ತಂದೆಗೆ ತನ್ನ ಮಗ ಇದೇ ಥರ ಬೆಳೆಯಬೇಕು. ಮುಂದೊಂದು ದಿನ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಬೇಕು ಎಂಬ ಕನಸು ಇರುವುದು ಸಹಜ. ಆದರೆ, ಅದೇ ತಂದೆಗೆ ತನ್ನ ಮಗ ಇದೇ ಆಗಬೇಕು. ಅದು ಆಗುವ ಹಾಗೇ ಇಲ್ಲ. ಗಣೀತದಲ್ಲಿ ತಜ್ಞನಾಗಬೇಕು ಎಂಬ ಕನಸಿದ್ದರೆ ತಪ್ಪು ಎಂದಲ್ಲ. ಆದರೆ, ಅದೇ ಕನಸು ನನಸಾಗಬೇಕು ಎಂದು ಅದೇ ತಂದೆ ತನ್ನ ಮಗನನ್ನು ಹಿಂಸಿಸಿದರೆ, ಕೈ ಕಾಲು ಕಟ್ಟಿ ಹೊಡೆದರೆ ಹೇಗಿರುತ್ತದೆ ಹೇಳಿ?
ಅದೆಂಥ ತಂದೆಯಪ್ಪಾ? ಮಗಳ ಇಷ್ಟಾರ್ಥಗಳನ್ನು ಅರ್ಥ ಮಾಡಿಕೊಳ್ಳದ ತಂದೆಯೂ ಒಬ್ಬ ತಂದೆಯಾ? ಎಂದು ಕೇಳುತ್ತೀರಿ. ತೀರ್ಥ ಚಿತ್ರ ನೋಡನೋಡುತ್ತಿದ್ದಂತೇ ಈ ಪ್ರಶ್ನೆ ಪ್ರೇಕ್ಷಕರಲ್ಲಿ ಮೂಡುತ್ತದೆ. ಅನಂತನಾಗ್(ಅಪ್ಪ) ಹಾಗೂ ಸುದೀಪ್(ಮಗ) ನಡುವೆ ನಡೆಯುವ ಭಾವ ಸಂಘರ್ಷ ನಿಜಕ್ಕೂ ಅದ್ಭುತ. ಆತ ಮಗನನ್ನು ಕಣ್ಣ ಮುಂದೇ ಸಾಯಿಸುತ್ತಾನೆ. ಬದುಕಿದ್ದಾಗಲೇ ಆತನ ಹೆಸರಲ್ಲಿ ಪಿಂಡ ಬಿಡುತ್ತಾನೆ. ಆಗ, ಮಗ ಮನೆಯಿಂದ ಹೊರಬೀಳುತ್ತಾನೆ. ಈ ನಡುವೆ ಮಗನಿಗೆ ಒಂದು ಹುಡುಗಿ ಗಂಟುಬಿದ್ದಿರುತ್ತಾಳೆ. ನೀನು ಈಗಾಗಲೇ ನನ್ನನ್ನು ಮದುವೆ ಆಗಿರುವ ಎಂದು ಬುರುಡೆ ಬಿಡುತ್ತಾಳೆ. ನಾಯಕ ಕನ್‌ಫ್ಯೂಸ್ ಆಗುತ್ತಾನೆ. ಅಪ್ಪನ ಹೊಡೆತವನ್ನು ತಡೆದುಕೊಳ್ಳಲಾಗದೇ ಮನೆ ಬಿಟ್ಟು ಹೊರಡುತ್ತಾನೆ. ಅಲ್ಲಿಂದ ತೀರ್ಥಕ್ಕೆ ಟೈಮ್ ಆಗಿರುತ್ತದೆ. ಪ್ರಸಾದಕ್ಕೆ ಮುಹೂರ್ತ ಬಂದಿರುತ್ತದೆ!
ಇದು ಮಲಯಾಳಂನ ಸ್ಫಟಿಕಂ ಚಿತ್ರದ ರೀಮೇಕ್. ಅದನ್ನೇ ಇಲ್ಲಿಗೆ ತಂದಿಳಿಸಿದ್ದಾರೆ ಸಾಧುಕೋಕಿಲಾ. ಆದರೆ, ಚಿತ್ರಕತೆಯಲ್ಲಿ ಅದ್ಯಾಕೋ ಲವಲವಿಕೆ ಕಡಿಮೆಯಾಗಿದೆ. ನಾಯಕಿ ಸೋನಾಲಿ ಮುದ್ದಾಗಿರುವುದರ ಜೊತೆಗೆ, ಕುಣಿತದಲ್ಲೂ ಎತ್ತಿದ ಕೈ. ಮೈತುಂಬಾ ‘ಆಸ್ತಿ ಪಾಸ್ತಿ’ ಮಾಡಿಕೊಂಡು, ಅಂಕು ಡೊಂಕು ತೋರುತ್ತಾ ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತಿದ್ದರೆ ಸ್ವರ್ಗಕ್ಕೆ ಅರ್ಧ ಕಿಲೋಮೀಟರ್, ಅಷ್ಟೇ!
ಗುರುಕಿರಣ್ ಸಂಗೀತದಲ್ಲಿ ಒಂದು ಹಾಡು ಪರವಾಗಿಲ್ಲ. ಮತ್ತೊಂದು ಒಮ್ಮೆ ಕೇಳಲು ಅಡ್ಡಿಯಿಲ್ಲ. ಉಳಿದದ್ದು ನೆನಪಿಲ್ಲ, ಹುರುಳಿಲ್ಲ, ತಿರುಳಿಲ್ಲ. ಛಾಯಾಗ್ರಹಣ ದಾಸರಿ ಸೀನು ಅವರದ್ದಾ ಎಂದು ಕೇಳುವಷ್ಟು ವಿ-ಚಿತ್ರವಾಗಿದೆ ಎಂದರೆ ಸೀನಣ್ಣ ಬೇಜಾರ್ ಮಾಡಿಕೊಳ್ಳಬಾರದು. ಉಳಿದಂತೆ ಅವಿನಾಶ್‌ಗೆ ಸ್ಯೂಟ್ ಆಗುವ ಪಾತ್ರ. ರೇಖಾಗೆ ಅತಿರೇಕದ ವಿಲನ್ ಕ್ಯಾರೆಕ್ಟರ್. ನೀನಾಸಂ ಅಶ್ವತ್ಥ್ ನಟನೆಯಲ್ಲಿ ಗಲುಗಂಜಿಯಷ್ಟೂ ಮೋಸವಿಲ್ಲ. ಅವರಿಗೆ ವಿಲನ್ ಗೆಟಪ್ಪು ಸರಿಯಾಗಿ ಹೊಂದುತ್ತದೆ. ಪತ್ರಕರ್ತ ಯತಿರಾಜ್ ಬಳಗ ಸುದೀಪ್ ಗೆಳೆಯರಾಗಿ ಕತೆಯನ್ನು ಒಂದಷ್ಟು ಹೊತ್ತು ತೂಗಿಸಿಕೊಂಡು ಹೋಗುತ್ತದೆ. ಅಲ್ಲಲ್ಲಿ ಸಾಧುಕೋಕಿಲಾ ಬಂಪರ್ ಕಾಮಿಡಿ ಬರುತ್ತದೆ. ಅದು ನಗು ಬರಿಸಿದರೆ ನೀವು ನಿಜವಾದ ಮಾನವರು. ಅಳು ಬರಿಸಿದರೆ ನಾವು ಹೊಣೆಗಾರರಲ್ಲ!
ತೀರ್ಥದ ಪವರ್ ಏನೇ ಇರದಿದ್ದರೂ ಆಕ್ಷನ್‌ಗೆ ಕೊರತೆಯಿಲ್ಲ. ಡೈಲಾಗ್‌ಗಳಿಗೆ ಮೋಸವಿಲ್ಲ. ಉಳಿದದ್ದನ್ನು ಆ ತೀರ್ಥ ಪ್ರಸಾದ ‘ವಿತರಕ’ನೇ ಬಲ್ಲ!