ್ ಹೀರೋ ಆಗಿ ಲಾಂಚ್ ಆಗುತ್ತಿರುವ ಟಕ್ಕರ್ ಚಿತ್ರಕ್ಕೆ ಕನ್ನಡ ಚಿತ್ರರಂಗದ ಸಾಕಷ್ಟು ಜನ ಬೆಂಬಲ ನೀಡಿದ್ದಾರೆ. ಅದರಲ್ಲಿ ಧೃವ ಕೂಡಾ ಒಬ್ಬರು. ಇತ್ತೀಚೆಗೆ ಟಕ್ಕರ್ ಚಿತ್ರದ ಟೀಸರ್ ಮತ್ತು ಹಾಡುಗಳನ್ನು ನೋಡಿದ ಧೃವ ಅಪಾರವಾಗಿ ಮೆಚ್ಚಿ ಮಾತಾಡಿದ್ದಾರೆ.

“ನಮ್ಮ ಕನ್ನಡ ಚಿತ್ರರಂಗಕ್ಕೆ ಛಾಲೆಂಜಿಂಗ್ ಸ್ಟಾರ್ ದರ್ಶನ್ ದೊಡ್ಡ ಆನೆ ಇದ್ದಂತೆ. ಅವರು ನಡೆದಿದ್ದೇ ದಾರಿ. ಹೀಗಿರುವಾಗ ಟಕ್ಕರ್ ಸಿನಿಮಾದಲ್ಲಿ ಆನೆ ನಡೆದಿದ್ದೆ ದಾರಿ ಅಲ್ವೇನ್ರಿ, ಯಾರೂ ಕೊಡಬೇಡಿ ಲೆಕ್ಚರ್... ಎನ್ನುವ ಹಾಡು ರೂಪಿಸಿರುವುದು ತುಂಬಾ ಖುಷಿ ಆಯ್ತು. ಈ ಹಾಡು ಕೂಡಾ ಅಷ್ಟೇ ಅರ್ಥಪೂರ್ಣವಾಗಿ ಮತ್ತು ಆಕರ್ಷಕವಾಗಿ ಮೂಡಿಬಂದಿದೆ. ನಮ್ಮ ಕವಿರತ್ನ ಡಾ ವಿ. ನಾಗೇಂದ್ರ ಪ್ರಸಾದ್ ಅವರು ಅದ್ಭುತವಾದ ಸಾಲುಗಳನ್ನು ಬರೆದಿದ್ದಾರೆ. ಮಣಿಕಾಂತ್ ಕದ್ರಿ ಅವರು ಈ ಮಟ್ಟಕ್ಕೆ ಮಾಸ್ ಸಾಂಗ್ ಮಾಡುತ್ತಾರೆ ಅಂತಾ ನನಗೆ ಈಗ ಗೊತ್ತಾಯ್ತು. ನನ್ನ ಆತ್ಮೀಯ ಗೆಳೆಯ ಮನೋಜ್ ಈ ಸಿನಿಮಾದ ಮೂಲಕ ಕನ್ನಡ ಸಿನಿಮಾರಂಗಕ್ಕೆ ನಾಯಕನಟನಾಗಿ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಹೀರೋ ಆಗಲು ಬೇಕಿರುವ ಹೈಟು, ಪರ್ಸನಾಲಿಟಿ ಎಲ್ಲವೂ ಮನೋಜ್ ಅವರಲ್ಲಿದೆ. ಟಕ್ಕರ್ ಮಾತ್ರವಲ್ಲ ಇನ್ನೂ ಸಾಕಷ್ಟು ಸಿನಿಮಾಗಳಲ್ಲಿ ಮನೋಜ್ ನಟಿಸಲಿದ್ದಾರೆ. ನಮ್ಮೆಲ್ಲರನ್ನೂ ಕೈ ಹಿಡಿದು ಬೆಳೆಸಿದಂತೆ ಮನೋಜ್ ಬ್ರದರ್‌ಗೆ ಕೂಡಾ ಅಭಿಮಾನಿಗಳು ಬೆಂಬಲ ನೀಡಬೇಕು ಎಂದು ಧೃವ ಸರ್ಜಾ ಟಕ್ಕರ್ ಚಿತ್ರತಂಡ ಮತ್ತು ಮನೋಜ್ ಅವರಿಗೆ ಶುಭಾಶಯ ತಿಳಿಸಿದ್ದಾರೆ.

ಎಲ್ಲವೂ ಅಂದುಕೊಂಡಂತೇ ಆಗಿದ್ದರೆ ಇದೇ ಮಾರ್ಚ್ ೨೭ರಂದು ಟಕ್ಕರ್ ರಾಜ್ಯಾದ್ಯಂತ ತೆರೆಗೆ ಬರಬೇಕಿತ್ತು. ಕೊರೋನೋ ವೈರಸ್ ಹಾವಳಿಯಿಂದ ಚಿತ್ರಮಂದಿರ, ಮಾಲ್‌ಗಳು ಬಂದ್ ಆಗಿರುವುದರಿಂದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ದರ್ಶನ್ ಅವರ ನಟನೆಯ, ಬಹು ನಿರೀಕ್ಷಿತ ರಾಬರ್ಟ್ ಚಿತ್ರ ಬಿಡುಗಡೆಯಾದ ನಂತರ ಟಕ್ಕರ್ ತೆರೆಗೆ ಬರಲಿದೆ ಎಂದು ನಿರ್ಮಾಪಕ ಕೆ.ಎನ್. ನಾಗೇಶ ಕೋಗಿಲು ತಿಳಿಸಿದ್ದಾರೆ.

ವಿ. ರಘುಶಾಸ್ತ್ರಿ ನಿರ್ದೇಶನದ ಟಕ್ಕರ್ ಚಿತ್ರದ ಸೈಬರ್ ಕ್ರೈಂ ಸುತ್ತಲಿನ ಕಥಾವಸ್ತುವನ್ನು ಹೊಂದಿದೆ. ಪುಟ್ಟಗೌರಿ ಮದುವೆ ಎನ್ನುವ ಕಿರುತೆರೆ ಧಾರಾವಾಹಿಯ ಮೂಲಕ ಕರ್ನಾಟಕದ ಮನೆಮಗಳಾಗಿರುವ ಹುಡುಗಿ ರಂಜನಿ ರಾಘವನ್. ರಾಜಹಂಸ ಸಿನಿಮಾದ ಮೂಲಕ ನಾಯಕನಟಿಯಾಗಿ ಸಿನಿಮಾರಂಕ್ಕೆ ಬಂದಿರುವ ರಂಜನಿ ನಟನೆಯ ಎರಡನೇ ಸಿನಿಮಾ ಟಕ್ಕರ್. ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನದ ಹಾಡುಗಳಿಗೆ ಡಾ. ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ, ಡಿಫರೆಂಟ್ ಡ್ಯಾನಿ ಸಾಹಸ, ವಿಲಿಯಮ್ಸ್ ಡೇವಿಡ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ಮೋಹನ್ ನೃತ್ಯ ನಿರ್ದೇಶನ, ಈಶ್ವರಿ ಕುಮಾರ್ ಕಲಾ ನಿರ್ದೇಶನ, ಗುರುರಾಜ್ ದೇಸಾಯಿ ಸಂಭಾಷಣೆ ಈ ಚಿತ್ರಕ್ಕಿದೆ. ಮನೋಜ್ ಕುಮಾರ್ ಮತ್ತು ರಂಜನಿರಾಘವನ್, ಕೆ.ಎಸ್. ಶ್ರೀಧರ್, ಶಂಕರ್ ಅಶ್ವಥ್, ಸುಮಿತ್ರಾ, ಭಜರಂಗಿ ಲೋಕಿ, ಸಾಧು ಕೋಕಿಲಾ, ಲಕ್ಷ್ಮಣ್ ಶಿವಶಂಕರ್, ಕುರಿ ಸುನಿಲ್, ಜೈಜಗದೀಶ್ ಮುಂತಾದವರ ತಾರಾಬಳಗವಿದೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಟಕ್ಕರ್ ಹಾಡು ನೋಡಿ ಹೀಗಂದರು ಧೃವ ಸರ್ಜಾ - Chitratara.com
Copyright 2009 chitratara.com Reproduction is forbidden unless authorized. All rights reserved.