Chief Editor
Manohar. R (Manu)
Photo Journalist
chitrataramanu@gmail.com
+91 9845549026
ಉಪ್ಪಿ ಜಗತ್ತಿನಲ್ಲಿ ಚಂದ್ರಯಾನ ಅದ್ದೂರಿ ಬ್ರಹ್ಮ, ನೋಡಲೇ ಬೇಕಾದ ಚಿತ್ರ
Posted date: 09 Sun, Feb 2014 01:49:42 PM

ಚಿತ್ರ-          ಬ್ರಹ್ಮ
ನಿರ್ದೇಶನ-  ಆರ್. ಚಂದ್ರು
ಸಂಗೀತ-     ಗುರುಕಿರಣ್
ತಾರಾಗಣ-   ಉಪೇಂದ್ರ, ಪ್ರಣೀತಾ, ರಂಗಾಯಣ ರಘು, ಸಂಗೀತ, ಡ್ಯಾನಿ ಕುಟ್ಟಪ್ಪ, ಸಯ್ಯಾಜಿ ಶಿಂದೆ, ರಾಹುಲ್ ದೇವ್, ನಾಜರ್, ಅನಂತ್ ನಾಗ್ ಮತ್ತಿತರರು

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಬಹುನಿರೀಕ್ಷಿತ `ಬ್ರಹ್ಮ`ಚಿತ್ರ ತೆರೆಕಂಡಿದೆ. ಹಾಗಾದರೆ ಚಿತ್ರ ಹೇಗಿದೆ? ಎನ್ನುವ ಪ್ರಶ್ನೆಗೆ ಯಾವುದೇ ಮುಲಾಜಿಲ್ಲದೆ ಹೇಳಬಹುದಾದ ಉತ್ತರ, ಉಪೇಂದ್ರ ಅಭಿಮಾನಿಗಳು ಶಿಳ್ಳೆ ಹಾಕಿಕೊಂಡು ನೋಡಹುದು. ಮೈಲಾರಿ ಚಿತ್ರದ ನಂತರ ನಿರ್ದೇಶಕ ಆರ್. ಚಂದ್ರು ಬ್ರಹ್ಮ ಸಿನಿಮಾ ಮೂಲಕ ಮತ್ತೊಂದು ಸಾಹಸಮಯ ಚಿತ್ರವನ್ನು ಕನ್ನಡ ಸಿನಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ. ವಿಶೇಷ ಅಂದ್ರೆ ಈ ಬಾರಿ ಸಾಹಸದ ಜೊತೆಗೆ ಒಂಚೂರಿ ಥ್ರಿಲ್ ಎನಿಸುವ ನಿರೂಪಣೆ, ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಕೊಡುವುದುರ ಜೊತೆಗೆ ಒಂದು ಗಟ್ಟಿ ಕಥೆಯನ್ನು ಬ್ರಹ್ಮನಒಡಲಿನಲ್ಲಿ ತುಂಬಿದ್ದಾರೆ. ಮಲೆಯಾಷಿಯಾದಲ್ಲಿ ಮೂರು ಕಥೆಗಳನ್ನು ಶುರುವಾದರೆ, ಆ ಮೂರು ಕಥೆಗಳ ಒಟ್ಟು ಜಾಡನ್ನು ಇಂಡಿಯಾಗೆ ತಂದು ನಿಲ್ಲಿಸುತ್ತಾರೆ. ಅಲ್ಲಲ್ಲಿ ಸಣ್ಣಪುಟ್ಟ ಗೊಂದಲ ಎನಿಸಿ, ಒಂದು ಮಟ್ಟಿಗೆ ಲ್ಯಾಗ್  ಎನಿಸಿದರೂ ಬ್ರಹ್ಮ ಫೈನಲಿ ಸೂಪರ್ ಎನ್ನುವುದಕ್ಕೆ ಅಡ್ಡಿ ಇಲ್ಲ ನೋಡಿ.
 ಉಪೇಂದ್ರ ಅಭಿಮಾನಿಗಳಂತೂ ನೋಡಲೇ ಬೇಕಾದ ಚಿತ್ರ ಇದಾಗಿರುವುದಲ್ಲದೇ, ಸಾಮಾನ್ಯ ಪ್ರೇಕ್ಷಕರೂ ನೋಡಬಹುದು ಎನ್ನುವುದಕ್ಕೆ ಮತ್ತೊಂದು ಕಾರಣ ಚಿತ್ರದಲ್ಲಿನ ಅದ್ದೂರಿ ಮೇಕಿಂಗ್, ಸುಂದರವಾದ ಲೋಕೇಷನ್ ಗಳು, ಕೇಳುವುದಕ್ಕೆ ಚೆಂದ ಎನಿಸುವ ಹಾಡು ಮತ್ತು ಸಂಗೀತ. ಹಾಗು ಸಾಧುಕೋಕಿಲಾರ ಕಾಮಿಡಿ ಟೈಮಿಂಗ್ ಈ ಎಲ್ಲ ಅಂಶಗಳು ಸೇರಿ ಬ್ರಹ್ಮನನ್ನು ನಿಜವಾಗಲೂ ಸ್ಯಾಂಡಲ್ ವುಡ್ ಬ್ರಹ್ಮ ಆಗಿಸುಲು ಸಾಕಷ್ಟು ಶ್ರಮ ಪಟ್ಟಿವೆ. ನಿರ್ದೇಶಕ ಚಂದ್ರು ಉಪೇಂದ್ರ ಅವರ ಉಪ್ಪಿಟು ಇಮೇಜ್ ಅನ್ನೇ ಇಟ್ಟುಕೊಂಡು ಅದರ ಜೊತೆಗೆ ತಮ್ಮದೇ ಮೇಕಿಂಗ್ ಸ್ಟೈಲ್ ಅನ್ನು ಅಳವಡಿಸಿಕೊಳ್ಳುವುದರ ಮೂಲಕ ಉಪ್ಪಿ ಜಗತ್ತಿನಲ್ಲಿ ಚಂದ್ರಯಾನ ಸಾಗಿದಂತೆ ಪ್ರೇಕ್ಷಕನಿಗೆ ಬಾಸವಾಗುತ್ತದೆ. ಮೂರು ಗೆಟಪ್ ಗಳಲ್ಲಿ ಕಾಣಿಸಿಕೊಂಡಿರುವುದು ಚಿತ್ರದ ಮತ್ತೊಂದು ಹೈಲೈಟ್ ಗಳಲ್ಲಿ ಒಂದು. ಚಿತ್ರದಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ರಂಗಾಯಣ ರಘು ಅವರ ಪಾತ್ರ ಮತ್ತು ಅವರ ಮ್ಯಾನರಿಸಂ. ನಿಜಕ್ಕೂ ಚಿತ್ರ ಮುಗಿದ ಕೂಡಲೇ ರಘು ಚಿತ್ರದ ಮೈನ್ ಪಿಲರ್ ನಂತೆ ಕಾಣತೊಡಗುತ್ತಾರೆ. ಅಷ್ಟರ ಮಟ್ಟಿಗೆ ರಂಗಾಣ ರಘು ಅದೃಷ್ಟವಂತನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಟಿಂಗು ಟಿಂಗು ಹಾಗೂ ಟೈಟಲ್ ಸಾಂಗ್ ಅಬ್ಬರ ಮೂಡಿಸಿದರೆ ಮಲೆಯಾಷಿಯಾದಲ್ಲಿ ಚಿತ್ರೀಕರಣಗೊಂಡಿರುವ ಡ್ಯೂಯೇಟ್ ಹಾಡು ಮನಸಿಗೆ ಮುದ ನೀಡುತ್ತದೆ.
 ಒಂದು ರಾಜವಂಶ. ತಲಾತಲಾಂತರಗಳಿಂದ ಆಡಳಿತ ನಡೆಸಿಕೊಂಡು ಬರುತ್ತಿರುವ ಈ ವಂಶ ಬಡಬಗ್ಗರಿಗೆ ದಾನ ಮಾಡುವುದುರಲ್ಲಿ ಎತ್ತಿದ ಕೈ. ಹಾಗೆ ಬಡವರಿಗೆ ದಾನ ಮಾಡಿದರೆನೇ ಈ ಬ್ರಹ್ಮರಾಜ ವಂಶಸ್ಥರ ರಾಜ ದರ್ಬಾರ್ ಉಳಿಯುವುದು ಎನ್ನುವುದು ಋಷಿ ಮುನಿಗಳ ಸೂಚನೆ. ಇದು ಒಂದು ಸಾಲಿನ ಮೂಲ ಕಥೆ. ಇದು ಮುಂದುವರೆದಂತೆ ದಾನ ಮಾಡಿ ಮಾಡಿ ಈ ವಂಶಸ್ಥರು ತಮಗೆ ತಿನ್ನಕ್ಕೆ ಅನ್ನ ಇಲ್ಲದೆ ನಡು ಬೀದಿಗೆ ಬರುತ್ತಾರೆ. ನಾಲ್ಕನೇ ತಲೆಮಾರಿನ ರಾಜಮನೆತನದ ಕುಡಿ ನಾಜರ್ ಮುಂದೆ ದಾನ ಮಾಡದಂತೆ ನಿರ್ಧರಿಸುತ್ತಾರೆ. ತಮ್ಮ ತಾತ, ಮುತ್ತಾಂದಿರುವ ಬಡವರಿಗೆ ಕೊಟ್ಟ ಆಸ್ತಿಪಾಸ್ತಿಗಳನ್ನು ಕಿತ್ತುಕೊಳ್ಳುವ ಮೂಲಕ ಅರಮನೆ ಜೀವನವನ್ನು ಮರಳಿ ಪಡೆಯುತ್ತಾನೆ. ಇವರಿಗೆ ಹುಟ್ಟುವ ಬ್ರಹ್ಮ ಕೂಡ ತನ್ನಂತೆಯೇ ಕೋಟಿ ಕೋಟಿ ಹಣ ಮಾಡುವ ಶ್ರೀಮಂತನಾಗಬೇಕು ಎಂದು ಕನಸು ಕಾಣುತ್ತಾನೆ. ಆದರೆ, ನಾಜರ್ ನಿರೀಕ್ಷೆ ಮಾಡಿದಂತೆ ಬ್ರಹ್ಮ ಕೋಟಿ ಕೋಟಿ ಕೊಳ್ಳೆ ಹೊಡೆಯುತ್ತಾನೆ. ಅದು ಕೂಡ ಶ್ರೀಮಂತ ವ್ಯಕ್ತಿಗಳಿಂದ. ಆದರೆ, ಆ ಹಣವನ್ನು ಈ ಏನು ಮಾಡುತ್ತಾನೆ, ಇಷ್ಟಕ್ಕೂ ತೀರಾ ಚಿಕ್ಕ ವಯಸ್ಸಿನಲ್ಲೇ ಮನೆ ಬಿಟ್ಟು ಹೋದ ಬ್ರಹ್ಮ ಮುಂದೆ ತನ್ನ ಮನೆ ಸೇರಿಕೊಳ್ಳುತ್ತಾನಾ, ಹೆತ್ತ ಅಪ್ಪನನ್ನೇ ಕೊಲೆ ಮಾಡುವುದಕ್ಕೆ ಆತ ಮುಂದಾಗುವುದಾದರು ಯಾಕೆ, ಅಲ್ಲದೆ ಇಲ್ಲಿ ಬ್ರಹ್ಮ ಬೇರೆ ಉಪ್ಪಿ ಬೇರೆನಾ ಎಂಬಿತ್ಯಾದಿ ಪ್ರಶ್ನೆಗಳು ನಿಮ್ಮದ್ದಾಗಿದ್ದರೆ ಒಮ್ಮೆ ಬ್ರಹ್ಮ ಚಿತ್ರವನ್ನು ನೋಡಲೇ ಬೇಕು.
 ಇಡೀ ಚಿತ್ರವನ್ನು ಪ್ಲ್ಯಾಷ್ ಬ್ಯಾಕ್ ನಲ್ಲೇ ನಿರೂಪಿಸುವ ನಿರ್ದೇಶಕ, ಆ ಪ್ಲ್ಯಾಷ್ ಬ್ಯಾಕ್ ನಲ್ಲೂ ಮತ್ತೊಂದಿಷ್ಟು ಪ್ಲ್ಯಾಷ್ ಕಥೆಗಳನ್ನು ಹೇಳುವ ಮೂಲಕ ನಿರ್ದೇಶನದ ಅಸಲಿ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ ಆರ್. ಚಂದ್ರು. ಮೊದಲ ಅರ್ಧ ಕಥೆ ಕಾಮಿಡಿಯಿಂದ ಶುರುವಾದರೆ, ವಿರಾಮದ ನಂತರ ಮುಖ್ಯ ಕಥೆ ಬಿಚ್ಚಿಕೊಳ್ಳುತ್ತದೆ. ಇಲ್ಲಿಂದ ಕಥೆ ಗಂಭೀರವಾಗುತ್ತ ಹೋಗುತ್ತಿದಂತೆ ಚಿತ್ರ ಕೊಂಚ ಲ್ಯಾಗ್ ಎನಿಸುವುದಕ್ಕೆ ಶುರು ಮಾಡಿದ ಕೂಡಲೇ ಚಿತ್ರ ಕ್ಲೈಮ್ಯಾಕ್ಸ್ ಹಂತಕ್ಕೆ ಬರುತ್ತದೆ. ಇಡೀ ಚಿತ್ರಕ್ಕೆ ಪೂರವಾಗಿ ಕೆಲಸ ಮಾಡಿರುವುದು ಛಾಯಾಗ್ರಹಣ ಹಾಗೂ ಹಿನ್ನೆಲೆ ಸಂಗೀತ. ಇನ್ನು ಗುರುಕಿರಣ್ ಸಂಗೀತ ಇಲ್ಲಿ ಮತ್ತೊಮ್ಮೆ ಮೋಡಿ ಮಾಡಿದೆ. ಎಂದಿನಂತೆ ಉಪೇಂದ್ರ ಅವರ ಸ್ಟೈಲಿನ ಸಾಹಸಗಳ ಹೊರತಾಗಿ ವಿಭಿನ್ನವಾಗಿ ಫೈಟ್ ಗಳನ್ನು ಕಂಪೋಸ್ ಮಾಡಲಾಗಿದೆ. ಚಿತ್ರದಲ್ಲಿ  ಅದೃಷ್ಟವಂತನ ಪಾತ್ರದಲ್ಲಿ ರಂಗಾಯಣ ರಘು, ಮನೆ ಜೀತಗಾರನ ಪಾತ್ರದಲ್ಲಿ ಸಾಧು ಕೋಕಿಲಾ ನಗಿಸಿದರೆ, ಚಿತ್ರದ ನಾಯಕಿ ಸಾಧ್ಯವಾದಷ್ಟು ಮುದ್ದಾಗಿ ಕಾಣಿಸಿಕೊಂಡಿದ್ದಾರೆ ಅಷ್ಟೆ. ಉಳಿದಂತೆ ಪೊಲೀಸ್ ಕಮಿಷನರ್ ಆಗಿ ಸಯ್ಯಾಜಿ ಶಿಂದೆ ಅಬ್ಬರಿಸಿದರೆ, ರಾಹುಲ್ ದೇವ್, ಶಂಕರ್ ಭಟ್, ಅನಂತ್ ನಾಗ್ ಹೀಗೆ ಬಂದು ಹಾಗೆ ಹೋಗುವ ಪಾತ್ರಗಳಾಗಿ ಮಾತ್ರ ಉಳಿಯದೆ ಬಂದಷ್ಟೆ ವೇಗವಾಗಿ ಸಾಯುತ್ತಾರೆ. ಆದರೆ, ವಿಶೇಷ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ನಾಯಕ ಉಪೇಂದ್ರ ಅವರಿಂದ ನಿರ್ದೇಶಕ ಹೇಳಿಸಿರುವ ಸಾಮಾಜಿಕ ಸಂದೇಶಕ್ಕಾದರೂ ಒಮ್ಮೆ ಈ ಚಿತ್ರವನ್ನು ನೋಡಬೇಕು ಎಂದರೆ ತಪ್ಪಾಗಲಿಕ್ಕಿಲ್ಲ.
- ಚಿತ್ರತಾರಾ ಡಾಟ್ ಕಂ


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಉಪ್ಪಿ ಜಗತ್ತಿನಲ್ಲಿ ಚಂದ್ರಯಾನ ಅದ್ದೂರಿ ಬ್ರಹ್ಮ, ನೋಡಲೇ ಬೇಕಾದ ಚಿತ್ರ - Chitratara.com
Copyright 2009 chitratara.com Reproduction is forbidden unless authorized. All rights reserved.