ಸೆಟ್ಟೇರಿದಾಗಿನಿಂದ ಸುದ್ದಿ ಮಾಡ್ತಾ ಇರೋ ಅಸತೋಮ ಸದ್ಗಮಯ ಚಿತ್ರ ಅದಷ್ಟು ಶೀಘ್ರದಲ್ಲಿ ಬೆಳ್ಳಿತರೆಗೆ ಬರಲು ತಯಾರಾಗಿದೆ. ಇದರ ಟ್ರೈಲರ್ ಇದೇ ಬರುವ ಮಾರ್ಚ್ ೨೩ರಂದು ದುಬೈನ ಹೋಟೇಲ್ ಫಾರ್ಚೂನ್ ಪ್ಲಾಝಾದಲ್ಲಿ ನಡೆಯಲಿದೆ.
ದುಬೈನಲ್ಲಿ ನಡೆಯಲಿರುವ ಸಮಾರಂಭದಲ್ಲಿ ದುಬೈನ ಗಣ್ಯಾತಿಗಣ್ಯ ಅನಿವಾಸಿ ಕನ್ನಡಿಗರ ಸಮ್ಮುಖದಲ್ಲಿ ಇದರ ಟ್ರೈಲರ್ ಬಿಡುಗಡೆಗೊಳ್ಳಲಿದೆ. ಕನ್ನಡ ಚಿತ್ರವೊಂದರ ಟ್ರೈಲರ್ ದುಬೈನಲ್ಲಿ ಬಿಡುಗಡೆಗೊಳ್ಳಲಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಚಾರ, ಅದರಲ್ಲೂ ಅದು ನಾನು ನಿರ್ದೇಶಿಸಿರುವ ಚಿತ್ರವಾಗಿರುವುದರಿಂದ ನನಗೆ ತುಂಬಾ ಸಂತೋಷವಾಗುತ್ತಿದೆ ಎನ್ನುತ್ತಾರೆ ನಿರ್ದೇಶಕ ರಾಜೇಶ್ ವೇಣೂರ್‌ರವರು.
ತನ್ನ ವಿಶಿಷ್ಟ ಪೋಸ್ಟರ್‌ಗಳಿಂದಂಲೇ ಕುತೂಹಲ ಹುಟ್ಟಿಸಿದ್ದ ಅಸತೋಮ ಸದ್ಗಮಯ ಚಿತ್ರದ ಟ್ರೈಲರ್ ಬಿಡುಗಡೆ ಬಗ್ಗೆ ತುಂಬಾ ಮಂದಿ ಫೋನ್ ಮಾಡಿ ವಿಚಾರಿಸುತ್ತಿದ್ದರು, ಪೋಸ್ಟರ್‌ಗಳ ತರಾನೇ ಟ್ರೈಲರ್ ಕೂಡ ಪ್ರೇಕ್ಷಕರಿಗೆ ಇಷ್ಟವಾಗುತ್ತೆ ಮತ್ತು ಖಂಡಿತಾವಾಗಿಯೂ ಇದು ಚಿತ್ರದ ಬಗ್ಗೆ ಇನ್ನಷ್ಟು ನಿರೀಕ್ಷೆ ಹುಟ್ಟಿಸುತ್ತೆ ಎನ್ನುತ್ತಾರೆ ನಿರ್ದೇಶಕರು. ಇದು ಇಂದಿನ ತಲೆಮಾರಿನ ಸಾಮಾಜಿಕ ಸ್ಥಿತಿಗತಿಯ ಬಗ್ಗೆ ಇರೋ ಚಿತ್ರವಾಗಿದ್ದರೂ ಸಂಪೂರ್ಣವಾಗಿ ಸಾಂಸಾರಿಕ ಚಿತ್ರ ಎನ್ನುತ್ತಾರೆ ಅವರು. ಇದರ ಹಾಡುಗಳು ಈಗಾಗಲೇ ಬಿಡುಗಡೆಯಾಗಬೇಕಿತ್ತು ಆದರೆ ಕಾರಣಾಂತರಗಳಿಂದ ಸ್ವಲ್ಪ ತಡವಾಗಿದೆ. ಚಿತ್ರದ ಆಡಿಯೋ ಸಿಡಿ ಎಪ್ರಿಲ್ ತಿಂಗಳ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ಬಿಡುಗಡೆಗೊಳ್ಳಲಿದೆ ಎನ್ನುತ್ತದೆ ಚಿತ್ರತಂಡ. ಈ ಚಿತ್ರದಲ್ಲಿ ರಾಧಿಕಾ ಚೇತನ್‌ರವರು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ, ಜೊತೆಗೆ ಕಿರಣ್ ರಾಜ್, ಲಾಸ್ಯಾ ನಾಗರಾಜ್ ಹಾಗೂ ಬೇಬಿ ಚಿತ್ರಾಲಿ ಪ್ರಮುಖ ತಾರಾಗಣದಲ್ಲಿದ್ದಾರೆ.
ಅಸತೋಮ ಸದ್ಗಮಯ ಚಿತ್ರವನ್ನ ಐಕೇರ್ ಮೂವೀಸ್ ಬ್ಯಾನರಿನಡಿಯಲ್ಲಿ, ಅಶ್ವಿನ್ ಪಿರೇರಾರವರು ನಿರ್ಮಿಸುತ್ತಿದ್ದಾರೆ.