Chief Editor
Manohar. R (Manu)
Photo Journalist
chitrataramanu@gmail.com
+91 9845549026
ಪ್ರಮಾಣಿಕ `ಕೋಟಿ`ಯ ಕೋಟಿ ಕನಸು....ರೇಟಿಂಗ್: 4/5 ****
Posted date: 14 Fri, Jun 2024 07:40:57 PM
 ಡಾಲಿ ಧನಂಜಯ್ ಒಬ್ಬ ಕಾಮನ್‌ಮ್ಯಾನ್ ಪಾತ್ರವನ್ನು ಅಷ್ಟೇ ಸಲೀಸಾಗಿ ನಿರ್ವಹಿಸಬಲ್ಲ ನಟ. ಕೋಟಿ ಚಿತ್ರದಲ್ಲಿ ಅವರು ಕೋಟಿ ಎಂಬ ಸಾಮಾನ್ಯ ಯುವಕನ ಪಾತ್ರವನ್ನು ಲೀಲಾಜಾಲವಾಗಿ ನಿರ್ವಹಿಸಿದ್ದಾರೆ. ಇದೇ ಮೊದಲಬಾರಿಗೆ ಜಿಯೋ ಸ್ಟುಡಿಯೋಸ್ ಕೋಟಿ ಮೂಲಕ ಕನ್ನಡ ಸಿನಿಮಾವೊಂದಕ್ಕೆ ಬಂಡವಾಳ ಹೂಡಿದೆ.  ಈ ಚಿತ್ರಕ್ಕೆ ಪರಮ್ ನಿರ್ದೇಶನವಿದ್ದು,  ಅವರಿಗೂ ಇದು ಮೊದಲ ಪ್ರಯತ್ನ. ತಮ್ಮನ ಜೀವನ ರೂಪಿಸುವುದು, ತಂಗಿಗೊಂದು ಮದುವೆ ಮಾಡುವುದು ಜೊತೆಗೆ ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಇದರ ಜೊತೆಗೆ ಎಷ್ಟೇ ಕಷ್ಟಗಳು ಬಂದರೂ, ನಿಯತ್ತಿನಿಂದ ದುಡಿದ ಹಣದಿಂದಲೇ ಅವೆಲ್ಲವನ್ನೂ ಬಗೆಹರಿಸುವೆ ಎಂಬ ಛಲ ಕೋಟಿ(ಧನಂಜಯ್ )ಯದು. 
 
ಅಕ್ರಮದ ಹಾದಿಯಲ್ಲಿ ಹೇಗೆಲ್ಲಾ ಹಣ ದುಡಿಯಬಹುದು ಎಂದು ತೋರಿಸಿಕೊಟ್ಟರೂ ಸಹ, ಕೋಟಿ ಯಾವತ್ತೂ ಅದರತ್ತ ಹೆಜ್ಜೆ ಇಡುವವನಲ್ಲ. ಯಾವುದೇ ಅಡ್ಡದಾರಿ ಹಿಡಿಯದೆ ಹೇಗೆ ಪ್ರಾಮಾಣಿಕತೆಯಿಂದ ಒಂದು ಕೋಟಿ ರೂ. ಗಳಿಸಬೇಕೆಂಬ ಪ್ರಶ್ನೆಗೆ ಆತ ಉತ್ತರ ಹುಡುಕುತ್ತಿರುತ್ತಾನೆ. ಆದರೆ ಇಂಥ ಕೋಟಿಗೆ ದೊಡ್ಡ ಆರ್ಥಿಕ ಸಂಕಷ್ಟಗಳೇ ಎದುರಾಗುತ್ತವೆ. ಅದೂ ಒಂದೆರಡಲ್ಲ, ಆತನ ಈ ಹೋರಾಟವೇ ಕೋಟಿ ಚಿತ್ರದ ಮೂಲಕಥೆ, ತನ್ನ ಬದುಕಿನಲ್ಲಿ ನಡೆಯುವ ಇಂತಹ ಆರ್ಥಿಕ ದಾಳಿಯನ್ನು ಅಮಾಯಕ ಕೋಟಿ ಹೇಗೆ ಎದುರಿಸುತ್ತಾನೆ ಅನ್ನೋದೇ ಕೌತುಕ. ಕೊನೆಗೆ ಹಣ ಸಂಪಾದಿಸಲು ಆತ ಯಾವಹಾದಿ ಹಿಡಿಯುತ್ತಾನೆ, ಅದು ಆತನನ್ನು ಎಲ್ಲಿಗೆ ತಗೊಂಡು ಹೋಗುತ್ತೆ ಅಂತ ನಿರ್ದೇಶಕರು  ಹೇಳುತ್ತಾರೆ.  
 
ಪರಮ್, ಆರಂಭದಲ್ಲಿ ಪತ್ರಕರ್ತರಾಗಿದ್ದವರು, ನಂತರ ಕಿರುತೆರೆಯಲ್ಲಿ ಅನೇಕ ಯಶಸ್ವಿ ಧಾರಾವಾಹಿಗಳನ್ನು ನಿರ್ವಹಿಸಿದರು, ಇದೇ ಮೊದಲಬಾರಿಗೆ ಪೂರ್ಣ ಪ್ರಮಾಣದ ಚಿತ್ರ ನಿರ್ದೇಶಿಸಿ ತೆರೆಗೆ ತಂದಿದ್ದಾರೆ. ಕೋಟಿಯ ಕಥೆ ಸಿಂಪಲ್ಲಾದರೂ, ಅದನ್ನು ಹೊಸ ಶೈಲಿಯಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ. ಅದಕ್ಕಾಗಿ ಜನತಾಸಿಟಿ ಎಂಬ ಕಾಲ್ಪನಿಕ ಊರನ್ನೇ ಸೃಷ್ಟಿಸಿದ್ದಾರೆ. ಆದರೆ ಪ್ರತಿಯೊಂದಕ್ಕೂ ಸುದೀರ್ಘ ವಿವರಣೆ ನೀಡುತ್ತ ಸಾಗುವುದು ನೋಡುಗರ ತಾಳ್ಮೆಗೆ ಸವಾಲೊಡ್ಡುತ್ತದೆ. 
 
ದುಡ್ಡಿನ ಹಿಂದೆ ಹೀರೋ ಓಡುವುದರಿಂದ ಇದನ್ನು ಸಸ್ಪೆನ್ಸ್,  ಥ್ರಿಲ್ಲರ್ ಬದಲು ಫೈನಾನ್ಸ್ ಥ್ರಿಲ್ಲರ್ ಸಿನಿಮಾ ಅನ್ನಬಹುದು,   ಇದರಲ್ಲಿ ಫ್ಯಾಮಿಲಿ ಡ್ರಾಮಾ‌ ಜೊತೆ ಪ್ರೇಮಕಥೆಯೂ ಇದೆ.
 
ಇನ್ನು, ಪರಮ್ ತಮ್ಮ ಮೊದಲ ಚಿತ್ರಕ್ಕೆ ಆಯ್ಕೆಮಾಡಿಕೊಂಡ ತಂತ್ರಜ್ಞರು ತಮ್ಮ ಪಾಲಿನ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ವಾಸುಕಿ ವೈಭವ್ ಸಂಗೀತದ `ಸಖಿಯೇ ಸಖಿಯೇ..` ಹಾಡು ಗುನುಗುವಂತಿದ್ದರೆ, ನೋಬಿನ್‌ಪೌಲ್ ಅವರ ಹಿನ್ನೆಲೆ ಸಂಗೀತ  ಚಿತ್ರಕ್ಕೆ ಹೊಸ ರೂಪವನ್ನೇ ತಂದುಕೊಟ್ಟಿದೆ,  
 
ಪ್ರತಿ ಚಿತ್ರದಲ್ಲೂ ವಿಭಿನ್ನ ಪಾತ್ರಗಳ ಮೂಲಕ ಗಮನಸೆಳೆಯುವ ಧನಂಜಯ್ ಅವರಿಗೆ ಇಲ್ಲಿ  ನಟನೆಗೆ ಸವಾಲೊಡ್ಡುವಂತಹ ಪಾತ್ರವೇ ಸಿಕ್ಕಿದೆ. ಅದನ್ನವರು ಚೆನ್ನಾಗಿಯೇ ಉಪಯೋಗಿಸಿಕೊಂಡಿದ್ದಾರೆ.  ಡ್ಯಾನ್ಸ್, ಫೈಟ್ ಜೊತೆಗೂ  ಅವರು ಪ್ರೇಕ್ಷಕರನ್ನು ನಗಿಸುತ್ತಾರೆ. ಅಷ್ಟೇ ಅಳಿಸುತ್ತಾರೆ ಕೂಡ,  ಪರಿಸ್ಥಿತಿಗೆ ಸಿಲುಕಿ ನರಳುವ ಕೋಟಿ, ನೋಡಗರನ್ನು ಹೆಚ್ಚು ಆಕರ್ಷಿಸುವುದು ತನ್ನ ಮುಗ್ಧತೆ ಮತ್ತು ನಿಷ್ಕಲ್ಮಶ ನಗುವಿನಿಂದ. ಇನ್ನು, ಇವರಷ್ಟೇ ತೂಕದ ಪಾತ್ರದಲ್ಲಿ ಮಿಂಚಿರುವುದು ನಟ ರಮೇಶ್ ಇಂದಿರಾ. ದಿನೂ ಸಾವ್ಕಾರ್  ಎಂಬ ಖಳನಾಗಿ ಇಡೀ ಸಿನಿಮಾವನ್ನು ಆಕ್ರಮಿಸಿಕೊಳ್ಳುತ್ತಾರೆ. ಅಮ್ಮನಾಗಿ ತಾರಾ ಅವರದ್ದು ಭಾವುಕ ನಟನೆ. ತಂಗಿ ತನುಜಾ ವೆಂಕಟೇಶ್ ಮತ್ತು ಸಹೋದರನಾಗಿ ಪೃಥ್ವಿ ಶಾಮನೂರು ಚೆನ್ನಾಗಿ ನಟಿಸಿದ್ದಾರೆ. ನಾಯಕಿ ಮೋಕ್ಷಾ ಕುಶಾಲ್ ಸಿಕ್ಕ ಅವಕಾಶವನ್ನು ಸದ್ಭಳಕೆ ಮಾಡಿಕೊಂಡಿದ್ದಾರೆ. ರಂಗಾಯಣ ರಘು ಅವರು ರಾಮಣ್ಣನ ಪಾತ್ರವನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಪ್ರಮಾಣಿಕ `ಕೋಟಿ`ಯ ಕೋಟಿ ಕನಸು....ರೇಟಿಂಗ್: 4/5 **** - Chitratara.com
Copyright 2009 chitratara.com Reproduction is forbidden unless authorized. All rights reserved.