Chief Editor
Manohar. R (Manu)
Photo Journalist
chitrataramanu@gmail.com
+91 9845549026
ಆತ್ಮಾನಂದ... ಪರಮಾನಂದ...
Posted date: 24/April/2010

"ಏ... ನಾನ್ ಕಣೇ ಶ್ಯಾಮ್... ನೋಡೇ... ಇಲ್ಲೇ, ನಿನ್ ಕಣ್ ಎದುರಿಗೇ ಇದೀನಿ...’
ಆತ ಒಂದೇ ಉಸಿರಲ್ಲಿ ಆಕೆಗೆ ಎಚ್ಚರಿಸುತ್ತಾನೆ. ಹೆಗಲು ಮುಟ್ಟುತ್ತಾನೆ. ಕೆನ್ನೆ ಚಿವುಟಲು ಯತ್ನಿಸುತ್ತಾನೆ. ಮತ್ತೆ ಕೂಗುತ್ತಾನೆ. ರೇಗುತ್ತಾನೆ. ಅಲ್ಲಿದ್ದ ವಸ್ತುಗಳನ್ನು ಚೆಲ್ಲಾಡಲು ಒದ್ದಾಡುತ್ತಾನೆ!
ಆದರೆ, ಅಲ್ಲಿ ಆಗುವುದೇ ಬೇರೆ. ಈಕೆ ತನ್ನ ಪಾಡಿಗೆ ತಾನು ಗ್ಯಾಸ್ ಮೇಲೆ ಅಡುಗೆ ಬೇಯಿಸುತ್ತಾ ನಿಂತಿರುತ್ತಾಳೆ. ಕಾರಣ ಇಷ್ಟೇ. ಆತ ಮನುಷ್ಯನಲ್ಲ. ಅಂತರಾತ್ಮ. ನೀವು, ಪ್ರೇಕ್ಷಕರು ದೂರದಲ್ಲೆಲ್ಲೋ ಕುಳಿತು "ಈ ದೇಹದಿಂದ ದೂರವಾದೆ ಏಕೆ ಆತ್ಮವೇ...’ ಎಂದು ಕೇಳಿದರೆ; ಆತ-"ಇದೇ ನನ್ನ ಉತ್ತರ... ರಾ...ರಾ... ಸರಸಕು ರಾರಾ..." ಎನ್ನುತ್ತಾ ಮಾಯವಾಗುತ್ತಾನೆ!
ಆತ ಆಕೆಯ ಪ್ರೇಮಿ, ಗಂಡ, ಸ್ನೇಹಿತ, ಆತ್ಮೀಯ ಎಲ್ಲ ಆಗಿರುತ್ತಾನೆ. ಕೊನೆಗೆ ಅವನ ಮೇಲೆ ವಿಧಿಯ ಕಣ್ಣು ಬೀಳುತ್ತದೆ. ಅವನ ಎದೆಯನ್ನು ಒಂದೇ ಒಂದು ಗುಂಡು ಸೀಳುತ್ತದೆ. ಕೊನೆಗೆ ಅವನು ಅಂತರಾತ್ಮವಾಗಿರುತ್ತಾನೆ... ಅಲ್ಲಿಂದ ಕತೆ ಇನ್ನೊಂದು ದಿಕ್ಕಿನತ್ತ ಪಯಣ ಬೆಳೆಸುತ್ತದೆ.
ನಿರ್ದೇಶಕ ಶಂಕರ್ ನಿಜಕ್ಕೂ ಉತ್ತಮ ಕೆಲಸಗಾರ. ಚಿತ್ರದಲ್ಲಿ ಅದು ಕಾಣುತ್ತದೆ. ಕತೆಯ ಎಳೆ ಇಂಗ್ಲೀಷ್‌ನ "ಗೋಷ್ಟ್’ ಚಿತ್ರದ್ದು. ಆದರೆ, ಎಲ್ಲಾ ಕಡೆ ಇಲ್ಲಿತನ ಕಾಣುತ್ತದೆ. ಪ್ರತೀ ದೃಶ್ಯದಲ್ಲೂ ನಮ್ಮತನ ಗೋಚರವಾಗುತ್ತದೆ. ದೆವ್ವ, ಭೂತ, ಪ್ರೇತಗಳನ್ನು ನಂಬದ ವ್ಯಕ್ತಿಗಳ ಗುಂಡಿಗೆಯೂ ಒಮ್ಮೆ ಜರ‍್ಕ್ ಹೊಡೆಯುತ್ತದೆ. ಎಲ್ಲಕ್ಕಿಂತ ವಿಶೇಷ ಎಂದರೆ, ಚಿತ್ರದ ರೀರೆಕಾರ್ಡಿಂಗ್ ಹಾಗೂ ಹಾಡುಗಳು. ಮೂರು ಗುಣಮಟ್ಟದ ಹಾಡುಗಳನ್ನು ಕೊಟ್ಟಿದ್ದಾರೆ ಸಂಗೀತ ನಿರ್ದೇಶಕ ಗಿರಿಧರ್ ದೀವಾನ್. ಹಿಂದೆ ಅವರೇ ಮಾಡಿದ ಕಲಾಕಾರ್ ಚಿತ್ರದಲ್ಲೂ ಹಾಡುಗಳು ಸಖತ್ ಹಿಟ್ ಮಗಾ.
ಛಾಯಾಗ್ರಹಣದಲ್ಲಿ ರಿಚ್‌ನೆಸ್ ಕಾಣುತ್ತದೆ. ನಾಯಕ ಮಿಥುನ್ ತೇಜಸ್ವಿ ಭೂತಾತ್ಮವಾಗಿ ಗಮನ ಸೆಳೆಯುತ್ತಾರೆ. ಎಲ್ಲೋ ಒಂದು ಕಡೆ ಪಾತ್ರಪೋಷಣೆ ಸಪ್ಪೆ ಸಪ್ಪೆ ಎನಿಸಿದರೂ ಆ ಪಾತ್ರಕ್ಕೆ ಅದು ಹೊಂದಿಕೊಳ್ಳುತ್ತದೆ. ನಾಯಕಿ ವಿಶಾಖಾ ಸಿಂಗ್ ನಿಜಕ್ಕೂ ಗ್ಲ್ಯಾಮರಸ್, ನಕ್ಕರೆ ಕೆನ್ನೆಯಲ್ಲಿ ಬೀಳುವ ಗುಳಿಗಳು ಕಚಗುಳಿ ಇಡುತ್ತವೆ. ವಿಲನ್ ಪಾತ್ರಧಾರಿ ರೋಹನ್ ಗೌಡ ಅವರಿಗೆ ಉಜ್ವಲ ಭವಿಷ್ಯವಿದೆ. ಕನ್ನಡದಲ್ಲಿ ಖಳನಟರ ಕೊರತೆಯನ್ನು ಸಮರ್ಥವಾಗಿ ನೀಗಿಸಬಲ್ಲ ಎಲ್ಲಾ ಸಾಧ್ಯತೆಗಳೂ ಅವರಲ್ಲಿದೆ. ಪೋಷಕ ಪಾತ್ರಗಳಲ್ಲಿ ಹೈಲೈಟ್ ಆಗುವುದು ಉಮಾಶ್ರೀ. ಮೈಮೇಲೆ ದೆವ್ವ ಬಂದವರಂತೆ ಆಡುತ್ತಿದ್ದರೆ, ಜನ ಬಿದ್ದು ಬಿದ್ದು ನಗುತ್ತಾರೆ. ಅವರ ಕಾಮಿಡಿಯ ಟೈಮಿಂಗ್ ಅದ್ಭುತ. ಅವರಿಂದ ಕೆಲಸ ತೆಗೆಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ರಂಗಾಯಣ ರಘು ಕೂಡ ಅತಿಯಾಗಿ ಎಲ್ಲಿಯೂ ಕೂಗಾಡಿಲ್ಲ. ಅವರೂ ಅಂತರಾತ್ಮವಾಗಿದ್ದಾರೆ ಎನ್ನುವುದು ಇನ್ನೊಂದು ಸಸ್ಪೆನ್ಸ್ ವಿಷಯ! ಸುಮನ್ ರಂಗನಾಥ್ ಐಟಂ ಸಾಂಗಿಗೂ ಐಟಂ ಬಾಂಬಿಗೂ ವ್ಯತ್ಯಾಸ ಹೆಚ್ಚಿಲ್ಲ ಎಂದರೆ ನೀವು ನಗಬಾರದು!
ಸಂಕಲನದಲ್ಲಿ ಕೊಂಚ ವೇಗ ಇದ್ದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ಗ್ರಾಫಿಕ್ ಬಳಕೆಯಲ್ಲಿ ಇನ್ನಷ್ಟು ಹೊಸ ಸಾಧ್ಯತೆ ಬಳಸಿಕೊಳ್ಳಬಹುದಿತ್ತು. ಕೆಲವೇ ಕೆಲವು ಸಣ್ಣಪುಟ್ಟ ತಪ್ಪುಗಳನ್ನು ನಿವಾಳಿಸಿ ಬಿಸಾಕಿದರೆ, ಇಡೀ ಚಿತ್ರವನ್ನು ಒಮ್ಮೆ ನೋಡಬಹುದು. ಒಂದಷ್ಟು ಹೊತ್ತು ಹೊಸ ಲೋಕವೊಂದರ ದರ್ಶನ ಮಾಡಿಕೊಂಡು ಬರಬಹುದು.
ಉಳಿದದ್ದು ನಿಮ್ಮ ಬುದ್ಧಿ ಹಾಗೂ ಅಂತರಾತ್ಮಕ್ಕೆ ಬಿಟ್ಟಿದ್ದು!

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಆತ್ಮಾನಂದ... ಪರಮಾನಂದ... - Chitratara.com
Copyright 2009 chitratara.com Reproduction is forbidden unless authorized. All rights reserved.