Chief Editor
Manohar. R (Manu)
Photo Journalist
chitrataramanu@gmail.com
+91 9845549026
ಪುನೀತ್ ರಾಜ್‌ಕುಮಾರ್- ಚರಣ್‌ರಾಜ್ ಆತ್ಮೀಯ ಭೇಟಿ!
Posted date: 13 Tue, Feb 2018 09:18:46 AM
ನಟ ಚರಣ್‌ರಾಜ್ ಕನ್ನಡದಲ್ಲಿ ಮೊದಲನೇ ಸಲ ಒಂದು ಚಿತ್ರವನ್ನು ನಿರ್ದೇಶನ ಮಾಡಲು ಮುಂದಾಗಿರೋ ಬಗ್ಗೆ ಇತ್ತೀಚೆಗೆ ಸುದ್ದಿಯಾಗಿತ್ತು. ಇದೀಗ ಆ ಹಿನ್ನೆಲೆಯಲ್ಲಿಯೇ ಕೆಲಸ ಕಾರ್ಯಗಳನ್ನು ನಡೆಸುತ್ತಿರುವ ಚರಣ್ ರಾಜ್ ಮೊನ್ನೆ ಬೆಂಗಳೂರಿಗೆ ಬಂದಿದ್ದಾಗ ಅಚಾನಕ್ಕಾಗಿ ಎದುರುಗೊಂಡ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಜೊತೆ ಆತ್ಮೀಯವಾಗಿ ಮಾತುಕತೆ ನಡೆಸಿದ್ದಾರೆ. ಇಬ್ಬರೂ ಕೂಡಾ ಹಳತನ್ನೆಲ್ಲ ನೆನಪಿಸಿಕೊಂಡು, ಹೊಸಾ ಕನಸುಗಳ ಬಗ್ಗೆ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಚರಣ್‌ರಾಜ್ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿರುವಾಗಲೇ ತಮಿಳುನಾಡಿನಲ್ಲಿಯೂ ನಾಯಕ ನಟನಾಗಿ ಹೊರ ಹೊಮ್ಮಿದ್ದವರು. ಡಾ.ರಾಜ್‌ಕುಮಾರ್ ಕುಟುಂಬದ ಜೊತೆ ಆತ್ಮೀಯವಾದ ಒಡನಾಟ ಇಟ್ಟುಕೊಂಡಿದ್ದ ಚರಣ್‌ರಾಜ್ ಪಾರ್ವತಮ್ಮ ರಾಜ್‌ಕುಮಾರ್ ಅವರಿಗೂ ಅಚ್ಚುಮೆಚ್ಚಿನವರಾಗಿದ್ದರು. ಆದರೆ ಪಾರ್ವತಮ್ಮನವರು ಮರಣ ಹೊಂದಿದಾಗ ಅವರು ಮಲೇಶಿಯಾದಲ್ಲಿದ್ದರಂತೆ. ಅಂತಿಮ ದರ್ಶನವನ್ನೂ ಪಡೆಯಲಾಗದ ಕೊರಗಿನಲ್ಲಿದ್ದ ಚರಣ್ ರಾಜ್ ಅದನ್ನು ನೀಗಿಕೊಳ್ಳಲು ಮೊನ್ನೆ ದಿನ ಬೆಂಗಳೂರಿಗೆ ಬಂದಿದ್ದಾಗ ಪಾರ್ವತಮ್ಮ ಅವರ ಸಮಾಧಿಗೆ ತೆರಳಿ ನಮನ ಸಲ್ಲಿಸಿದ್ದರು.
ಹೀಗೆ ಪಾರ್ವತಮ್ಮ ಮತ್ತು ರಾಜ್‌ಕುಮಾರ್ ಅವರ ಸಮಾಧಿಗೆ ನಮನ ಸಲ್ಲಿಸಿ ವಾಪಾಸಾಗುತ್ತಿದ್ದಾಗಲೇ ಚರಣ್‌ರಾಜ್ ಅವರಿಗೆ ಪುನೀತ್ ರಾಜ್‌ಕುಮಾರ್ ಎದುರಾಗಿದ್ದರು. ಪುನೀತ್ ಅತ್ಯಂತ ಸೌಜನ್ಯದಿಂದಲೇ ಚರಣ್‌ರಾಜ್ ಅವರನ್ನು ಮಾತಾಡಿಸಿದರಂತೆ. ಪುನೀತ್ ಸ್ವತಃ ಚರಣ್ ನಿಮ್ಮ ಜೊತೆ ಸಿನಿಮಾ ಮಾಡಲು ಕಾಲ ಕೂಡಿ ಬರಲೇ ಇಲ್ಲ ಅಂತ ಪ್ರಸ್ತಾಪ ಮಾಡಿದಾಗ ಚರಣ್ ರಾಜ್ ಈಗಾಗಲೇ ಶಿವಣ್ಣನ ಜೊತೆಗೆಲ್ಲ ಸಿನಿಮಾ ಮಾಡಿದ್ದೇನೆ. ನಿಮ್ಮ ಜೊತೆಗೂ ನಟಿಸಬೇಕೆಂಬ ಆಸೆ ಇದೆ. ಯಾವಾಗ ಕರೆದರೂ ನಾನು ರೆಡಿಯಾಗಿರುತ್ತೇನೆ. ದೊಡ್ಡಮನೆಯ ಸಿನಿಮಾ ಮಾಡೋದಕ್ಕಿಂತ ಭಾಗ್ಯ ಬೇರೇನಿದೆ ಅಂದಿದ್ದಾರೆ. ಬೇಗನೆ ಒಟ್ಟಿಗೆ ಸಿನಿಮಾ ಮಾಡೋ ಕಾಲ ಹತ್ತಿರದಲ್ಲಿದೆ ಎಂದೂ ಪುನೀತ್ ಹೇಳಿದ್ದಾರಂತೆ. ಇದೇ ಸಂದರ್ಭದಲ್ಲಿ ಪಾರ್ವತಮ್ಮನವರು ತಮ್ಮ ಬಗ್ಗೆ ಹೊಂದಿದ್ದ ಪ್ರೀತಿಯನ್ನೂ ಕೂಡಾ ಚರಣ್ ರಾಜ್ ನೆನಪಿಸಿಕೊಂಡಿದ್ದಾರೆ. ಸಿಕ್ಕಿದಲ್ಲೆಲ್ಲಾ ‘ಇಲ್ಲೆಲ್ಲೋ ಹುಟ್ಟಿದ ನೀನು ಬೇರೆ ಭಾಷೆಯಲ್ಲಿ ಹೋಗಿ ಹೆಸರು ಮಾಡಿದ್ದನ್ನು ಕಂಡರೆ ಹೆಮ್ಮೆ ಅನಿಸುತ್ತೆ, ನೀನು ನನ್ನ ಮಗನಿದ್ದಂತೆ ಅನ್ನುತಿದ್ದ ಪಾರ್ವತಮ್ಮನವರನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ.
ತಮ್ಮನ್ನು ಕಂಡಾಕ್ಷಣ ತಾವೇ ಬಂದು ಮಾತಾಡಿಸಿದ ಪುನೀತ್ ರಾಜ್‌ಕುಮಾರ್ ಅವರ ಸೌಜನ್ಯಕ್ಕೆ ಚರಣ್‌ರಾಜ್ ಫಿದಾ ಆಗಿದ್ದಾರೆ. ಅಷ್ಟು ದೊಡ್ಡ ಸ್ಟಾರ್ ನಟನಾಗಿದ್ದರೂ ಯಾವ ಹಮ್ಮು ಬಿಮ್ಮೂ ಇಲ್ಲದೆ ತಂದೆಯವರಾದ ರಾಜ್‌ಕುಮಾರ್ ಅವರಂತೆಯೇ ಸೌಜನ್ಯ ರೂಢಿಸಿಕೊಂಡಿರೋ ಪುನೀತ್ ಅವರ ಬಗ್ಗೆ ಚರಣ್‌ರಾಜ್ ಅಭಿಮಾನ ವ್ಯಕ್ತ ಪಡಿಸಿದ್ದಾರೆ. ಪುನೀತ್ ಅವರೇ ಚರಣ್ ರಾಜ್ ಅವರ ಮಗ ತೇಜನ ಸಿನಿಮಾ ಯಾನದ ಕುರಿತು ಮಾತಾಡಿ ಮೆಚ್ಚುಗೆಯನ್ನೂ ಸೂಚಿಸಿದ್ದಾರೆ.
ಅಂತೂ ಕನ್ನಡದಲ್ಲಿಯೇ ಮತ್ತೊಂದು ಇನ್ನಿಂಗ್ಸ್ ಆರಂಭಿಸಲು ತಯಾರಿ ನಡೆಸಿರೋ ಚರಣ್‌ರಾಜ್ ಅವರಿಗೆ ಪುನೀತ್ ಭೇಟಿ ಮತ್ತಷ್ಟು ಹುರುಪು ತುಂಬಿದೆ. ಏಪ್ರಿಲ್ ೨೭ರಂದು ತಮ್ಮ ಹುಟ್ಟು ಹಬ್ಬದ ದಿನದಂದೇ ಚರಣ್ ರಾಜ್ ನಿರ್ದೇಶನದ ಚಿತ್ರಕ್ಕೆ ಚಾಲನೆ ಸಿಗಲಿದೆ. 
ಈ ಚಿತ್ರವನ್ನು ಮಂಜುನಾಥ್ ಎಂಆರ್‌ಎಲ್, ಎನ್ ರವಿ ಕುಮಾರ್, ಎಸ್‌ವಿಕೆ ಬ್ರದರ್ಸ್, ಸಿ ದೇವೇಂದ್ರ ರಾಜ್ ಸೇರಿದಂತೆ ಸ್ನೇಹಿತರೇ ಸೇರಿಕೊಂಡು ನಿರ್ಮಾಣ ಮಾಡಲಿದ್ದಾರೆ. ಚಿತ್ರಕ್ಕೆ ಕಥೆ ಚಿತ್ರಕಥೆ ಮತ್ತು ನಿರ್ದೇಶನವನ್ನು ಚರಣ್ ರಾಜ್ ಅವರೇ ಮಾಡಲಿದ್ದಾರೆ. ಸಾಯಿಕೃಷ್ಣ ಸಂಭಾಷಣೆ ಬರೆಯಲಿದ್ದಾರೆ. ಈ ಚಿತ್ರದ ನಾಯಕ ಮತ್ತು ನಾಯಕಿಗಾಗಿ ಹುಡುಕಾಟ ಚಾಲ್ತಿಯಲ್ಲಿದೆ. ಕನ್ನಡದ ಖ್ಯಾತ ಕಾಮಿಡಿ ನಟರೋರ್ವರು ಮುಖ್ಯಪಾತ್ರವೊಂದನ್ನು ಮಾಡಲಿದ್ದಾರಂತೆ.
ಚರಣ್ ರಾಜ್ ಅವರ ಪುತ್ರ ತೇಜ್ ಕೂಡಾ ಈ ಚಿತ್ರದ ಭಾಗವಾಗಲಿದ್ದಾರೆಂಬುದು ಅಸಲೀ ವಿಶೇಷ. ತೇಜ್ ಈ ಚಿತ್ರದಲ್ಲಿ ಒಂದು ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಆ ಹಾಡೂ ಕೂಡಾ ಒಟ್ಟಾರೆ ಕಥೆಯಲ್ಲಿ ಪ್ರಧಾನ ಪಾತ್ರ ಹೊಂದಿರಲಿದೆ. ಅಂದಹಾಗೆ ಚರಣ್ ರಾಜ್ ಪುತ್ರ ತೇಜ್ ಈಗ ತಮಿಳಿನಲ್ಲಿ ಬಹು ಬೇಡಿಕೆಯ ನಾಯಕ ನಟ. ತೇಜ್ ಅಭಿನಯದ ಲಾಲಿ ಎಂಬ ಚಿತ್ರ ಈಗಾಗಲೇ ಬಿಡುಗಡೆಯಾಗಿದೆ. ಇನ್ನೊಂದು ಚಿತ್ರ ತೆರೆಕಾಣುವ ಸನ್ನಾಹದಲ್ಲಿದೆ.
ಒಟ್ಟಾರೆಯಾಗಿ ಚರಣ್ ರಾಜ್ ಇನ್ನೂ ಹೆಸರಿಡದ ಈ ಚಿತ್ರದ ಮೂಲಕ ನಿರ್ದೇಶಕರಾಗಿ ಹೊರ ಹೊಮ್ಮುತ್ತಿದ್ದಾರೆ. ಅವರಿಗೆ ಕನ್ನಡ ಪ್ರೇಕ್ಷಕರ ಅಭಿರುಚಿ ಗೊತ್ತಿರೋದರಿಂದ ಅದಕ್ಕೆ ತಕ್ಕುದಾದ ವಿಶೇಷವಾದೊಂದು ಕಥೆಯನ್ನು ರೆಡಿ ಮಾಡಿಕೊಂಡಿದ್ದಾರಂತೆ. ಬಹುಶಃ ಇಷ್ಟರಲ್ಲೇ ಈ ಚಿತ್ರದ ಹೆಸರು ಮತ್ತು ತಾರಾಗಣದ ನಿಖರ ವಿವರವನ್ನು ಚರಣ್ ರಾಜ್ ಜಾಹೀರು ಮಾಡಲಿದ್ದಾರೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಪುನೀತ್ ರಾಜ್‌ಕುಮಾರ್- ಚರಣ್‌ರಾಜ್ ಆತ್ಮೀಯ ಭೇಟಿ! - Chitratara.com
Copyright 2009 chitratara.com Reproduction is forbidden unless authorized. All rights reserved.