ಇದು ಒಂದು ಲೆಕ್ಕದಲ್ಲಿ ಕನ್ನಡದ ದಾಖಲೆ. ಒಂದೇ ಚಿತ್ರದಲ್ಲಿ ನೀವು ಬರೋಬ್ಬರಿ ನೂರಾರು ಜನಪ್ರಿಯ ಕಲಾವಿದರನ್ನು ನೋಡುವ ಭಾಗ್ಯ ಎಲ್ಲಾದರೂ ಉಂಟೆ? ಈಗ ನಿಮ್ಮಲ್ಲಿ ಮೂಡಿರುವ ಏಕೈಕ ಪ್ರಶ್ನೆ-ಹೀಗೂ ಉಂಠೇ?!
ಉಂಟು ಎನ್ನುತ್ತಿದೆ ಐತಲಕ್ಕಡಿ. ಇಲ್ಲಿ ಸಾಲು ಸಾಲಾಗಿ ನಟರಿದ್ದಾರೆ. ಸುದೀಪ್, ವಿಜಯ್, ಜಗ್ಗೇಶ್, ರವಿಚಂದ್ರನ್, ವಿಜಯರಾಘವೇಂದ್ರು, ದರ್ಶನ್... ಹೀಗೆ ಹಿರಿಯ ನಟರಿಂದ ಹಿಡಿದು, ಈಗ ಆಗ ರೆಕ್ಕೆ ಬಿಚ್ಚಿಕೊಳ್ಳುತ್ತಿರುವ-ದೀಪಕ್, ಚೇತನ್, ತರುಣ್, ಸೃಜನ್, ನವೀನ್‌ಕೃಷ್ಣ ಮೊದಲಾದವರೂ ಇದ್ದಾರೆ. ಇವರ ಜೊತೆ ಸಾಧುಕೋಕಿಲಾ, ಶರಣ್, ಮಳವಳ್ಳಿ ಸಾಯಿಕೃಷ್ಣ, ಓಮ್ ಪ್ರಕಾಶ್ ರಾವ್ ಮೊದಲಾದ ಕಾಮಿಡಿಯನ್‌ಗಳೂ ಇದ್ದಾರೆ. ನಾಯಕಿಯ ಸ್ಥಾನದಲ್ಲಿರುವ ನೀತು ಆಗ ಈಗ ಬಂದುಹೋಗುತ್ತಾರೆ. ರವಿಚಂದ್ರನ್ ಜೊತೆ ಒಂದು ಹಾಡಿಗೆ ಹೆಜ್ಜೆ ಹಾಕುತ್ತಾರೆ. ಹೂ ಮಾರೋ ಹುಡುಗಿ ಅತಿಯಾದ ಮೇಕಪ್ ಮಾಡಿಕೊಳ್ಳುತ್ತಾರೆ ಎಂಬುದೇ ಒಂದು ನಗು ಬರಿಸುವ ಸುದ್ದಿ. ಇಲ್ಲಿಯವರೆಗೆ ಕಾಮಿಡಿ ಮಾಡಿಕೊಂಡಿದ್ದ ಬುಲೆಟ್ ಪ್ರಕಾಶ್ ಹಾಗೂ ರಂಗಾಯಣ ರಘು ಮುಖ್ಯಭೂಮಿಕೆಯಲ್ಲಿದ್ದಾರೆ.
ಇಬ್ಬರೂ ನೀಯತ್ತಾಗಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಕನ್ನಡದ ಮಟ್ಟಿಗೆ ಇದು ನಿಜಕ್ಕೂ ಅದ್ಧೂರಿ ಚಿತ್ರ ಎನ್ನಲು ಅಡ್ಡಿಯಿಲ್ಲ. ನೂರಾರು ಸಿನಿಮಾದಲ್ಲಿ ಕಾಣಬಹುದಾದ ಕಲಾವಿದರನ್ನು ಒಂದೇ ಚಿತ್ರದಲ್ಲಿ ಕಲೆ ಹಾಕಿದ್ದಾರೆ ನಿರ್ದೇಶಕ ಜಿಜೆ ಕೃಷ್ಣ. ಒಂದೇ ವೇದಿಕೆಯಲ್ಲಿ ಹಲವಾರು ಕಲಾವಿದರಿಗೆ ಜಾಗ ಕೊಟ್ಟು, ಅವರಿಂದ ಕೆಲಸ ತೆಗೆಸಿದ್ದಾರೆ ಹಾಗೂ ಅವರನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ.
ಸಾಧುಕೋಕಿಲ ಸಂಗೀತ ಸಾಮಾನ್ಯವಾಗಿದೆ. ಛಾಯಾಗ್ರಹಣ ಮಾಮೂಲಿ. ಸಾಹಸ ದೃಶ್ಯಗಳು ಚೆನ್ನಾಗಿ ಮೂಡಿಬಂದಿವೆ. ದುನಿಯಾ ವಿಜಯ್ ಫೈಟ್ ಅಂತೂ ಮಸ್ತ್ ಮಜಾ ಮಾಡಿ!
ನೃತ್ಯ ಸಂಯೋಜನೆ ಮಜವಾಗಿದೆ. ರಂಗಾಯಣ ರಘು ಹಾಗೂ ಬುಲೆಟ್ ಪ್ರಕಾಶ್ ಮ್ಯಾನರಿಸಂಗೆ ಸರಿಯಾಗಿ ಹೊಂದಿಕೊಳ್ಳುವ ಹಾಡುಗಳನ್ನು ಹೆಣೆದಿದ್ದಾರೆ ಸಾಧುಕೊಕೀಲ. ಲಿಂಗಪ್ಪನ ಮಗ ಮರಿಲಿಂಗಪ್ಪ... ಹಾಡಂತೂ ಕುಂತಲ್ಲೇ ಕಚಗುಳಿ ಇಡುತ್ತದೆ.
ಅಂದಹಾಗೇ ಇದು ಗಾಂಧಿನಗರದ ಕತೆ. ಅಲ್ಲಿನ ನಿರ್ದೇಶಕನಾಗಬೇಕು ಎಂಬ ಕನಸು ಹೊತ್ತು ಬಂದವರ ಕತೆ. ಸಿನಿಮಾ ಅವರಿಗೆ ಏನೆಲ್ಲ ಕಲಿಸುತ್ತದೆ. ಮುಂದೆ ಅವರು ಯಾವ ಹಾದಿ ತುಳಿಯುತ್ತಾರೆ. ಪ್ರತಿಭೆ ಇದ್ದವರು ಹೇಗೆ ಪರದಾಡುತ್ತಾರೆ. ಏನೂ ಗೊತ್ತಿಲ್ಲದವರು ಹೇಗೆ ನಿರ್ಮಾಪಕರ ತಲೆಗೆ ಜಾಮ್ ಸವರುತ್ತಾರೆ... ಇತ್ಯಾದಿ ಬಗ್ಗೆ ಬೆಳಕು ಚೆಲ್ಲುತ್ತದೆ ಐತಲಕಡಿ.
ಒಟ್ಟಾರೆ ಚಿತ್ರದಲ್ಲಿ ಒಂದಷ್ಟು ವಿಷಯಗಳಿವೆ. ಕಾಮಿಡಿಯ ಜೊತೆ ಸೆಂಟಿಮೆಂಟ್. ಅದನ್ನು ಅರಗಿಸಿಕೊಳ್ಳುವ ಹೊತ್ತಿಗೆ ಒಂದಷ್ಟು ಫೈಟ್ಸ್, ಡ್ಯಾನ್ಸ್... ಐತಲಕ್ಕಡಿ ಪಕ್ಕಡಿ ಜುಮ್ಮಾ...