Chief Editor
Manohar. R (Manu)
Photo Journalist
chitrataramanu@gmail.com
+91 9845549026
ಪವರ್‌ಸ್ಟಾರ್ ಜಾಲಿ ಬಾರು ಮತ್ತು ಪೋಲಿ ಹುಡುಗರು ಚಿತ್ರದ ಟ್ರೇಲರ್ ರಿಲೀಸ್ ಮಾಡಿದರು
Posted date: 17 Mon, Jul 2017 07:21:19 PM
ಕಾರಂಜಿ ಎಂಬ ಚಿತ್ರ ನಿರ್ದೇಶನ ಮಾಡಿ ಚಿತ್ರರಂಗದಲ್ಲಿ ಅದೇ ಹೆಸರಿನ ವಿಶೇಷಣದ ಜೊತೆಗೆ ಎಂದೇ ಗುರುತಿಸಿಕೊಂಡವರು ಕಾರಂಜಿ ಶ್ರೀಧರ್. ತೀರಾ ಇತ್ತೀಚೆಗೆ ‘ಲಿಫ್ಟ್ ಮ್ಯಾನ್’ ಎನ್ನುವ ಕಲಾತ್ಮಕ ಸಿನಿಮಾವನ್ನು ಕೂಡಾ ನಿರ್ದೇಶಿಸಿದ್ದ ಶ್ರೀಧರ್ ಅವರ ನಿರ್ದೇಶನದಲ್ಲಿಯೇ ಮೂಡಿ ಬಂದಿರುವ ‘ಜಾಲಿ ಬಾರು ಮತ್ತು ಪೋಲಿ ಹುಡುಗರು‘ ಎಂಬ ಪಕ್ಕಾ ಕಮರ್ಷಿಯಲ್ ಚಿತ್ರವೀಗ ಬಿಡುಗಡೆಗೆ ತಯಾರಾಗಿದೆ.
 
ಇದರ ಪೂರ್ವಭಾವಿಯಾಗಿ ‘ಜಾಲಿ ಬಾರು ಮತ್ತು ಪೋಲಿ ಹುಡುಗರು‘ ಚಿತ್ರದ ಟ್ರೇಲರ್ ಹಾಗೂ ವೀಡಿಯೋ ಹಾಡುಗಳನ್ನು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಇತ್ತೀಚೆಗೆ ಬಿಡುಗಡೆ ಮಾಡಿದರು. ಪುನೀತ್ ರಾಜ್ ಕುಮಾರ್ ಅವರು ಮಾತನಾಡುತ್ತಾ “ನಮ್ಮ ಡಾರ್ಲಿಂಗ್ ಕೃಷ್ಣ ಅವರ ‘ಜಾಲಿ ಬಾರು ಮತ್ತು ಪೋಲಿ ಹುಡುಗರು‘ ಸಿನಿಮಾ ಟ್ರೇಲರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡೋಕೆ ಬಹಳ ಖುಷಿಯಾಗುತ್ತಿದೆ. ಈಗಾಗಲೇ ನಾನು ಈ ಸಿನಿಮಾದ ಎರಡು ಹಾಡುಗಳನ್ನು ನೋಡಿದ್ದೀನಿ. ಮೇಕಿಂಗ್ ಕೂಡಾ ತುಂಬಾನೇ ಚನ್ನಾಗಿ ಬಂದಿದೆ. ವೀರ್‌ಸಮರ್ಥ್ ಅವರು ಅದ್ಭುತವಾದ ಟ್ಯೂನ್‌ಗಳನ್ನು ಕಂಪೋಸ್ ಮಾಡಿದ್ದಾರೆ. ಡೈರೆಕ್ಟರ್ ಕಾರಂಜಿ ಶ್ರೀಧರ್ ಅವರಿಗೂ ಸೇರಿದಂತೆ ಎಲ್ಲರಿಗೂ ಈ ಸಿನಿಮಾ ಹೆಸರು ತಂಡುಕೊಡಲಿ ಎಂದು ಶುಭ ಹಾರೈಸಿದರು.
 
ಅರವತ್ತರ ದಶಕದಲ್ಲಿ ಯೌವನದ ಬಿಸಿಯಲ್ಲಿ ಹೊಸಾ ಅನುಭವದ ಅನ್ವೇಷಣೆಗೆ ತೊಡಗಿ ಬಾರ್ ಕಮ್ ಪಬ್ಬು ಹೊಕ್ಕಿದ್ದ ಕವಿ ಬಿ ಆರ್ ಲಕ್ಷ್ಮಣರಾಯರು ಬರೆದದ್ದು ‘ಜಾಲಿಬಾರಿನಲ್ಲಿ ಪೋಲಿ ಹುಡುಗರು, ಗೋಪಿಯನ್ನು ಪಾಪ ಗೇಲಿ ಮಾಡುತ್ತಿದ್ದರು ಎಂಬ ಭಾವಗೀತೆ. ಇದು ಆ ಕಾಲದಲ್ಲಿಯೇ ಭಲೇ ಫೇಮಸ್ಸಾಗಿತ್ತು. ಹಾಡು ಹಳೆಯದಾದರೂ ಈವತ್ತಿಗೂ ಈ ಗೀತೆ ಏರು ಯೌವ್ವನದ ತಹತಹಿಕೆಯ ಪ್ರತೀಕವಾಗಿಯೇ ಉಳಿದುಕೊಂಡಿದೆ.
 
ಇಂಥಾ ಪ್ರಖ್ಯಾತ ಹಾಡಿನ ಸಾಲುಗಳನ್ನೇ ಶೀರ್ಷಿಕೆಯಾಗಿಟ್ಟುಕೊಂಡು ಶ್ರೀಧರ್ ಅವರು ರುಚಿಕಟ್ಟಾದ ಚಿತ್ರ ಕಥೆಯೊಂದನ್ನು ಹೆಣೆದಿದ್ದಾರೆ. ಹಾಸ್ಯ, ರೋಚಕತೆ, ಪ್ರಣಯ ಸೇರಿದಂತೆ ಅನೇಕ ಭಾವಗಳ ಸಮ್ಮಿಳಿತ ಸ್ಥಿತಿಯಲ್ಲಿ ರೂಪುಗೊಂಡಿರೋ ಈ ಚಿತ್ರದಲ್ಲಿ ಮದರಂಗಿ ಕೃಷ್ಣ ನಾಯಕನಾಗಿ ಅಭಿನಯಿಸಿದ್ದಾರೆ. 
 
ಸಣ್ಣದೊಂದು ಊರಲ್ಲಿ ನಡೆಯುವ ಈ ಕಥೆ ಸಾಲದ ಸುತ್ತಲಿನ ರಸವತ್ತಾದ ಕಥೆಯೊಂದಿಗೆ ರಾಜಕಾರಣದ ಪಟ್ಟುಗಳನ್ನೂ ಸೇರಿಸಿಕೊಂಡು ರೋಚಕವಾಗಿ ಮುಂದುವರೆಯುತ್ತದೆಯಂತೆ. ಇದೊಂದು ಹಾಸ್ಯ ಪ್ರಧಾನ ಚಿತ್ರವಾದರೂ ಮದರಂಗಿ ಕೃಷ್ಣರದ್ದಿಲ್ಲಿ ಮಾಸ್ ಶೇಡ್ ಇರೋ ಪಾತ್ರವಂತೆ. ಆದಷ್ಟು ಬೇಗನೆ ಈ ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ಸಿದ್ದತೆ ನಡೆಸುತ್ತಿದೆ.
 
ವೀರಸಮರ್ಥ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ವಿಷ್ಣುವರ್ಧನ್ ಅವರ ಛಾಯಾಗ್ರಹಣವಿದೆ. ಸುರೇಶ್ ಸಂಕಲನವಿರುವ ಈ ಚಿತ್ರಕ್ಕೆ ಕ್ರಿಶ್ ಜೋಶಿ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಸಿಲ್ವರ್ ಫ಼ೆದರ್ ಸಂಸ್ಥೆ ನಿರ್ಮಿಸಿರುವ ಈ ಚಿತ್ರಕ್ಕೆ ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ, ಚಿಕ್ಕಣ್ಣ, ಮಾನ್ಸಿ, ವೀಣಾ ಸುಂದರ್, ಜಹಂಗೀರ್, ಮೈಕೋ ನಾಗರಾಜ್, ಕಲ್ಯಾಣಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. 
 

 

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಪವರ್‌ಸ್ಟಾರ್ ಜಾಲಿ ಬಾರು ಮತ್ತು ಪೋಲಿ ಹುಡುಗರು ಚಿತ್ರದ ಟ್ರೇಲರ್ ರಿಲೀಸ್ ಮಾಡಿದರು - Chitratara.com
Copyright 2009 chitratara.com Reproduction is forbidden unless authorized. All rights reserved.