Chief Editor
Manohar. R (Manu)
Photo Journalist
chitrataramanu@gmail.com
+91 9845549026
ಗಾಲಿ ಜನಾರ್ದನ ರೆಡ್ಡಿ ಅವರಿಂದ ನಾಡಗೀತೆಗೆ ನುಡಿನಮನ
Posted date: 02 Thu, Nov 2017 02:19:43 PM
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಇದೀಗ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಗಾಯಕರಾಗಿಯೂ ಹೊರಹೊಮ್ಮಿದ್ದಾರೆ. ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಾಡಗೀತೆಗೆ ನುಡಿನಮನ ಸಲ್ಲಿಸಿರುವ ಅವರು, ಕುವೆಂಪು ರಚಿತ ಜಯ ಭಾರತ ಜನನಿಯ ತನುಜಾತೆ ಕವನಕ್ಕೆ ಹೊಸ ದೃಶ್ಯ ಕಾವ್ಯವನ್ನು ಹೆಣೆದಿದ್ದಾರೆ. 

ನಗರದ ಚಾಮುಂಡೇಶ್ವರಿ ಸ್ಟೂಡಿಯೋದಲ್ಲಿ ಮಂಗಳವಾರ ನಡೆದ ನಾಡಗೀತೆಗೆ ಧ್ವನಿ ನಮಯ ಕಾರ್ಯಕ್ರಮದಲ್ಲಿ ಈ ಸಿಡಿಯನ್ನು ಅನಾವರಣಗೊಳಿಸಲಾಯಿತು. ನಂತರ ಮಾತನಾಡಿದ ಅವರು, ಕನ್ನಡ ನಾಡಗೀತೆಯ ಬಗ್ಗೆ ಬಹಳಷ್ಟು ಒಲವು ಹೊಂದಿದ್ದೇನೆ. ರಾಜ್ಯ ಸರಕಾರ ನಾಡಗೀತೆ ಎಂದು ಘೋಷಿಸಿದ ಬಳಿಕ ಆ ಗೀತೆ ಹಾಡುವಾಗಲೆಲ್ಲಾ ಭಾವಪರವಶನಾಗುತ್ತಿದ್ದೆ. ಕನ್ನಡ ರಾಜ್ಯೋತ್ಸವದ ಹಿನ್ನಲೆಯಲ್ಲಿ ರಾಜ್ಯದ ಜನತೆಗೆ ಹೊಸದೊಂದು ಪ್ರಯತ್ನದ ನಾಡಗೀತೆಯನ್ನು ನೀಡುವುದು ನಮ್ಮ ಉದ್ದೇಶವಾಗಿತ್ತು ಎಂದರು. 

ಈ ನಾಡಗೀತೆ ನಿರ್ದೇಶಕ ಅಯ್ಯಪ್ಪ ಪಿ ಶರ್ಮಾ ಅವರ ಪರಿಕಲ್ಪನೆಯಲ್ಲಿ ಮೂಡಿ ಬಂದಿದ್ದು, ನಾಡಗೀತೆಯ ಛಾಯಾಗ್ರಹಣ ರಾಜೇಶ್ ಕಾಟ ಅವರದ್ದಾಗಿದೆ. ಸಂಗೀತ ಕೌಶಿಕ್ ಹರ್ಷ ಅವರದ್ದಾಗಿದೆ, ಕಲೆ ಶಶಿಧರ್ ಅಡಪ ಮತ್ತು ಸಂಕಲನ ಲಕ್ಷ್ಮಣ್ ರೆಡ್ಡಿ ಮಾಡಿದ್ದಾರೆ ಎಂದರು. ಶಾಲಾ ದಿನಗಳಿಂದಲೇ ಸಂಗೀತ, ನಾಟಕದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ. ವಿಎಚ್‌ಪಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದೆ. ಅಲ್ಲದೆ, ಸಾಹಿತ್ಯದಲ್ಲಿ ಆಸಕ್ತಿ ಇರುವ ಕಾರಣ ೧೮ನೇ ವಯಸ್ಸಿನಲ್ಲಿ ಚಿತ್ರರಂಗ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ನಂತರದ ದಿನದಲ್ಲಿ ಉದ್ಯಮ, ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದರಿಂದ ಹೆಚ್ಚಿನ ಗಮನ ಆ ಕಡೆ ನೀಡಲಾಗಲಿಲ್ಲ ಎಂದರು. 

ವಿನೂತನ ಸಂಗೀತದಿಂದ ಸಿದ್ದಗೊಂಡಿರುವ ಈ ನಾಡಗೀತೆಯನು ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರಸಾರ ಮಾಡುವ ಉದ್ದೇಶ ಹೊಂದಿದ್ದೇವೆ. ಕನ್ನಡಾಂಬೆಯ ಪ್ರೀತಿಗೆ ಎಲ್ಲರೂ ಪಾತ್ರರಾಗಿ ಸುಂದರ ನಾಡಿನ ಗತವೈಭವ ಸದಾ ಮೆರೆಯುವಂತಾಗಲು ನನ್ನ ಚಿಕ್ಕ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದೇನೆ ಎಂದು ಅವರು ತಿಳಿಸಿದರು. 

ನಾನು ಪೋಲೀಸ್ ಕಾನ್ಟೇಬಲ್ ಮಗ. ಶಾಲಾ ದಿನಗಳಲ್ಲಿ ವಿಶ್ವಹಿಂದು ಪರಿಷತ್ ಆಯೋಜಿಸುವ ರಾಮಾಯಣ ಮತ್ತು ಮಹಾಭಾರತ ಪಠಣ ಪರೀಕ್ಷೆಯಲ್ಲಿ ರಾಜ್ಯಕ್ಕೇ ಪ್ರಥಮ ರ‍್ಯಾಂಕ್ ಪಡೆದಿದ್ದೆ. ಎಲ್ಲಾ ಸಂಧರ್ಭಗಳಲ್ಲೂ ನನ್ನನ್ನೂ ಸೂಜಿಗಲ್ಲಿನಂತೆ ಸೆಳೆದಿದ್ದು ನಾಡಗೀತೆ. ಅಮೇರಿಕಾದ ಮ್ಯಾಂಚೆಸ್ಟರ್‌ನಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಭಾಗವಹಿಸಿದ್ದ ಸಂಧರ್ಭದಲ್ಲಿ ನಾನು ನಾಡಗೀತೆಗೆ ಧ್ವನಿಗೂಡಿಸಿದ್ದೇನೆ. ನಾನು ದೊಡ್ಡ ಗಾಯಕ ಅಲ್ಲದೇ ಹೋದರೂ ಕೂಡಾ ನಾಡಗೀತೆಗೆ ದನಿಗೂಡಿಸಿದ್ದೇನೆ. 

ನಾನು ಮೊದಲಿನಿಂದಲೂ ನಾಡು ನುಡಿಯ ಬಗ್ಗೆಯೂ ಕೂಡಾ ಅಭಿಮಾನ ಹೊಂದಿದ್ದೇನೆ. ಮೊದಲಿನಿಂದಲೂ ಕನ್ನಡ ಚಿತ್ರರಂಗ ನನ್ನನ್ನು ಸೂಜಿಗಲ್ಲಿನಂತೆ ಸೆಳೆದಿದೆ. ಈ ಹಿನ್ನಲೆಯಲ್ಲಿ ಮುಂಬರುವ ದಿನಗಳಲ್ಲಿ ರಾಜ್ಯದ ಚಿತ್ರರಂಗದಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುವ ಉದ್ದೇಶ ಹೊಂದಿದ್ದೇನೆ. ಅಲ್ಲದೆ, ರಾಜಕೀಯ ಹಾಗೂ ಚಲನ ಚಿತ್ರರಂಗ ಎರಡೂ ನನ್ನ ಕಣ್ಣುಗಳು ಎಂದರು. 

ಕಾರ್ಯಕ್ರಮದಲ್ಲಿ ಸಂಜಯ ಬೆಟಗೇರಿ ಸೇರಿದಂತೆ ಹಲವರು ಭಾಗವಹಿಸಿದ್ದರು. 
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಗಾಲಿ ಜನಾರ್ದನ ರೆಡ್ಡಿ ಅವರಿಂದ ನಾಡಗೀತೆಗೆ ನುಡಿನಮನ - Chitratara.com
Copyright 2009 chitratara.com Reproduction is forbidden unless authorized. All rights reserved.