Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮುಸ್ಸಂಜೇಲಿ ಹೂ ಅರಳಿದೆ
Posted date: 01 Sat, Jul 2017 08:46:41 AM

ಕಾದಂಬರಿ ಆಧಾರಿತ ಹಾಗೂ ಬಹಳ ದಿನಗಳ ನಂತರ ಎಂ.ಡಿ. ಕೌಶಿಕ್ ನಿರ್ದೇಶನ ಮಾಡಿರುವ  ಚಿತ್ರ ಸಂಜೆಯಲ್ಲಿ  ಅರಳಿದ ಹೂವು ಈ ವಾರ ತೆರೆಕಂಡಿದೆ.  ವಿಭಿನ್ನವಾದ ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರದ ಕಥೆ ನಡೆಯುವುದು ಪ್ರಮುಖವಾಗಿ ೪ ಪಾತ್ರಗಳ ನಡುವೆ.  ಒಂದು ಕುಟುಂಬದಲ್ಲಿ   ಗಂಡ, ಹೆಂಡತಿ, ತಾಯಿ ಹಾಗೂ ಸ್ನೇಹಿತ ಇವರುಗಳ  ಸುತ್ತ ಹೆಣೆಯಲಾದ ಈ ಕಥಾಹಂದರದಲ್ಲಿ  ಪತಿ-ಪತ್ನಿಯ ನಡುವಿನ ಬಾಂಧವ್ಯದ ಮಹತ್ವ,  ತಾಯಿ-ಮಗನ ನಡುವಿನ ಮಧುರ ಬಾಂಧವ್ಯವನ್ನು ನಿರೂಪಿಸಲಾಗಿದೆ.    
 

ಮಾಲತಿ ಶೆಟ್ಟಿ  ಬರೆದ  ಸಂಜೆಯಲ್ಲಿ  ಅರಳಿದ ಹೂವು   ಎಂಬ ಕಾದಂಬರಿಯನ್ನು  ಆಧರಿಸಿ  ಈ  ಚಿತ್ರ  ನಿರ್ಮಾಣವಾಗಿದೆ.   ಈ ಕಾದಂಬರಿಯ  ಸಾರವನ್ನು   ಚಲನಚಿತ್ರದ  ಮೂಲ ಕಥಾವಸ್ತುವನ್ನಾಗಿ  ಬಳಸಿಕೊಂಡು   ತೆರೆಯಮೇಲೆ  ಸುಂದರವಾದ ಹೂವನ್ನು  ನಿರ್ದೇಶಕ ಎಂ.ಡಿ.ಕೌಶಿಕ್ ಅವರು ಅರಳಿಸಿದ್ದಾರೆ.  ಚಿತ್ರದಲ್ಲಿ  ನಾಯಕಿ  ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಓರ್ವ ವೈದ್ಯೆ(ಜಯಶ್ರೀರಾಜ್) ಹಾಗೂ  ಸಂಗೀತ ಪ್ರೇಮಿ. ಒಂದು ಸಂದರ್ಭದಲ್ಲಿ  ಆಕಸ್ಮಿಕವಾಗಿ ಪರಿಚಿತನಾದ  ರವಿಶಂಕರ್(ನಾರಾಯಣಸ್ವಾಮಿ) ನಾಯಕಿಯ  ಸೇವಾಮನೋಭಾವ ಹಾಗೂ ಸನ್ನಡತೆಗಳಿಗೆ  ಮಾರುಹೋಗುತ್ತಾನೆ. ರವಿ ಕೂಡ ಓರ್ವ ಎಂಜಿನಿಯರ್ ಆಗಿರುತ್ತಾನೆ.  ಅಪಘಾತವೊಂದರಲ್ಲಿ  ತನ್ನ ಪೋಷಕರನ್ನು ಕಳೆದುಕೊಂಡ  ನಾಯಕಿ ಪಿಜಿಯಲ್ಲಿ ವಾಸವಿರುತ್ತಾಳೆ. ಇಬ್ಬರ  ನಡುವೆ ಆರಂಭವಾದ ಸ್ನೇಹ ಮದುವೆಯಾಗುವ ಹಂತ ತಲುಪುತ್ತದೆ.  ತನ್ನ  ಸಂಗೀತದ ಗುರುಗಳ ಆಶೀರ್ವಾದ ತೆಗೆದುಕೊಂಡು ನಾಯಕಿ ರವಿಯನ್ನು  ವರಿಸುತ್ತಾಳೆ. ನಾಯಕಿ ಗರ್ಭವತಿಯಾದ ಸಂದರ್ಭದಲ್ಲಿ ರವಿಶಂಕರ್‌ಗೆ ಅಮೆರಿಕಾದ ದೊಡ್ಡ ಕಂಪನಿಯೊಂದರಲ್ಲಿ ಕೆಲಸಕ್ಕೆ ಆಹ್ವಾನ ಬರುತ್ತದೆ. ಅದರ ಕಾಟ್ರ್ಯಾಕ್ಟ್ ಪ್ರಕಾರ ೩ ವರ್ಷಗಳ ಕಾಲ ಅಮೆರಿಕಾದಲ್ಲೇ ನೆಲೆಸಿರಬೇಕಾಗಿದ್ದು  ಅಲ್ಲಿಂದ ಫ್ಲೈಟ್ ಟಿಕೆಟ್ ಕೂಡ ಆಫರ್ ಲೆಟರ್‌ನ ಜೊತೆ ಬಂದಿರುತ್ತದೆ. ಚಿಕ್ಕವನಿದ್ದಾಗಿನಿಂದಲೂ ಫಾರಿನ್‌ನಲ್ಲಿ  ಕೆಲಸ ಮಾಡಬೇಕೆಂದು  ಇಷ್ಟಪಟ್ಟಿದ್ದ  ರವಿ ಮನೆಯಲ್ಲಿ ಹೆಂಡತಿಯನ್ನು ಕಾಡಿ ಬೇಡಿ ಒಪ್ಪಿಸಿ  ಅಮೆರಿಕಾಗೆ ತೆರಳುತ್ತಾನೆ.  ಇತ್ತ ನಾಯಕಿಗೆ ಹೆಣ್ಣು ಮಗು ಜನಿಸುತ್ತದೆ. 

ಕೆಲ ತಿಂಗಳ ನಂತರ  ನಾಯಕನ ಫೋನ್ ಸಂಪರ್ಕ, ಸ್ಕೈಪ್ ಅಕೌಂಟ್ ಕೂಡ ಕಡಿದುಹೋಗಿ ಮನೆಯವರೆಲ್ಲ ಆತಂಕಕ್ಕೀಡಾಗುತ್ತಾರೆ. ಒಂದು ದಿನ  ನಾಯಕನಿಂದ  ಪತ್ರವೊಂದು ಬರುತ್ತದೆ, ಅದರಲ್ಲಿ  ತಾನು ಅಮೆರಿಕದಲ್ಲಿ ಕೆಲಸ ಮಾಡುವ ಕಂಪನಿಯ ಮಾಲೀಕನ ಮಗಳ ಜೊತೆ ತನ್ನ ಮದುವೆಯಾಗಿರುವುದಾಗಿಯೂ, ತಾನಿನ್ನು ಭಾರತಕ್ಕೆ ವಾಪಸ್ ಬರುವುದಿಲ್ಲವೆಂದು ಬರೆದಿರುತ್ತಾನೆ. ಜೊತೆಗೆ ಡೈವೋರ್ಸ್ ನೋಟೀಸ್ ಕೂಡ ಬಂದಿರುತ್ತದೆ. ಇದರಿಂದ ಜರ್ಜರಿತಳಾದ  ನಾಯಕಿ ಮುಂದಿನ ಜೀವನವನ್ನು  ರೋಗಿಗಳ ಸೇವೆ ಮಾಡುತ್ತಾ ಕಳೆಯಲು ತೀರ್ಮಾನಿಸುತ್ತಾಳೆ. ಆ ಮೂಲಕ ಹಿಂದಿನದನ್ನು  ಮರೆಯಲು ಪ್ರಯತ್ನಿಸುತ್ತಾಳೆ. 

ನಂತರದ ದಿನಗಳಲ್ಲಿ  ನಾಯಕಿಯ  ಕಾಲೇಜ್ ಸ್ನೇಹಿತ ಚಂದ್ರು(ಅರ್ಜುನ್)  ಆಕೆಯ ಜೀವನದಲ್ಲಿ  ಪ್ರವೇಶಿಸುತ್ತಾನೆ. ರವಿಜಾರಿದ ನಂತರ ಬರುವ ಚಂದ್ರನ ಹಾಗೆ ನಾಯಕಿಗೆ ಹೊಸ ಬಾಳು ಕೊಡಲು ಮುಂದಾಗುತ್ತಾನೆ. ನಿಜಕ್ಕೂ ರವಿಗೆ ಅಮೆರಿಕಾದಲ್ಲಿ ಎದುರಾದ ಸಂದರ್ಭ ಎಂಥದ್ದು, ಆತ ಬೇರೊಬ್ಬಳೊಂದಿಗೆ ಮದುವೆಯಾಗಿದ್ದನೇ, ತನ್ನನ್ನೇ ಮದುವೆಯಾಗಲೆಂದು ಕಾಯುತ್ತಿದ್ದ  ಚಂದ್ರುವನ್ನು  ನಾಯಕಿ  ಒಪ್ಪಿಕೊಂಡಳೇ ಎಂಬುದನ್ನು  ಚಿತ್ರಮಂದಿರದಲ್ಲಿ  ನೋಡಿದರೇ ಚೆನ್ನ. ಮಾರುತಿ  ಮಿರಜಕರ್ ಅವರ  ಹಿತ-ಮಿತವಾದ  ಸಂಗೀತ  ಪ್ರೇಕ್ಷಕರನ್ನು  ಸೆಳೆಯುತ್ತದೆ.  ಕಿರುತೆರೆ ನಟಿ ಜಯಶ್ರೀ ಹಾಗೂ  ನಟ ನಾರಾಯಣ ಸ್ವಾಮಿ  ಇಬ್ಬರ ಜೋಡಿ ತೆರೆಯಮೇಲೆ  ಮೇಡ್ ಫಾರ್ ಈಚ್ ಅದರ್ ಎನ್ನುವಂತೆ ಕಾಣುತ್ತದೆ. ನಾಯಕನ ತಾಯಿಯ  ಪಾತ್ರ ಮಾಡಿರುವ  ಹುಬ್ಬಳ್ಳಿ  ಮೂಲದ  ಮಾಲತಿ ಸರದೇಶ ಪಾಂಡೆ ಉತ್ತರ ಕರ್ನಾಟಕದ ಭಾಷೆಯಲ್ಲೇ  ಮಾತನಾಡಿ  ಪ್ರೇಕ್ಷಕರನ್ನು  ಆಕರ್ಷಿಸುತ್ತಾರೆ. ವಿಶೇಷವಾಗಿ ಅತ್ತೆ-ಸೊಸೆ  ಇಬ್ಬರೂ ತಾಯಿ-ಮಗಳ ರೀತಿ ಅನ್ಯೋನ್ಯವಾಗಿರುವುದು ನೋಡುಗರಿಗೆ ಇಷ್ಟವಾಗುತ್ತದೆ.

3/5 ***

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮುಸ್ಸಂಜೇಲಿ ಹೂ ಅರಳಿದೆ - Chitratara.com
Copyright 2009 chitratara.com Reproduction is forbidden unless authorized. All rights reserved.