Chief Editor
Manohar. R (Manu)
Photo Journalist
chitrataramanu@gmail.com
+91 9845549026
ಚಲನಚಿತ್ರ ಕಲಾವಿದರಿಗೆ ಪಡಿತರ ಕಿಟ್ ವಿತರಿಸಿದ ಲಗ್ಗೆರೆ ಪಾಲಿಕೆ ಸದಸ್ಯೆ ಮಂಜುಳಾ ನಾರಾಯಣಸ್ವಾಮಿ
Posted date: 22 Wed, Apr 2020 – 06:16:26 PM
ನಂಬಿದ ನಾಯಕರ ಅಸಲೀ ಹಣೆಬರಹ ಗೊತ್ತಾಗೋದು ಇಂತಹಾ ಕಷ್ಟದ ಸಮಯಗಳಲ್ಲೇ. ತಮ್ಮನ್ನು ನಂಬಿ ಮತ ನೀಡಿದ ಜನರಿಗೆ ಮಾತ್ರವಲ್ಲದೆ, ಸಂಕಷ್ಟಕ್ಕೆ ಸಿಲುಕಿರುವ ಚಲನಚಿತ್ರ ಪೋಷಕ ಕಲಾವಿದರ ಕೈ ಹಿಡಿಯಲು ಮುಂದಾಗಿರುವ ನಿಜವಾದ ಜನ ನಾಯಕರು, ಆಪದ್ಭಾಂಧವರಿದ್ದಾರೆ. ಬೆಂಗಳೂರಿನ ಲಗ್ಗೆರೆ ವಾರ್ಡ್ ಮಹಾನಗರ ಪಾಲಿಗೆ ಸದಸ್ಯರಾದ ಮಂಜುಳಾ ನಾರಾಯಣ ಸ್ವಾಮಿ ಮತ್ತು ಅವರ ಪತಿ ನಾರಾಯಣ ಸ್ವಾಮಿ ೨೫೦ ಜನ ಸಿನಿಮಾ ಕಲಾವಿದರಿಗೆ ಪಡಿತರ ಕಿಟ್ ನೀಡುವ ಮೂಲಕ ಕಲಾವಿದರು ಮತ್ತು ಅವರ ಬದುಕನ್ನು ಗೌರವಿಸಿದ್ದಾರೆ. ಹಿರಿಯ ಪೋಷಕ ಕಲಾವಿದ ಕಿಲ್ಲರ್ ವೆಂಕಟೇಶ್ ಆರ್ಥಿಕ ಸಂಷ್ಟದಲ್ಲಿರುವುದನ್ನು ಅರಿತ ಮಂಜುಳಾ ನಾರಾಯಣಸ್ವಾಮಿಯವರು ಅವರು ಜೀವಿತಾವಧಿಯ ತನಕ ಮಾಸಿಕ ಹತ್ತು ಸಾವಿರ ರುಪಾಯಿಗಳನ್ನು ನೀಡುವುದಾಗಿ ಘೋಷಿಸಿದ್ದರು. ಅದರಂತೆ ಹಣ ತಲುಪುವ ವ್ಯವಸ್ಥೆ ಈಗಾಗಲೇ ಚಾಲ್ತಿಯಲ್ಲಿದೆ. ಈಗ ಇತರೆ ಕಲಾವಿದರ ನೋವಿಗೂ ಮಿಡಿಯುತ್ತಿದ್ದಾರೆ.

ಇಂದು ಚಲನಚಿತ್ರ ವಾಣಿಜ್ಯ ಮಂಡಳಿ ಪಕ್ಕದಲ್ಲಿರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ಮಾನ್ಯ ಕಂದಾಯ ಸಚಿವ  ಆರ್. ಅಶೋಕ್, ಶೃತಿ,  ರಾಗಿಣಿ, ಸಾ.ರಾ ಗೋವಿಂದು ಮತ್ತು ಮುನಿರತ್ನ ಪೋಷಕ ಕಲಾವಿದರಿಗೆ ಆಹಾರದ ಕಿಟ್ ವಿತರಿಸಿದರು. ತಲಾ ಮೂವತ್ತು ಕೆ.ಜಿ.ಯ ಈ ಕಿಟ್ ದಿನನಿತ್ಯದ ಬಳಕೆಯ ಅಡುಗೆ ಪದಾರ್ಥಗಳನ್ನು ಒಳಗೊಂಡಿದೆ. ಈಸಂದರ್ಭದಲ್ಲಿ ಮಾತನಾಡಿದ ಸಚಿವ ಅಶೋಕ್ ಸಿನಿಮಾ ಕಾರ್ಮಿಕರಿಗೆ ನಾರಾಯಣಸ್ವಾಮಿ ದಂಪತಿ ನೆರವಾಗಿರುವುದು ನಿಜಕ್ಕೂ ಮೆಚ್ಚಬೇಕಾದ ವಿಚಾರ. ಹೀಗೇ ಕಷ್ಟದಲ್ಲಿ ಇರುವ ಮತ್ತಷ್ಟು ಸಮುದಾಯಗಳಿಗೆ ಸಹಾಯ ಮಾಡಲು ಕೇಳಿಕೊಂಡಿದ್ದೇನೆ ಎಂದರು. ಶೃತಿ ಮಾತನಾಡುತ್ತಾ, "ಜನ ನಾಯಕರಾಗಿದ್ದುಕೊಂಡು ಸಿನಿಮಾ ಕಲಾವಿದರ ಸಮಸ್ಯೆಗೆ ಸ್ಪಂದಿಸಿರುವ ಮಂಜುಳಾ ಮತ್ತು ನಾರಾಯಣಸ್ವಾಮಿ ಅವರ ನಡೆ ಮಾದರಿಯಾಗಿದೆ. ಇವರು ಇನ್ನೂ ಹೆಚ್ಚಿನ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಶಕ್ತಿ ಹೊಂದಲಿ" ಎಂದು ನುಡಿದರು.

ಲಗ್ಗೆರೆ ವಾರ್ಡ್‌ನಲ್ಲಿ ದುಡಿಯುವ, ಶ್ರಮಿಕ ವರ್ಗದ ಜನ ಹೆಚ್ಚು ವಾಸಿಸುತ್ತಾ ಬಂದಿದ್ದಾರೆ. ಅದರಲ್ಲೂ ದಿನಗೂಲಿ, ಕಟ್ಟಡ ಕಾರ್ಮಿಕರು, ಚಲನಚಿತ್ರ ಕಾರ್ಮಿಕರು ಇಲ್ಲಿ ಬದುಕು ನಡೆಸುತ್ತಿದ್ದಾರೆ. ಒಂದು ದಿನದ ದುಡಿಮೆ ಇಲ್ಲದಿದ್ದರೂ ಇಲ್ಲಿನ ಜನ ಜೀವನ ಸಾಗಿಸುವುದು ಕಷ್ಟ. ಹೀಗಿರುವಾಗ ಲಗ್ಗೆರೆ ವಾರ್ಡ್ ಮಹಾನಗರ ಪಾಲಿಗೆ ಸದಸ್ಯರಾದ ಮಂಜುಳಾ ನಾರಾಯಣ ಸ್ವಾಮಿ ಮತ್ತು ಅವರ ಪತಿ ನಾರಾಯಣ ಸ್ವಾಮಿ ಇಲ್ಲಿ ವಾಸವಿರುವ ಜನ ಒಂದಿಷ್ಟೂ ಕಷ್ಟ ಪಡದೆ, ಮನೆಯಲ್ಲಿರುವಂಥ ವಾತಾವರಣ ಕಲ್ಪಿಸಿಕೊಟ್ಟಿದ್ದಾರೆ. ಕೊರೋನಾ ಕಾರಣಕ್ಕಾಗಿ ಲಾಕ್ ಡೌನ್ ಆದ ದಿನದಿಂದ ಪ್ರತಿ ದಿನ ಎಲ್ಲರ ಮನೆಗೆ ಊಟ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ. ಬೇರೆಲ್ಲರಂತೆ ಪ್ಯಾಕೆಟ್ ಆಹಾರ ನೀಡದೆ, ಒಂದು ಕಡೆ ಅನ್ನ ಮತ್ತು ಸಾಂಬಾರು ತಯಾರಿಸಿ, ಹತ್ತು ಮೊಬೈಲ್ ಕ್ಯಾಂಟೀನ್ ವಾಹನಗಳಲ್ಲಿ, ಹತ್ತು ಜಾಗಗಳಲ್ಲಿ ತಲುಪಿಸಿ, ಮನೆಯಲ್ಲಿ ಎಷ್ಟು ಮಂದಿ ಇದ್ದಾರೆ ಎಂದು ಕೇಳಿ ಅವರು ತಂದ ಪಾತ್ರೆಗಳಿಗೆ ಅನ್ನ ಮತ್ತು ಸಾಂಬಾರನ್ನು ಪ್ರತ್ಯೇಕವಾಗಿ ವಿತರಿಸುತ್ತಿದ್ದಾರೆ. ದುಡಿದು ತಿನ್ನುತ್ತಿದ್ದ ಕೈಗಳು ಇಂದು ಮಂಜುಳಾ ನಾರಾಯಣಸ್ವಾಮಿ ಅವರ ಈ ದಾಸೋಹ ಯೋಜನೆಯ ಫಲವಾಗಿ ಲಾಕ್‌ಡೌನ್ ಸಮಯದಲ್ಲೂ ಹಸಿವಿನ ಚಿಂತೆಯಿಲ್ಲದೆ, ನೆಮ್ಮದಿಯಿಂದ ದಿನ ಕಳೆಯುವಂತಾಗಿದೆ. 
 
ಈಗ ಚಲನಚಿತ್ರ ಪೋಷಕ ಕಲಾವಿದರಿಗೂ ಶ್ರೀಮತಿ ಮಂಜುಳಾ ಮತ್ತು ಶ್ರೀನಾರಾಯಣಸ್ವಾಮಿಯವರು ಸಹಾಯ ಹಸ್ತ ಚಾಚಿರುವುದು ಇಡೀ ಚಿತ್ರರಂಗದವರ ಮೆಚ್ಚುಗೆಗೆ ಕಾರಣವಾಗಿದೆ. ಈ ಎಲ್ಲ ಕಾರಣದಿಂದ ಲಗ್ಗೆರೆ ಬೆಂಗಳೂರಿನ ಮಾದರಿ ವಾರ್ಡ್ ಎನಿಸಿಕೊಂಡಿದೆ.


GALLERY
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಚಲನಚಿತ್ರ ಕಲಾವಿದರಿಗೆ ಪಡಿತರ ಕಿಟ್ ವಿತರಿಸಿದ ಲಗ್ಗೆರೆ ಪಾಲಿಕೆ ಸದಸ್ಯೆ ಮಂಜುಳಾ ನಾರಾಯಣಸ್ವಾಮಿ - Chitratara.com
Copyright 2009 chitratara.com Reproduction is forbidden unless authorized. All rights reserved.