ಪತ್ರಕರ್ತ ಶರಣು ಹುಲ್ಲೂರು ಬರೆದ "ಕೊರೋನಾ ಕರುಣಾಜನಕ ಕಥೆಗಳು" ಪುಸ್ತಕ ಶನಿವಾರ ಸಂಜೆ ಬೆಂಗಳೂರಿನಲ್ಲಿ ಬಿಡುಗಡೆ ಆಯಿತು. ಹೆಸರಾಂತ ನಟರಾದ ನೀನಾಸಂ ಸತೀಶ್ ಮತ್ತು ಅಚ್ಯುತ್ ಕುಮಾರ್ ಈ ಪುಸ್ತಕವನ್ನು ಸಾಮಾಜಿಕ ಜಾಲತಾಣದ ಮೂಲಕ ಬಿಡುಗಡೆ ಮಾಡಿದರು.
ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ನಟ ಸತೀಶ್ ನೀನಾಸಂ "ಜಗತ್ತಿನಾದ್ಯಂತ ಈ ಕೊರೋನಾ ವೈರಾಣು ಸೃಷ್ಟಿಸಿದ ತಲ್ಲಣ ಮತ್ತು ಭಾರತದಲ್ಲಿ ಅದು ಪಡೆದುಕೊಂಡ ಸ್ವರೂಪಗಳು ಇಲ್ಲಿ ಕಥೆಗಳಾಗಿ ಮಾರ್ಪಟ್ಟಿವೆ. ಇವೆಲ್ಲವೂ ನೈಜ ಘಟನೆಗಳೇ. ಜಾತಿ, ಮತ, ಪಂಥವನ್ನು ಮೀರಿದ್ದು ಹಸಿವು. ಈ ಹಸಿವು ಕೊರೋನಾ ವೈರಸ್‍ನಿಂದಾಗಿ ಏನೆಲ್ಲ ಆವಾಂತರ ಸೃಷ್ಟಿಸಿದೆ ಎಂಬುದನ್ನು ಲೇಖಕರು ನೇರ, ನಿಷ್ಠುರತೆಯಿಂದ ತೆರೆದಿಟ್ಟಿದ್ದಾರೆ. ಘಟನೆಯೊಂದಿಗೆ ತತಕ್ಷಣ ಪ್ರತಿಕ್ರಿಯಿಸುವ ಶಕ್ತಿ, ಸಾಹಿತ್ಯಕ್ಕಿದೆ. ಅದರ ಮೂಲಕ ಶರಣು ಹೊಸ ರೀತಿಯಲ್ಲಿ ಈ ವೈರಸ್ ಮತ್ತು ವ್ಯವಸ್ಥೆಗೆ ಪ್ರತಿಕ್ರಿಯಿಸಿದ್ದಾರೆ ಎಂದರು.
"ಕೊರೋನಾ ಕರುಣಾಜನಕ ಕಥೆಗಳು ನಿಜಕ್ಕೂ ವ್ಯವಸ್ಥೆಗೆ ಹಿಡಿದ ಕನ್ನಡಿ. ಕೊರೋನಾ ವೈರಸ್‍ಗಿಂತ ನಮ್ಮನ್ನು ಹೈರಾಣು ಮಾಡಿದ ವೈರಾಣು ಯಾವುದು ಎನ್ನುವುದನ್ನು ಸ್ಪಷ್ಟವಾಗಿ ಲೇಖಕರು ಹಿಡಿದಿಟ್ಟಿದ್ದಾರೆ. ಪ್ರತಿಯೊಂದು ಕಥೆಗಳು ನಿಜಕ್ಕೂ ಕುರುಣಾಜನಕ ಆಗಿವೆ. ಹೃದಯ ಹಿಂಡುತ್ತವೆ. ಸಾಮಾನ್ಯರ ಕಣ್ಣಿಗೆ ಕಾಣದೇ ಇರುವಂತಹ ಸಂಗತಿಗಳನ್ನು ಲೇಖಕರು ಹುಡುಕಿದ್ದಾರೆ. ಈ ಪುಸ್ತಕ ಓದುವುದರಿಂದ ವ್ಯವಸ್ಥೆಯ ಬಗ್ಗೆ ನಮ್ಮಲ್ಲೊಂದು ಚಿಂತನೆ ಮೂಡುವುದಂತೂ ಸತ್ಯ" ಎಂದರು ಅಚ್ಯುತ್ ಕುಮಾರ್.
ಕೊರೋನಾ ಕರುಣಾಜನಕ ಕಥೆಗಳು ಸಂಕಲನದಲ್ಲಿ ಇಪ್ಪತ್ತಕ್ಕೂ ಹೆಚ್ಚು ಬರಹಗಳಿದ್ದು, ಪ್ರತಿಯೊಂದು ನೈಜಘಟನೆಗಳನ್ನು ಆಧರಿಸಿವೆ. ಕೊರೋನಾ ಕಾಲದಲ್ಲೇ ನಡೆದ ಘಟನೆಗಳು ಆದಾಗಿವೆ. ಇದೇ ಮೊದಲ ಬಾರಿಗೆ ಈ ಪುಸ್ತಕಕ್ಕೆ ನಟ ಸತೀಶ್ ನೀನಾಸಂ ಹಿನ್ನುಡಿ ಬರೆದಿದ್ದಾರೆ. ಮೈಲಾಂಗ್ ಆಪ್‍ನಲ್ಲೂ ಈ ಪುಸ್ತಕ ಡಿಜಿಟಲ್ ರೂಪದಲ್ಲಿ ಓದುಗರಿಗೆ ಸಿಗುತ್ತಿದೆ.