ಕರ್ನಾಟಕದ ನಗರ ಮತ್ತು ಗ್ರಾಮೀಣ ಮಾರುಕಟ್ಟೆಯಲ್ಲಿ ಜೀ಼ ಕನ್ನಡ ವಾಹಿನಿ ಎಲ್ಲ ಕನ್ನಡಿಗರ ಮನೆ ಮಾತಾಗಿದೆ. ತನ್ನ ಉತ್ಕಟ ವೀಕ್ಷಕರಿಗೆ ಜೀ಼ ಕನ್ನಡ ನೀಡಿರುವ ಇತ್ತೀಚಿನ ಮನರಂಜನೆಯ ಉಡುಗೊರೆ - ‘ಜೊತೆ ಜೊತೆಯಲಿ'. ವಯಸ್ಸು, ಅಂತಸ್ತು, ಜೀವನ ಶೈಲಿ ಎಲ್ಲದರಲ್ಲೂ ಆಕಾಶ ಭೂಮಿಯಷ್ಟು ಅಂತರ ಇರುವ ಈ ಜೋಡಿಯ ಪ್ರೇಮಕಥೆಯೇ ಈ ಧಾರಾವಾಹಿಯ ಹೂರಣ.
ಕನ್ನಡದ ಜನಪ್ರಿಯ ವಾಹಿನಿ ಜೀ಼ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಎಲ್ಲರ ಮನಗೆದ್ದ ಧಾರಾವಾಹಿ “ಜೊತೆ ಜೊತೆಯಲಿ” ಸಾಮಾಜಿಕ ಜಾಲತಾಣದಲ್ಲೂ ಅತ್ಯಂತ ಜನಪ್ರಿಯವಾಗಿದೆ. ಈ ಧಾರಾವಾಹಿಯ ಶೀರ್ಷಿಕೆ ಗೀತೆಯನ್ನು ಯೂಟ್ಯೂಬ್ ನಲ್ಲಿ ಒಂದು ಕೋಟಿ ಮೀರಿ ವೀಕ್ಷಿಸಿದ್ದಾರೆ.
ಸುನಾದ್ ಗೌತಮ್ ಸಂಗೀತ ಸಂಯೋಜನೆಯ ಈ ಗೀತೆಯನ್ನು ಹರ್ಷಪ್ರಿಯ ಭದ್ರಾವತಿ ರಚಿಸಿದ್ದಾರೆ. ನಿನಾದ ನಾಯಕ್, ನಿಹಾಲ್ ತಾವ್ರೊ, ರಜತ್ ಹೆಗ್ಡೆ ಹಾಡಿದ್ದಾರೆ.
ಜೊತೆ ಜೊತೆಯಲ್ಲಿ ಧಾರಾವಾಹಿ ಕನ್ನಡ ಕಿರುತೆರೆ ಇತಿಹಾಸದಲ್ಲಿಯೇ ಅತ್ಯಂತ ಜನಪ್ರಿಯ ಧಾರಾವಾಹಿಯಾಗಿದ್ದು ಅನಿರುದ್ಧ್, ಮೇಘಾ ಶೆಟ್ಟಿ, ಆರೂರು ಜಗದೀಶ್, ವಿಜಯಲಕ್ಷ್ಮಿ ಸಿಂಗ್ ಮುಂತಾದವರ ಮನೋಜ್ಞ ಅಭಿನಯದಿಂದ ಜನಪ್ರಿಯವಾಗಿದೆ. ಲಾಕ್ ಡೌನ್ ತೆರವಾದ ನಂತರವೂ ಜೊತೆ ಜೊತೆಯಲಿ ಧಾರಾವಾಹಿಯನ್ನು ವೀಕ್ಷಕರು ಅತ್ಯಂತ ಪ್ರೀತಿಯಿಂದ ಸ್ವಾಗತಿಸಿ ವೀಕ್ಷಿಸುತ್ತಿದ್ದು ಕನ್ನಡದ ಅಪಾರ ಜನಪ್ರಿಯ ಧಾರಾವಾಹಿಯಾಗಿದೆ.
ಶೀರ್ಷಿಕೆ ಗೀತೆ ಒಂದು ಕೋಟಿಗೂ ಹೆಚ್ಚು ವೀಕ್ಷಣೆ ತಂದಿರುವುದು ಜೊತೆ ಜೊತೆಯಲಿ ಧಾರಾವಾಹಿ ತಂಡಕ್ಕೂ ಜೀ಼ ಕನ್ನಡ ವಾಹಿನಿ ಬಳಗಕ್ಕೂ ಅಪಾರ ಸಂತೋಷ ತಂದಿದೆ.
ಈ ಕುರಿತು ತಮ್ಮ ಸಂತೋಷ ಹಂಚಿಕೊಂಡ ಜೀ಼ ಕನ್ನಡ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು, “ಜೊತೆ ಜೊತೆಯಲಿ ಶೀರ್ಷಿಕೆ ಗೀತೆ ಯೂಟ್ಯೂಬ್ ನಲ್ಲಿ ಒಂದು ಕೋಟಿಗೂ ಹೆಚ್ಚು ವೀಕ್ಷಣೆ ಪಡೆದಿರುವುದು ನನಗೆ ಬಹಳ ಸಂತೋಷ ತಂದಿದೆ. ಇದು ಕನ್ನಡ ಕಿರುತೆರೆ ಇತಿಹಾಸದಲ್ಲಿಯೇ ಮಹತ್ತರ ಮೈಲಿಗಲ್ಲಿನ ಸಾಧನೆಯಾಗಿದೆ. ಜೊತೆ ಜೊತೆಯಲಿ ಧಾರಾವಾಹಿಯ ಜನಪ್ರಿಯತೆಗೆ ಇದು ಸಾಕ್ಷಿಯಾಗಿದೆ. ಈ ಗೀತೆಯ ಸಂಗೀತ ಸಂಯೋಜನೆ, ಗೀತರಚನೆಗೆ ಸಂದ ಗೌರವವಾಗಿದೆ” ಎಂದರು.