Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮಾಸ್ ಲೀಡರ್ ಹಾಡುಗಳ ವೈಭವ
Posted date: 13 Thu, Jul 2017 10:13:13 AM
೨೦೧೭ರ ಬಹು ನಿರೀಕ್ಷಿತ, ಅದ್ದೂರಿ ವೆಚ್ಚದ, ಬಹು ತಾರಾಗಣದ ಮಾಸ್ ಲೀಡರ್ ಚಿತ್ರದ ಧ್ವನಿಸಾಂದ್ರಿಕೆಯನ್ನು ಭಾನುವಾರ ಅಂಬೇಡ್ಕರ್ ಭವನದಲ್ಲಿ  ತೆಲುಗು ಸೂಪರ್ ಸ್ಟಾರ್ ನಂದಮೂರಿ ಬಾಲಕೃಷ್ಣ ಲೋಕಾರ್ಪಣೆ ಮಾಡಿದರು. 
 
ಚಿತ್ರದಲ್ಲಿ ನಟಿಸಿದವರೆಲ್ಲರೂ ವೇದಿಕೆಗೆ ಬಂದು ಚುಟುಕು ಮಾತುಗಳನ್ನು ಹೇಳಿದರು. ಸರದಿಯಂತೆ ಯೋಗಿ ಮೂರು ಪದಗಳಲ್ಲಿ ಶಿವಣ್ಣರನ್ನು ಹೊಗಳಿದರು.  ಕರೆ ಬಂದಾಗ ನಂಬಲಿಕ್ಕೆ ಆಗಲಿಲ್ಲ. ಮೊದಲ ದೃಶ್ಯ ಫೈಟ್. ಅದರಲ್ಲಿ ಶಿವಣ್ಣ ಒಂದು ಲುಕ್ ಕೊಟ್ಟಿದ್ದು ಸೂಪರ್ ಆಗಿತ್ತು. ನಾವೆಲ್ಲರೂ ಒಟ್ಟಿಗೆ ಊಟ ಮಾಡಿದ್ದೇವೆ. ಇಂತಹ ಅನುಭವ ಜೀವನದಲ್ಲಿ ಮರೆಯಲಾಗುವುದಿಲ್ಲ ಅಂತಾರೆ ಗುರುಜಗ್ಗೇಶ್. ಶಿವಣ್ಣರಲ್ಲಿ ತಾಳ್ಮೆ ಇದೆ. ಶೀರ್ಷಿಕೆ ಅವರಿಗೆ ಹೋಲುತ್ತದೆ ಎಂಬ ನುಡಿ ಶರ್ಮಿಳಾಮಾಂಡ್ರೆ ಅವರದು. ಎಲ್ಲಾ ತರಹದ ಹಾಡುಗಳಿಗೆ ಶಿವಣ್ಣ ನಟಿಸಿದ್ದಾರೆ. ಆದರೂ ಒಂದು ಹಾಡು ಬರೆಯುವುದು ಛಾಲೆಂಜಿಂಗ್ ಆಗಿತ್ತು. ಚಿತ್ರಕತೆ ಪ್ರಾರಂಭದಿಂದಲೂ ತಂಡದೊಂದಿಗೆ ಇದ್ದೇನೆ ಎಂದರು ಚೇತನ್‌ಕುಮಾರ್. ನಿರ್ದೇಶಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ:ವಿ.ನಾಗೇಂದ್ರಪ್ರಸಾದ್ ಹಾಗೂ ಕವಿರಾಜ್ ಸಹ ಮಾಸ್ ಲೀಡರ್ ಚಿತ್ರಕ್ಕೆ ಹಾಡು ಬರೆದಿದ್ದು ತಮ್ಮ ಅನುಭವ ಹಂಚಿಕೊಂಡರು. ಕನ್ನಡ ಸಿನಿಮಾಗಳಿಗೆ ಪ್ರೋತ್ಸಾಹ ಕೊಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
 
ನಮ್ಮಂತವರಿಗೆ ಶಿವಣ್ಣ ಪ್ರೋತ್ಸಾಹ ನೀಡುತ್ತಿರುವುದು ಅವರ ದೊಡ್ಡ ಗುಣ ಎಂಬ ಹೊಗಳಿಕೆ ಮಾತುಗಳು ಮೇಘನಾಗಾಂವ್ಕರ್‌ರಿಂದ ಕೇಳಿಬಂತು.  ಸಂಗೀತ ನಿರ್ದೇಶಕ ವೀರ ಸಮರ್ಥ್ ಚಿತ್ರದ ಸಂಗೀತದ ಬಗ್ಗೆ ಹೇಳಿಕೊಂಡರು. ನಾಯಕಿ ಪ್ರಣಿತಾ ಚಿತ್ರ ಹಾಗೂ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ನಿರ್ದೇಶಕ ನರಸಿಂಹ ಚಿತ್ರದ ಬಗ್ಗೆ ಮಾತನಾಡಿ, ತಮಗೆ ಸಹಕಾರ ನೀಡಿದ ಎಲ್ಲಾ ಕಲಾವಿದರು ಹಾಗೂ ತಂತ್ರಜ಼್ಞರಿಗೆ ಧನ್ಯವಾದ ತಿಳಿಸಿದರು. 
 
ನಿರ್ಮಾಪಕ ತರುಣ್ ಶಿವಪ್ಪ ಹಾಗೂ ಹಾರ್ಧಿಕ್ ಗೌಡ ಸಹ ಮಾತನಾಡಿ ಮಾಸ್ ಲೀಡರ್ ಚಿತ್ರದ ಅನುಭವಗಳನ್ನು ಹಂಚಿಕೊಂಡರು. 
ಪವರ್‌ಸ್ಟಾರ್ ಪುನೀತ್‌ರಾಜ್‌ಕುಮಾರ್ ಮಾಸ್ ಲೀಡರ್ ಚಿತ್ರದ ಟೀಸರ್ ನೋಡಿ ಸೂಪರ್ ಅನಿಸಿತು ಎಂದು ತಿಳಿಸುತಾ ಮೂವರು ಅಣ್ಣಂದಿರ(ಶಿವಣ್ಣ, ಜಗ್ಗಣ್ಣ, ಬಾಲಣ್ಣ) ಮಾತುಗಳನ್ನು ಕೇಳಲು ಉತ್ಸುಕನಾಗಿದ್ದೇನೆ. ನಮ್ಮ ಇಡೀ ಕುಟುಂಬ ಬಾಲಣ್ಣನಿಗೆ ಪರಿಚಯವಿದೆ. ಅಭಿಮಾನಿಗಳಿಗೆ ಅಣ್ಣ ಮಾಸ್ ಲೀಡರ್, ಮನೆಯಲ್ಲಿ ನಮಗೆಲ್ಲರಿಗೂ ಸಿಂಪ್ಲಸಿಟಿ ಲೀಡರ್ ಎಂದು ಪುನೀತ್ ಹೇಳಿದರು. 
 
ಕನ್ನಡಿಗರು ಚಿತ್ರರಂಗವನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಇತ್ತೀಚಿನ ಚಿತ್ರಗಳು ಹಿಟ್ ಆಗುತ್ತಿರುವುದು ಸಾಕ್ಷಿಯಾಗಿದೆ. ಡಾ.ರಾಜ್‌ಕುಮಾರ್ ನಮ್ಮಲ್ಲೆ ಇದ್ದಾರೆ. ಅವರು ಇಲ್ಲೆ ಮೂಲೆಯಲ್ಲಿ ನಿಂತು ಎಲ್ಲರನ್ನು ನೋಡುತ್ತಾ ಆರ್ಶಿವಾದ ಮಾಡುತ್ತಿದ್ದಾರೆ.  ಸಂಪ್ರದಾಯ ವಂಶಸ್ಥರಿಂದ ಬಂದ ಶಿವಣ್ಣ ರೀಲ್‌ನಲ್ಲಿ ಮಾತ್ರ ಲೀಡರ್ ಆಗಿರದೆ, ರಿಯಲ್‌ನಲ್ಲೂ ಲೀಡರ್ ಆಗಿದ್ದಾರೆ. ಎಲ್ಲರನ್ನು ಜೊತೆಯಲ್ಲಿ ಕರೆದುಕೊಂಡು, ಪ್ರೀತಿಸುತ್ತಾ, ಎಲ್ಲರಲ್ಲಿ ತಾನು ಒಬ್ಬ ಅಂತು ತಿಳಿದುಕೊಂಡಿರುವುವವರು ಲೀಡರ್ ಆಗುವುದು. ಎಲ್ಲರಿಗೂ ಸಹಾಯ ಮಾಡಿ ಅವರ ಪ್ರವರ್ಧನೆಯನ್ನು ಬಯಸುವ ಹಾದಿಯಲ್ಲಿ ನಾನು ಇದ್ದೇನೆ. ಚಿತ್ರದ ಪರಿಕಲ್ಪನೆ ಅದ್ಬುತವಾಗಿದೆ. ರಾಷ್ಟ್ರಮಟ್ಟಿಗೆ ಗುರುತು ಸಿಗುವಂತೆ ನಿರ್ದೇಶನ ಮಾಡಿದ್ದಾರೆ. ಅವರ ಇಮೇಜ್ ಇನ್ನು ಎತ್ತರಕ್ಕೆ ಕರೆದುಕೊಂಡು ಹೋಗಲಿ. ಕನ್ನಡಿಗರ ಚಪ್ಪಾಳೆಯಿಂದ ನೂರು ದಿವಸ ಓಡಲಿ. ಅಂದು ಮತ್ತೆ ಮಾತನಾಡುತ್ತೇನೆ ಎಂದರು ಜಗ್ಗೇಶ್. ಇದರ ಮಧ್ಯೆ ಆಶಿಕಾ, ಶರ್ಮಿಳಾಮಾಂಡ್ರೆ, ನಾಯಕಿ ಪ್ರಣಿತಾ ಸುಭಾಷ್ ಹಾಡಿಗೆ ಹೆಜ್ಜೆ ಹಾಕಿ ರಂಜಿಸಿದರು.
 
ಚಿತ್ರೀಕರಣ ಸಂದರ್ಭದಲ್ಲಿ ನಿರ್ಮಾಪಕ, ನಿರ್ದೇಶಕರಿಗೆ ಬೈದಿದ್ದು ಉಂಟು. ಅವೆಲ್ಲವು ಪ್ರೀತಿಯಿಂದ ಅಷ್ಟೇ. ಟ್ರೈಲರ್‌ನ್ನು ಸುಂದರವಾಗಿ ತೋರಿಸಿದ್ದು, ಭಾವನೆಗಳನ್ನು ಚೆನ್ನಾಗಿ ಹೇಳಿದ್ದಾರೆ. ವಿಜಯ್‌ರಾಘವೇಂದ್ರ, ಗುರುಜಗ್ಗೇಶ್, ಯೋಗಿ, ಪ್ರಣೀತಾ ಎಲ್ಲಾ ಪಾತ್ರಗಳು ಲೀಡರ್ ಜೊತಗೆ ಬರುತ್ತದೆ ಎಂದು ತಿಳಿಸಿದ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಚಿತ್ರ ಹಾಗೂ ಚಿತ್ರತಂಡದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. 
    ನಂದಮುರಿ ಬಾಲಕೃಷ್ಣರ ಕೈಗೆ ಮೈಕ್ ತಲುಪಿದಾಗ ಅವರು ಕನ್ನಡ ಅಭಿಮಾನಿಗಳಿಗೆ ನಮಸ್ಕಾರ, ರಾಜಕುಮಾರ್ ಅಭಿಮಾನಿಗಳಿಗೆ ನಮಸ್ಕಾರ ಎಂದು ಕನ್ನಡದಲ್ಲೇ ಮಾತು ಆರಂಭಿಸಿದರು. ವರನಟ ರಾಜ್‌ಕುಮಾರ್ ಅವರ ಮಕ್ಕಳು ನನಗೆ ತಮ್ಮಂದಿರು. ಕನ್ನಡ ಅಂದರೆ ರಾಜ್‌ಕುಮಾರ್, ರಾಜಕುಮಾರ್ ಅಂದರೆ ಕನ್ನಡ ಎಂದ ಬಾಲಕೃಷ್ಣ ಅವರು ಚಿತ್ರದ ಹಾಡುಗಳು, ಟ್ರೇಲರ್ ತುಂಬಾ ಚೆನ್ನಾಗಿದೆ ಚಿತ್ರ ಕೂಡ ಯಶಸ್ವಿಯಗುವುದರಲ್ಲಿ ಸಂದೇಹವೇ ಇಲ್ಲ ಎಂದು ಹಾರೈಸಿದರು.   
   ರಾಜ್‌ಕುಮಾರ್ ಹಾಗೂ ಎನ್‌ಟಿಆರ್ ಸಂಬಂಧವನ್ನು ಮೆಲುಕು ಹಾಕಿ ಮಾತನಾಡಿದ ಬಾಲಕೃಷ್ಣ, ಅವರಿಬ್ಬರು ಚಿತ್ರರಂಗದ ಎರಡು ಮುತ್ತುಗಳು ಎಂದರು.  ಮತ್ತೆ ಮಾತು ಮುಂದು ವರೆಸುತ್ತಾ ಗೌತಮಿಪುತ್ರ ಚಿತ್ರದಲ್ಲಿ ಶಿವಣ್ಣ ನಟಿಸಿದ್ದು  ಖುಷಿ ಕೊಟ್ಟಿದೆ. ಅದಕ್ಕಾಗಿ ಶಿವಣ್ಣ ಹಾಗೂ ಕರ್ನಾಟಕ ಪ್ರಜೆಗಳಿಗೆ ಧನ್ಯವಾದ ತಿಳಿಸಿದರು.
 
ಮುಂದೆ ಮಾಸ್ ಲೀಡರ್ ೧೦೦ ದಿನ ಓಡಲಿ, ಶಿವಣ್ಣ ಯಾವಾಗಲೂ ಚೆನ್ನಾಗಿ ಇರಲಿ. ನನಗೆ ಅವರನ್ನು ಕಂಡರೆ ತುಂಬಾ ಇಷ್ಟ ಅಂತ ನಿರೂಪಕಿ  ಹೇಳಿಕೊಟ್ಟಿದ್ದನ್ನು ಬಾಲಣ್ಣ ಕನ್ನಡದಲ್ಲಿ ಹೇಳಿದರು. ಧ್ವನಿಸಾಂದ್ರಿಕೆ ಬಿಡುಗಡೆ ನಂತರ ರಾಷ್ಟ್ರಗೀತೆಯೊಂದಿಗೆ ಸುಂದರ ಕಾರ್ಯಕ್ರಮಕ್ಕೆ ಮಂಗಳ ಹಾಡಲಾಯಿತು. ನಿರ್ಮಾಪಕ ತರುಣ್‌ಶಿವಪ್ಪ-ಹಾರ್ಧಿಕ್‌ಗೌಡ, ನಿರ್ದೇಶಕ ನರಸಿಂಹರವರ ಅಚ್ಚುಕಟ್ಟಾದ ಯೋಜನೆಯಂತೆ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ಸಮಾರಂಭದಲ್ಲಿ ಗೀತಾ ಶಿವರಾಜಕುಮಾರ್, ರಾಗಿಣಿ, ಗಿರಿಜಾಲೋಕೇಶ್, ಗುರುನಂದನ್, ಪ್ರಕಾಶ್ ಬೆಳವಾಡಿ, ನಿರ್ದೇಶಕ ಚೇತನ್, ಡಾ:ನಾಗೇಂದ್ರಪ್ರಸಾದ್, ಕವಿರಾಜ್, ಲಹರಿವೇಲು, ಬೇಬಿ ಪರಿಣಿತ ಸೇರಿದಂತೆ ಚಿತ್ರರಂಗದ ಸದಸ್ಯರು ಹಾಗೂ ಅನೇಕ ಗಣ್ಯರು ಹಾಜರಿದ್ದರು. ಚಿತ್ರವು ಆಗಸ್ಟ್ ಎರಡನೆ ವಾರದಂದು ಬಿಡುಗಡೆಯಾಗುವ ಸಾದ್ಯತೆ ಇದೆ. 
 
GALLERY
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮಾಸ್ ಲೀಡರ್ ಹಾಡುಗಳ ವೈಭವ - Chitratara.com
Copyright 2009 chitratara.com Reproduction is forbidden unless authorized. All rights reserved.