ರಾಮ ರಾಮಾ, ಕೃಷ್ಣ ಕೃಷ್ಣಾ!---ಸರಿಯಾದ ಪೂರ್ವ ತಯಾರಿ ಇಲ್ಲದೇ ಸಿನಿಮಾ ಮಾಡಿದರೆ ಏನು ಅನಾಹುತ ಆಗುತ್ತದೆ ಎನ್ನುವುದಕ್ಕೆ ಶ್ರೀನಿವಾಸ್ ಗುಂಡರೆಡ್ಡಿ ನಿರ್ದೇಶನದ ಅಭಿರಾಮ್ ಅನಾಥನಲ್ಲ ಚಿತ್ರವೇ ಸಾಕ್ಷಿ. ದೃಶ್ಯದಿಂದ ದೃಶ್ಯಕ್ಕೆ ಜನ ಚೇಂಜ್ ಕೇಳುತ್ತಾರೆ. ಆದರೆ, ಅಭಿರಾಮ್ ಅನಾಥನಾ ಚಿತ್ರದಲ್ಲಿ ನಯಾಪೈಸೆ ಚೇಂಜ್ ಇಲ್ಲ. ಅದೇ ಸೆಂಟಿಮೆಂಟು, ಕಣ್ಣೀರ್ ಕಹಾನಿ. ಬಾಯಿಗೆ ಬಂದಂತೆ ಬೈಗುಳ, ಗೋಳಾಟ, ಕಾದಾಟ, ಕಿತ್ತಾಟ, ದೊಂಬರಾಟ!
ತಂದೆ ತಾಯಿ ಹಾಗೂ ಮಗನ ಭಾವನಾತ್ಮಕ ಸಂಬಂಧವನ್ನು ನಿರ್ದೇಶಕರು ಇಲ್ಲಿ ಜಾಲಾಡಿದ್ದಾರೆ. ಜೊಳ್ಳು ಜೊಳ್ಳಾದ, ಹುರುಳಿಲ್ಲದ ಸಂಭಾಷಣೆ, ನಗುವಂತೆ ಮಾಡುವ ದುಃಖದ ಸನ್ನಿವೇಶಗಳು ಪ್ರೇಕ್ಷಕರನ್ನು ಅನಾಥ ಮಗುವಾಗಿಸುತ್ತದೆ!
ನಿರ್ದೇಶಕರು ಅದು ಯಾವ ಪುರುಷಾರ್ಥಕ್ಕೆ ಸಿನಿಮಾ ಮಾಡಿದ್ದಾರೋ ಗೊತ್ತಿಲ್ಲ. ನಟ ಸಂತೋಷ್ ನಟಿಸಲು ಒದ್ದಾಡಿದ್ದಾರೆ. ಪಾತ್ರಕ್ಕೆ ನ್ಯಾಯ ಒದಗಿಸು ಹೋಗಿ, ಪ್ರೇಕ್ಷಕರಿಗೆ ಅನ್ಯಾಯ ಮಾಡಿದ್ದಾರೆ. ಅವರು ಅರಚಾಟವನ್ನೇ ಅಭಿನಯ ಎಂದು ತಪ್ಪು ಗ್ರಹಿಸಿದ್ದಾರೆ. ನಾಯಕಿಯರಿಬ್ಬರಿಗೆ ಅ ಎಂದರೆ ಆ ಎನ್ನಲು ಬರುವುದಿಲ್ಲ. ಪಾತ್ರಪೋಷಣೆಯಂತೂ ಗೊತ್ತೇ ಇಲ್ಲ. ಅಕ್ಷತ ಅವರಿಗೆ ಹಳ್ಳಿ ಉಡುಪು ತೊಡಿಸಲಾಗಿದೆ. ಬಾಯಿಂದ ಅವಾಚ್ಯ ಪದಗಳನ್ನು ಹೇಳಿಸಲಾಗಿದೆ. ಇನ್ನೊಬ್ಬ ನಟಿ ಸ್ವಾತಿ ಮಾತುಮಾತಿಗೆ ಮುತ್ತು ಸುರಿಸುತ್ತಾರೆ. ಎದುರಿಗೆ ಕುಳಿತವರಿಗೆ ಕಣ್ಣೀರು ಬರಿಸುತ್ತಾರೆ!
ಸಂಗೀತದಲ್ಲಿ ಹೊಸತನವಿಲ್ಲ. ಹಾಡುಗಳಲ್ಲಿ ಜೋಶ್ ಇಲ್ಲವೇ ಇಲ್ಲ. ಛಾಯಾಗ್ರಹಣ ಮಾಮೂಲಿ. ಚಿತ್ರಕತೆ, ನಿರೂಪಣೆಯಲ್ಲಿ ನಿರ್ದೇಶಕರು ‘ಪರ ಪರ ಲೋಕ’ ಸೃಷ್ಟಿಸುತ್ತಾರೆ. ಇದು ಅನಾಥರ ಕತೆಯೋ, ಅನಾಥರಿಗೋಸ್ಕರವೇ ಮಾಡಿದ ಕತೆಯೋ ಅಥವಾ ಅನಾಥ ರಕ್ಷಕರಿಗೆ ಮಾಡಿದ ಚಿತ್ರವೋ ಆ ರಾಮನೇ ಬಲ್ಲ.
ಅಕಸ್ಮಾತ್ ನೀವೇನಾದರೂ ಪುನೀತ್ ರಾಜ್‌ಕುಮಾರ್ ಅವರ ಅಭಿ ಹಾಗೂ ರಾಮ್ ಎರಡೂ ಚಿತ್ರಗಳ ಹೆಸರನ್ನು ಬೆಸೆದುಕೊಂಡ ಚಿತ್ರವಿದು. ಇಲ್ಲೇನೋ ವಿಶೇಷತೆ ಇದೆ ಎಂದುಕೊಂಡು ಚಿತ್ರಮಂದಿರದ ಕಡೆ ಕಾಲಿಟ್ಟರೆ ನೀವು ಪ್ರೇಕ್ಷಕರ ಕೊರತೆಯಿಂದ ಅನಾಥರಾಗುತ್ತೀರಿ. ಅದಕ್ಕೆ ನಾವು ಹೊಣೆಯಲ್ಲ!
ನಿರ್ಮಾಪಕರು ಕಷ್ಟಪಟ್ಟು ದುಡಿದ ಹಣವನ್ನು ಅಭಿರಾಮನ ಮೇಲೆ ಹಾಕಿದ್ದಾರೆ. ಆದರೆ, ಚಿತ್ರದ ಕತೆ ಮಾತ್ರ ರಾಮ ರಾಮಾ, ಕೃಷ್ಣ ಕೃಷ್ನಾ!