"ದೇವ್ರು ಯಾವಾಗ್ಲೂ ಬರಲ್ಲ, ಸಮಾಜದಲ್ಲಿ ಪಾಪಗಳು ಮಿತಿಮೀರಿದಾಗ, ಸಮಾಜ ಕುಲಗೆಟ್ಟಾಗ, ಮನುಷ್ಯರು ಮೃಗಗಳಾದಾಗ, ಅವನು ಅವತಾರ ಎತ್ತುತ್ತಾನೆ. ಅವನು ಯಾವುದೇ ರೂಪದಲ್ಲಾದರೂ ಬರಬಹುದು. ರಾಕ್ಷಸನಾಗೂ ಬರಬಹುದು" ಆ ದೇವರು ಯಾಕಮ್ಮ ಯಾವಾಗ್ಲೂ ಬರಲ್ಲ ಎಂದು ಮುಗ್ಧವಾಗಿ ಕೇಳುವ ಮಗನಿಗೆ ತಾಯಿ ಹೇಳುವ ಮಾತಿದು.
ಜನ್ರನ್ನು ಕಾಪಾಡೋದಿಕ್ಕೆ ಖಾಕಿನೇ ಹಾಕಬೇಕೆಂದಿಲ್ಲ, ಕಾಪಾಡೋ ಮನಸ್ಸಿದ್ರೆ ಸಾಕು ಆ ತಾಯಿ ಹೇಳೋ ಒಂದು ಮಾತಲ್ಲಿ ಬಘೀರ ಚಿತ್ರದ ಕಥೆಯಿದೆ.
ಪ್ರಾಮಾಣಿಕ ಪೊಲೀಸ್ ಅಧಿಕಾರಿ, ಸಮಾಜ ಕಂಟಕರನ್ನು ಮಟ್ಟ ಹಾಕಲು, ಜನರ ಹಿತ ಕಾಯಲು ಹೊರಟಾಗ, ಮೇಲಾಧಿಕಾರಿಗಳಿಂದ ಬರುವ ಆದೇಶ ಆತನ ಕೈ ಕಟ್ಟಿಹಾಕುತ್ತದೆ. ಆಗ ಆತ ತನ್ನದೇ ಆದ ಮಾರ್ಗ ಹುಡುಕಿಕೊಳ್ಳುತ್ತಾನೆ, ಈ ಸ್ಟೋರಿ ಲೈನ್ ಹೊಸದೇನಲ್ಲ, ಆದರೆ ಆ ಕಥೆಯನ್ನು ನಿರ್ದೇಶಕರು ಹೇಳಿರುವ ಶೈಲಿ ನೋಡುಗನಿಗೆ ಇಷ್ಟವಾದರೆ ಸಾಕು, ಆ ಚಿತ್ರ ಗೆದ್ದಂತೆಯೇ, ಈವಾರ ತೆರೆಕಂಡಿರುವ ಬಘೀರ ಸಿನಿಮಾ ಕೂಡ ತನ್ನ ಮೇಕಿಂಗ್, ನರೇಷನ್ ಮೂಲಕವೇ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ. ಸೂಪರ್ ಹೀರೋ ಅನ್ನಬಹುದು. ಹಾಗಂತ ಇದು ಸೂಪರ್ ಮ್ಯಾನ್, ಸ್ಪೈಡರ್ ಮ್ಯಾನ್ ಕಥೆಯಲ್ಲ. ನಿಷ್ಠಾವಂತ ಪೊಲೀಸ್ ಅಧಿಕಾರಿಯಾಗಿದ್ದ ವೇದಾಂತ್(ಶ್ರೀಮುರಳಿ) ಸೂಪರ್ ಹೀರೋ ಹೇಗಾಗ್ತಾನೆ, ಯಾಕಾಗ್ತಾನೆ ಅನ್ನೋದರ ಮೇಲೆ ಇಡೀ ಸಿನಿಮಾದ ಕಥೆ ಸಾಗುತ್ತದೆ, ಇದೊಂದು ಸಿಂಪಲ್ ಸ್ಟೋರಿ ಎನಿಸಿದರೂ, ವಿಶೇಷವಾಗುವುದು ತನ್ನ ಮೇಕಿಂಗ್ ಮತ್ತು ನೆರೇಶನ್‌ನಿಂದ. ಬಘೀರ ಸೂಪರ್ ಹೀರೋ, ಹಾಗಂತ ಆತನಲ್ಲಿ ಯಾವುದೇ ಅತೀಂದ್ರಿಯ ಶಕ್ತಿ ಇರೋದಿಲ್ಲ, ತನ್ನ ಸಾಮರ್ಥ್ಯ ಮತ್ತು ಬುದ್ಧಿಶಕ್ತಿಯನ್ನೇ ಅಸ್ತ್ರವನ್ನಾಗಿಸಿಕೊಂಡು, ದುರುಳರನ್ನು ಅಂತ್ಯಗೊಳಿಸುತ್ತಾನೆ. ಸಿಂಹಸ್ವಪ್ನವಾಗುತ್ತಾನೆ,
ನಾಯಕ ವೇದಾಂತ್(ಶ್ರೀಮುರುಳಿ) ಚಿಕ್ಕಂದಿನಿಂದಲೇ ಸೂಪರ್ ಹೀರೋ ಸಾಹಸಗಳ ಬಗ್ಗೆ ತನ್ನ ತಾಯಿ(ಸುಧಾರಾಣಿ)ಯಿಂದ ತಿಳಿದುಕೊಳ್ಳುತ್ತಾನೆ, ಈತನ ತಂದೆಯೂ ಸಹ ಪೊಲೀಸ್. ಐಪಿಎಸ್ ತರಬೇತಿ ಮುಗಿಸಿಕೊಂಡ ವೇದಾಂತ್, ಅಸಿಸ್ಟೆಂಟ್ ಪೊಲೀಸ್ ಕಮೀಷನರ್ ಆಗಿ ಮಂಗಳೂರು ನಗರಕ್ಕೆ ಎಂಟ್ರಿ ಕೊಡುತ್ತಾನೆ, ಹಣದಿಂದ ಇಡೀ ಪೊಲೀಸ್ ವ್ಯವಸ್ಥೆಯನ್ನೇ ತನ್ನ ಕಪಿಮುಷ್ಟಿಯಲ್ಲಿಟ್ಟುಕೊಂಡಿದ್ದ ಪೂಜಾರಿ, ಕೊಟ್ಯಾನ್ (ಪ್ರಮೋದ್ ಶೆಟ್ಟಿ)ಯಂಥ ಡಾನ್ ಗಳನ್ನು ಬಘೀರನ ಅವತಾರದಲ್ಲಿ ಹೆಡೆಮುರಿ ಕಟ್ಟಿ ಹಾಕುತ್ತಾನೆ. ಆದರೆ ಇದೆಲ್ಲದರ ಮೇನ್ ಕಿಂಗ್ ಪಿನ್ ರಾಣಾ(ಗರುಡರಾಮ್). ವ್ಯವಸ್ಥೆ ಸರಿಪಡಿಸಲು ಹೋದ ವೇದಾಂತ್‌ಗೆ ತನ್ನ ತಂದೆಯೇ ಲಂಚ ಕೊಟ್ಟು ತನಗೆ ಕೆಲಸಕ್ಕೆ ಕೊಡಿಸಿರೋದು ಗೊತ್ತಾಗುತ್ತದೆ, ಅಧಿಕಾರದಲ್ಲಿದ್ದುಕೊಂಡು ತಾನೇನೂ ಮಾಡದ ಪರಿಸ್ಥಿತಿಯಲ್ಲಿ ವೇದಾಂತ್, ಅನ್ಯಾಯಕ್ಕೊಳಗಾದ ಜನರ ರಕ್ಷಣೆಗೆ ತನ್ನದೇ ಆದ ಮಾರ್ಗವನ್ನು ಹುಡುಕಿಕೊಳ್ಳುತ್ತಾನೆ. ಅದೇ ಬಘೀರನ ಅವತಾರ. ನಟ ಶ್ರೀಮುರುಳಿ, ತೆರೆಮೇಲೆ ಆರಂಭದಲ್ಲಿ ಪೊಲೀಸ್, ನಂತರ ಅವರ ಮತ್ತೊಂದು ಶೇಡ್ ಅನಾವರಣಗೊಳ್ಳುತ್ತದೆ, ಸಾಹಸ ದೃಶ್ಯಗಳಲ್ಲಿ ಅವರು ಹಾಕಿರುವ ಎಫರ್ಟ್ ತೆರೆಮೇಲೆ ಎದ್ದು ಕಾಣಿಸುತ್ತದೆ. ಡಾಕ್ಟರ್ ಸ್ನೇಹಾ ಪಾತ್ರದಲ್ಲಿ ರುಕ್ಮಿಣಿ ವಸಂತ್ ನಾಯಕನ ಸಾಧನೆಗೆ ಬೆಂಬಲವಾಗಿ ನಿಲ್ಲುತತಾಳೆ. ಪ್ರೇಮಿಯಾಗಿ ಬಂದ ಸ್ನೇಹಾ ಕೊನೆಯಲ್ಲಿ ತನ್ನ ಜೀವವನ್ನೇ ತೊರೆಯುವ ದೇಶಪ್ರೇಮಿಯಾಗಿ ನೋಡುಗರ ಮನದಲ್ಲುಳಿಯುತ್ತಾಳೆ.
ಹಿರಿಯನಟ ಪ್ರಕಾಶ್‌ರಾಜ್ ಸಿಬಿಐ ಅಧಿಕಾರಿಯಾಗಿ ಇಂಟರ್ವೆಲ್ ಬ್ಲಾಕ್ ನಲ್ಲಿ ಬರುತ್ತಾರೆ. ತಮ್ಮ ಪಾತ್ರವನ್ನು ಲೀಲಾಜಾಲವಾಗಿ ನಿಭಾಯಿಸಿದ್ದಾರೆ. ಕಥೆಗೆ ಮಹತ್ವದ ತಿರುವು ಸಿಗುವುದೇ ಇವರ ಪಾತ್ರದಿಂದ. ಅದೇರೀತಿ ಹಿರಿಯ ಪೊಲೀಸ್ ಕಾನ್ಸ್ಟೇಬಲ್ ಆಗಿ ರಂಗಾಯಣ ರಘು ಇಷ್ಟವಾಗುತ್ತಾರೆ. ನಾಯಕನ ತಂದೆ, ತಾಯಿಯಾಗಿ ಅಚ್ಯುತ್‌ಕುಮಾರ್, ಸುಧಾರಾಣಿ ಗಮನ ಸೆಳೆಯುತ್ತಾರೆ, ಕೇಂದ್ರ ಮಂತ್ರಿಯಾಗಿ ಶರತ್ ಲೋಹಿತಾಶ್ವ, ಕಮೀಷನರ್ ಆಗಿ ಸಿದ್ಲಿಂಗು ಶ್ರೀಧರ್, ಪ್ರಾಮಾಣಿಕ ಪತ್ರಕರ್ತನಾಗಿ ಅಶ್ವಿನ್‌ಹಾಸನ್ ಇವರೆಲ್ಲ ತಮಗೆ ಸಿಕ್ಕ ಅವಕಾಶದಲ್ಲೇ ಉತ್ತಮ ಅಭಿನಯ ನೀಡುವ ಮೂಲಕ ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ. ಇವರೆಲ್ಲರ ಪಾತ್ರ ಪೋಷಣೆಯೇ ಚಿತ್ರಕ್ಕೆ ಪ್ಲಸ್ ಆಗಿದೆ,
ಕಥೆಗಾರ ಪ್ರಶಾಂತ್‌ನೀಲ್ ಈಸಲ ಮಂಗಳೂರು ಬಂದರಲ್ಲಿ ಇಡೀ ಕಥೆಯನ್ನು ಹೇಳಿ ಮುಗಿಸಿದ್ದಾರೆ. ಇಂಟರ್‌ನ್ಯಾಷನಲ್ ಲೆವೆಲ್‌ನಲ್ಲಿ ನಡೆಯುವ ಹ್ಯೂಮನ್ ಟ್ರಾಫಿಕ್ ಸುತ್ತ ನಡೆಯುವ ಕಥೆಯನ್ನು ತೆರೆದಿಟ್ಟಿದ್ಧಾರೆ. ಪ್ರಶಾಂತ್‌ನೀಲ್ ಬರೆದ ಕಥೆಯನ್ನು ನಿರ್ದೇಶಕ ಡಾ.ಸೂರಿ ಅಷ್ಟೇ ಅಚ್ಚುಕಟ್ಟಾಗಿ ತೆರೆಮೇಲೆ ಮೂಡಿಸಿದ್ದಾರೆ. ಅವರ ಚುರುಕಾದ ಸಂಭಾಷಣೆ ಮತ್ತು ಚಿತ್ರಕಥೆಯಲ್ಲಿ ಹಿಡಿತವಿದೆ. ಚಿತ್ರದ ಪಂಚಿಂಗ್ ಡೈಲಾಗ್‌ಗಳು ಇಷ್ಟವಾಗುತ್ತವೆ, ಸಿನಿಮಾದ ಮತ್ತೊಬ್ಬ ಹೀರೋ ಅಂದ್ರೆ, ಸ್ಟಂಟ್ ಮಾಸ್ಟರ್ ಚೇತನ್ ಡಿಸೋಜಾ. ಬಹಳ ವಿಶೇಷ ಎನಿಸುವ ಸಾಹಸ ಸನ್ನಿವೇಶಗಳನ್ನು ಕಂಪೋಸ್ ಮಾಡಿದ್ದಾರೆ.
ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹಾಡುಗಳಿಗಿಂತ ಹಿನ್ನೆಲೆ ಸಂಗೀತದಿಂದಲೇ ಹೆಚ್ಚು ಇಷ್ಟವಾಗುತ್ತಾರೆ. ಕಥಾನಾಯಕ ಯಾಕೆ ಬಘೀರ ಆಗುತ್ತಾನೆ ಎಂದು ತೋರಿಸಿರುವ ದೃಶ್ಯ ಪರಿಣಾಮಕಾರಿಯಾಗಿದೆ, ನಿರ್ದೇಶಕ ಡಾ.ಸೂರಿ ಮತ್ತವರ ತಂಡ ಚಿತ್ರಕ್ಕಾಗಿ ಸಾಕಷ್ಟು ಶ್ರಮ ಹಾಕಿರುವುದು ಇಲ್ಲಿ ಗೊತ್ತಾಗುತ್ತದೆ.
ಚಿತ್ರದ ಮೊದಲಾರ್ಧ ಬಘೀರ ಮತ್ತು ದುಷ್ಟರ ನಡುವಿನ ಹೋರಾಟದಲ್ಲಿ ಮುಗಿದರೆ, ದ್ವಿತೀಯಾರ್ಧದಲ್ಲಿ ಸಿಬಿಐ ಪ್ರವೇಶವಾಗುತ್ತದೆ. ಒಂದು ಕಡೆ ಬಘೀರ ದುಷ್ಟರ ವಿರುದ್ಧ ತಿರುಗಿಬಿದ್ದರೆ, ಇನ್ನೊಂದು ಕಡೆ ಸಿಬಿಐ, ಬಘೀರನ ಹಿಂದೆ ಬೀಳುತ್ತದೆ. ಈ ಸವಾಲಿನಲ್ಲಿ ಬಘೀರ ಏನೆಲ್ಲ ಮಾಡುತ್ತಾನೆ ಎನ್ನುವುದೇ ಕಥೆ.