ಈ ಹಿಂದೆ ಬಂಗಾರಿ, ಶಿವನಪಾದ ಎಂಬ ಚಲನಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದ ಮಾ. ಚಂದ್ರು ಈಗ ಮತ್ತೊಂದು ಚಿತ್ರಕ್ಕೆ ಕೈ ಹಾಕಿದ್ದಾರೆ. ಅವರೇ ಕತೆ, ಚಿತ್ರಕತೆ ಹಾಗೂ ಸಂಭಾಷಣೆಯನ್ನು ಬರೆದು ನಿರ್ದೇಶನ ಮಾಡುತ್ತಿರುವ ಬೆಟ್ಟದ ದಾರಿ. ಈ ಚಿತ್ರದ ಹಾಡುಗಳ ಧ್ವನಿಮುದ್ರಣ ಕಾರ್ಯ ಇತ್ತೀಚೆಗೆ ನಡೆಯಿತು. ಹಳ್ಳಿಯೊಂದರ ಅಭಿವೃದ್ಧಿಗಾಗಿ ತುಂಟ ಹುಡುಗರು ಹೇಗೆ ತಮ್ಮ ಕೊಡುಗೆಯನ್ನು ನೀಡಿದರು ಎಂಬ ಕಥಾ ಹಂದರವನ್ನು ಹೊಂದಿರುವ ಈ ಚಿತ್ರದಲ್ಲಿ ದೇಸೀಯ ಕ್ರೀಡೆಗಳಾದ ಕುಂಟಬಿಲ್ಲೆ, ಬುಗುರಿಯಾಟ, ಚಿನ್ನು ದಾಂಡು ನಂಥಾ ಆಟಗಳನ್ನು ನೆನಪಿಸುವಂಥಾ ಕ್ರೀಡೆಗಳನ್ನು ಈ ಚಿತ್ರದಲ್ಲಿ ಪ್ರಮುಖವಾಗಿ ಬಳಸಿಕೊಳ್ಳಲಾಗಿದೆ.
ಹಂಸಲೇಖಾ ಸ್ಟುಡಿಯೋದಲ್ಲಿ ಪತ್ರಕರ್ತ ವಿಜಯ್ ಭರಮಸಾಗರ ರಚಿಸಿರುವ ಬೆಳ್ಳಕ್ಕಿ ಸಾಲಂತೆ ಹಾರಾಡೋ ಆಸೆ ಈಗ ಎಂಬ ಹಾಡಿನೊಂದಿಗೆ ಒಟ್ಟು ನಾಲ್ಕು ಹಾಡುಗಳನ್ನು ವೀರ್ ಸಮರ್ಥ್ ಅವರ ಸಂಗೀತ ಸಂಯೋಜನೆಯಲ್ಲಿ ಧ್ವನಿಮುದ್ರಿಸಿಕೊಳ್ಳಲಾಯಿತು. ಜನವರಿ ತಿಂಗಳಲ್ಲಿ ಬಿಜಾಪುರ, ಬಸವನಬಾಗೇವಾಡಿ ಹಾಗೂ ಬೆಂಗಳೂರು ಸುತ್ತ ಮುತ್ತ ಚಿತ್ರೀಕರಣ ನಡೆಯಲಿದೆ.
ಹೀರಾ ಲಾಲ್ ಮೂವೀಸ್ ಸಂಸ್ಥೆಯಲ್ಲಿ ಚಂದ್ರಕಲಾ ಟಿ.ಆರ್., ಮಂಜುನಾಥ ಹೆಚ್. ನಾಯ್ಕ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಂದಕುಮಾರ್ ಛಾಯಾಗ್ರಹಣ, ವೀರ್ ಸಮರ್ಥ್ ಸಂಗೀತ, ಅರ್ಜುನ್ (ಕಿಟ್ಟಿ) ಸಂಲನ, ಡಾ. ವಿ. ನಾಗೇಂದ್ರ ಪ್ರಸಾದ್, ವಿಜಯ್ ಭರಮಸಾಗರ, ಕೆ. ಕಲ್ಯಾಣ್ ಸಾಹಿತ್ಯ, ಕಂಬಿರಾಜ್, ಮುರಳಿ ನೃತ್ಯ ನಿರ್ದೇಶನವಿದೆ. ಮಾ. ನಿಶಾಂತ್ ಟಿ. ರಾಥೋಡ್, ಲಕ್ಷ್ಮಿಶ್ರೀ, ರಂಗನಾಥ್ ಯಾದವ್, ಅಮೋಘ ನವನಿಧಿ ತಾರಾಬಳಗದಲ್ಲಿದ್ದು, ಉಳಿತ ಕಲಾವಿದರು ಮತ್ತು ತಾಂತ್ರಿಕ ವರ್ಗದ ಆಯ್ಕೆ ನಡೆಯುತ್ತಿದೆ.