ಚಿತ್ರ : ಭುವನಂ ಗಗನಂ
ನಿರ್ದೇಶನ : ಗಿರೀಶ್ ಮೂಲಿಮನಿ
ನಿರ್ಮಾಣ: ಎಂ.. ಮುನೇಗೌಡ
ಸಂಗೀತ : ಗುಮ್ಮಿನೇನಿ ವಿಜಯ್
ಛಾಯಾಗ್ರಹಣ : ಉದಯ್ ಲೀಲಾ
ತಾರಾಗಣ : ಪೃಥ್ವಿ ಅಂಬಾರ್, ಪ್ರಮೋದ್ , ರೆಚೆಲ್ ಡೇವಿಡ್, ಅಶ್ವಥಿ , ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ , ಕೆ .ಎಸ್. ಶ್ರೀಧರ್, ಹರಿಣಿ, ಸ್ಪರ್ಶ ರೇಖಾ ಹಾಗೂ ಇತರರು...
ಈ ವಾರ ತೆರೆಕಂಡಿರುವ ಭುವನಂ ಗಗನಂ ಭಾವನಾತ್ಮಕ ಪಯಣದಲ್ಲಿ ಸಾಗುವ ಕಥೆ. ಚಿತ್ರದಲ್ಲಿ ನಿರ್ದೇಶಕ ಗಿರೀಶ್ ಅವರು ಆಯ್ಕೆ ಮಾಡಿಕೊಂಡಿರುವ ವಿಷಯಗಳು, ಕಥಾ ನಿರೂಪಣೆ ವೀಕ್ಷಕರಿಗೆ ತಣ್ಣನೆಯ ಅನುಭವ ನೀಡುತ್ತದೆ. ಜೀವನವೆಂಬ ಪಯಣದಲ್ಲಿ ಹಲವಾರು ಏಳುಬೀಳುಗಳು ಎದುರಾಗುವುದು ಸಹಜ. ಎರಡು ಕುಟುಂಬಗಳ ಪ್ರೀತಿ, ಬಾಂಧವ್ಯ, ತಳಮಳಗಳ ನಡುವೆ ಎದುರಾಗುವ ಘಟನೆಗಳ ಸುತ್ತ ಸಾಗುವ ಕಥೆ, ಭೂಮಿ, ಆಕಾಶದಂತೆ ಎರಡೂ ಕಣ್ಣೆದುರೇ ಕಂಡರೂ ಅವುಗಳ ಕಾರ್ಯವೈಖರಿ ವಿಭಿನ್ನ ಎನ್ನುವಂತೆ ಪ್ರೀತಿ , ಸಂಬಂಧಗಳ ನೋವು , ನಲಿವಿನ ರೂಪಕವಾಗಿ ಈ ವಾರ ಪ್ರೇಕ್ಷಕರು ಮುಂದೆ ಬಂದಿರುವ ಚಿತ್ರ "ಭುವನಂ ಗಗನಂ".
ಆರಂಭದಿಂದಲೂ ಸಾವಧಾನವಾಗಿ ಸಾಗುವ ಕಥೆ ಇಂಟರ್ ವೆಲ್ ವೇಳೆಗೆ ತಿರುವು ಪಡೆದುಕೊಳ್ಳುತ್ತದೆ. ಹಾಗೆ ನೋಡಿದರೆ ಅಲ್ಲಿಂದಲೇ ನಿಜವಾದ ಕಥೆ ಆರಂಭವಾಗುವುದು. ಪ್ರಮೋದ್ ಹಾಗೂ ಪೃಥ್ವಿ ಇವರಿಬ್ಬರ ಕ್ಯಾರೆಕ್ಟರ್ ಆಶಯ ವಿಭಿನ್ನ. ಆದರೆ ಇಬ್ಬರ ಪಯಣವೂ ಒಂದೇ ಕಡೆ ಸಾಗುತ್ತದೆ.
ತಾಯಿಯ ಅಸ್ಥಿಯನ್ನು ವಿಸರ್ಜಿಸಲು ರಾಮ, ಪ್ರೇಮಿಯನ್ನು ಹುಡುಕಿಕೊಂಡು ಅಭಿ ಇಬ್ಬರೂ ಕನ್ಯಾಕುಮಾರಿಗೆ ಹೊರಟಿರುತ್ತಾರೆ. ಆ ಜರ್ನಿಯಲ್ಲಿ ನಡೆಯುವ ಘಟನೆಗಳು, ಅನುಭವಗಳ ಚಿತ್ರಣ ಭುವನಂ ಗಗನಂ ಸಿನಿಮಾದ ಹೈಲೈಟ್.
ಮಾನಸಿಕ ಅಸ್ವಸ್ಥ ರಾಮ(ಪೃಥ್ವಿ ಅಂಬಾರ್)ನ ಪಾತ್ರಪೋಷಣೆ ವೀಕ್ಷಕರ ಸಹಾನುಭೂತಿಯನ್ನು ಪಡೆಯುತ್ತದೆ. ಆ ಪಾತ್ರವನ್ನು ಮತ್ತಷ್ಟು ನೈಜವಾಗಿ ಕಟ್ಟಿ ಕೊಡಬಹುದಿತ್ತು. ಆತನ ಮಾನಸಿಕ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ನೃತ್ಯ ಮತ್ತು ಹೋರಾಟದ ದೃಶ್ಯಗಳಲ್ಲಿ ಆತನ ಪ್ರಾವೀಣ್ಯತೆ ಆಶ್ಚರ್ಯಕರ ಎನಿಸುತ್ತದೆ.
ಕಾಲೇಜು ವಿದ್ಯಾರ್ಥಿ ಅಭಿ(ಪ್ರಮೋದ್ ) ಜವಾಬ್ದಾರಿಗಳನ್ನು ನಿಭಾಯಿಸುವ ಸೂಕ್ಷ್ಮ ಮನಸ್ಥಿತಿಯ ಯುವಕನಾಗಿ ಪ್ರೇಕ್ಷಕರ ಗಮನ ಸೆಳೆಯುತ್ತಾರೆ. ತನ್ನ ಹಿಂದಿನ ಚಿತ್ರಗಳಿಗಿಂತ ಇಲ್ಲಿ ಅವರ ಅಭಿನಯದಲ್ಲಿ ಪ್ರಬುದ್ದತೆ ಎದ್ದು ಕಾಣಿಸುತ್ತದೆ. ರಾಮನ ಪಾತ್ರದಲ್ಲಿ ಪೃಥ್ವಿ ಅಂಬಾರ್ ಸವಾಲಿನ ಪಾತ್ರವನ್ನು ನಿಭಾಯಿಸಿದ್ದಾರೆ, ನಾಯಕಿಯಾಗಿ ರಾಚೆಲ್ ಡೇವಿಡ್, ಉಳಿದಂತೆ ಅಚ್ಯುತ್ ಕುಮಾರ್ ಮತ್ತು ಶರತ್ ಲೋಹಿತಾಶ್ವ ಅವರ ಪಾತ್ರ ಪೋಷಣೆ, ನಿರೂಪಣೆ ಚಿತ್ರದ ತೂಕವನ್ನು ಹೆಚ್ಚಿಸಿದೆ. ವಿಶೇಷವಾಗಿ ಕೌಟುಂಬಿಕ ಸಂಬಂಧಗಳ ಸಂಕೀರ್ಣತೆಯನ್ನು ಚಿತ್ರಿಸುವಲ್ಲಿ ನಿರ್ದೇಶಕರು ಪ್ರೇಕ್ಷಕರ ಮನಸನ್ನು ಗೆಲ್ಲುತ್ತಾರೆ.
ಚಿತ್ರದ ಹೈಲೈಟ್ ಎಂದರೆ ಸುಂದರವಾದ ಛಾಯಾಗ್ರಹಣ, ಚಿತ್ರದ ಭಾವನಾತ್ಮಕ ಪಯಣಕ್ಕೆ ಪೂರಕವಾದ ದೃಶ್ಯಗಳನ್ನು ಕ್ಯಾಮೆರಾಮ್ಯಾನ್ ಕಟ್ಟಿಕೊಟ್ಟಿದ್ದಾರೆ. ಮತ್ತೊಂದು ಹೈಲೈಟ್ ಆಗಿ ಚಿತ್ರದ ಉತ್ತಮ ಸಂಗೀತ ಸಂಯೋಜನೆ ಕೆಲಸ ಮಾಡಿದೆ. ಇವೆರಡೂ ಪ್ರೇಕ್ಷಕರಿಗೆ ಖುಷಿ ಕೊಡುತ್ತವೆ.
ಭುವನಂ ಗಗನಂ ಇದು ಮಾನವನ ಸಂಬಂಧ ಮತ್ತು ಬೆಳವಣಿಗೆಯ ಬಗ್ಗೆ ಹೊಸ ದೃಷ್ಟಿಕೋನವನ್ನು ನೀಡುತ್ತದೆ, ಅದು ಜರ್ನಿಯ ನಿಜವಾದ ಪರಿಣಾಮವನ್ನು ಹೇಳುತ್ತದೆ. ಗಮ್ಯಸ್ಥಾನವು ನಿಜವಾಗಿಯೂ ಪ್ರಾಮುಖ್ಯತೆಯನ್ನು ಹೊಂದಿದೆಯೇ ಅಥವಾ ಅದು ನಮ್ಮನ್ನು ವ್ಯಾಖ್ಯಾನಿಸುವ ಮಾರ್ಗದಲ್ಲಿನ ಸಂಬಂಧಗಳು ಮತ್ತು ಬೆಳವಣಿಗೆಯ ಬಗ್ಗೆ ಹೇಳುತ್ತದೆ. ಮಾನಸಿಕ ಅಸ್ವಸ್ಥನ ಪಾತ್ರವನ್ನು ಪೃಥ್ವಿ ಅಂಬಾರ್ ಉತ್ತಮವಾಗಿ ನಿಭಾಯಿಸಿದ್ದಾರೆ.