Chief Editor
Manohar. R (Manu)
Photo Journalist
chitrataramanu@gmail.com
+91 9845549026
ರಾಣಾ ಸುನಿಲ್ ಕುಮಾರ್ ಸಿಂಗ್ ನಟನೆಗೆ
Posted date: 13 Thu, Jul 2017 01:19:14 PM
ಪ್ರತಿಯೊಬ್ಬ ನಿರ್ದೇಶಕನಲ್ಲೂ ಒಬ್ಬ ನಟ ಇದ್ದೇ ಇರುತ್ತಾನೆ ಅನ್ನೋ ಮಾತಿದೆ. ನಿಜ, ಇಲ್ಲದಿದ್ದರೆ ಒಂದೇ ಸಿನಿಮಾದಲ್ಲಿ ಅಷ್ಟೊಂದು ಕಲಾವಿದರನ್ನು ಸಂಬಾಳಿಸಿ ‘ಕ್ಯಾಪ್ಟನ್ ಅನ್ನಿಸಿಕೊಳ್ಳುವುದು ಸುಲಭದ ಮಾತಲ್ಲ. ಇದಕ್ಕೀಗ ಸ್ಪಷ್ಟ ನಿದರ್ಶನದಂತೆ ಕಾಣುತ್ತಿರುವುದು ನಿರ್ದೇಶಕ ಸುನಿಲ್ ಕುಮಾರ್ ಸಿಂಗ್. ಗೋಧೂಳಿ, ತುಳಸಿ, ಯಾವ ಜನ್ಮದ ಮೈತ್ರಿಯಂಥ ಟಿ ವಿ ಧಾರವಾಹಿಗಳಲ್ಲದೆ, ಕಳೆದ ನಾಲ್ಕು ವರ್ಷಗಳ ಹಿಂದೆ ತೆರೆಗೆ ಬಂದಿದ್ದ ‘ಮದುವೆ ಮನೆ’ ಸಿನಿಮಾ ನಿರ್ದೇಶನ ಮಾಡಿದ್ದವರು ಇದೇ ಸುನೀಲ್ ಕುಮಾರ್ ಸಿಂಗ್. ಸದ್ಯ ಸುನೀಲ್ ಕುಮಾರ್ ‘ತಿತಿತಿ.ಮೀನಾ ಬಜಾರ್’ ಸಿನಿಮಾದ ಮೂಲಕ ಐದು ಪ್ರಮುಖ ಪಾತ್ರಗಳಲ್ಲಿ ತಾವೂ ಪ್ರಧಾನ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಈ ಚಿತ್ರದ ಮೂಲಕ ತಮ್ಮ ಹೆಸರಿನ ಹಿಂದೆ ರಾಣಾ ಸೇರಿಸಿಕೊಂಡು ರಾಣಾ ಸುನಿಲ್ ಕುಮಾರ್ ಸಿಂಗ್ ಆಗಿದ್ದಾರೆ.
ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ತಯಾರಾಗುತ್ತಿರುವ ಈ ಚಿತ್ರಕ್ಕೆ ಸ್ವತಃ ಸುನೀಲ್ ಕುಮಾರ್ ಸಿಂಗ್ ಅವರೇ ಕಥೆ, ಚಿತ್ರಕತೆ ಬರೆದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಆರಂಭದಲ್ಲಿ ಅನೇಕ ಹೆಸರಾಂತ ನಿರ್ದೇಶಕರ ಧಾರಾವಾಹಿಗಳ ಸಂಚಿಕೆ ನಿರ್ದೇಶಕರಾಗಿ, ನಂತರ ಧಾರಾವಾಹಿಗಳ ಸ್ವತಂತ್ರ್ಯ ನಿರ್ದೇಶಕರಾಗಿ, ನಂತರ ಸಿನಿಮಾ ನಿರ್ದೇಶನ ಆರಂಭಿಸಿ, ಈಗ ಸಿನಿಮಾ ನಟನೆಯನ್ನೂ ಆರಂಭಿಸಿರುವ ಸುನಿಲ್ ಕುಮಾರ್ ಸಿಂಗ್ ತೀರಾ ಸಣ್ಣ ವಯಸ್ಸಿನಿಂದಲೇ ಅಕ್ಷರದ ಒಡನಾಟದಲ್ಲಿ  ಬೆಳೆದಿದ್ದರಿಂದ ಬಹುಶಃ ಅವರಿಗೆ ಈ ಕಲಾ ಜಗತ್ತು ಕೈ ಹಿಡಿದಂತಿದೆ.
ಸರಿಸುಮಾರು ಐದನೇ ತರಗತಿಯಲ್ಲಿದ್ದಾಗ ಇವರ ಮನೆಯಲ್ಲಿ ಕನ್ನಡದ ಬಹುತೇಕ ಎಲ್ಲ ವಾರಪತ್ರಿಕೆಗಳು, ದಿನಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಕಥೆ, ಕಾದಂಬರಿಗಳನ್ನು ಓದಲು ಶುರು ಮಾಡಿದ್ದರಿಂದ ಕನ್ನಡ ಭಾಷೆಯ ಮೇಲಿನ ಹಿಡಿತ ಮತ್ತು ಕತೆಗಳಲ್ಲಿ ಬರುವ ಪಾತ್ರಗಳ ಮೇಲೆ ಮೋಹ ಉಂಟಾಗಿತ್ತಂತೆ. ಹೀಗಾಗಿ ರಾಣಾ ಸುನಿಲ್ ಕುಮಾರ್ ಸಿಂಗ್ ಅವರಿಗೆ ಪ್ರೌಡ ಶಾಲೆ ಓದುತ್ತಾ ಇರುವಾಗಲೇ ನಟನೆಯ ಬಗ್ಗೆ ಆಸಕ್ತಿ ಇತ್ತು. ಹರಿಕಥೆ, ಹಾರ್ಮೋನಿಯಂ ಶಬ್ದಗಳ ಜೊತೆಗೆ ಬೆಂಗಳೂರಿನ ಕೋಣನಕುಂಟೆ ಆಸುಪಾಸಿನಲ್ಲಿ ಅಹೋರಾತ್ರಿ ಪ್ರದರ್ಶನಗೊಳ್ಳುತ್ತಿದ್ದ ಕೆಲವು ನಾಟಕಗಳನ್ನು ನೋಡುತ್ತಲೇ ಕಲೆಯ ಬಗ್ಗೆ ಪ್ರೇರಿತರಾಗಿದ್ದರು.
ಕಾಲೇಜಿಗೆ ಬಂದಾಗ ‘ಬಂಡವಾಳ ಇಲ್ಲದ ಬಡಾಯಿ’ ಕೈಲಾಸಂ ನಾಟಕದಲ್ಲಿ ದೃಶ್ಯವೊಂದರ ನಿರ್ದೇಶನ ಸರಿಯಾಗಿಲ್ಲ ಎಂದು ಗುರುಗಳಾದ ದಿವಸ್ಪತಿ ಹೆಗ್ಗಡೆ ಅವರು ಇಡೀ ನಾಟಕವನ್ನು ಪಕ್ಕಕ್ಕೆ ತಳ್ಳಿದ್ದರು. ಆಗ ಸುನಿಲ್ ಕುಮಾರ್ ಸಿಂಗ್ ಆ ದೃಶ್ಯವನ್ನು ಚೊಕ್ಕ ಮಾಡಿ ಅದು ಸ್ಪರ್ಧೆಗೆ ಹೋಗುವಂತೆ ನೋಡಿಕೊಂಡರು. ಕಿರಿ ವಯಸ್ಸಿನಲ್ಲಿ ‘ಸ್ನೇಹ ಸಮೂಹ’ ಎಂಬ ತಂಡ ಸಹ ಸ್ಥಾಪಿಸಿ ೧೩ ನಾಟಕಗಳನ್ನು ನಿರ್ದೇಶನ ಮಾಡಿದವರು ಇವರು. ಹೀಗಾಗಿ, ಇವರ ಒಳ ಮನಸಿನಲ್ಲಿ ನಟನೆಯ ತುಡಿತ ಇದ್ದೇ ಇತ್ತು.
ಬಿ ಈ ಎಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಾ ಇರುವಾಗಲೇ ನಾಟಕ ನಿರ್ದೇಶನದಲ್ಲಿ ಸೈ ಅನ್ನಿಸಿಕೊಂಡವರು ಆನಂತರ ಗುರುದತ್, ಎನ್ ಎಸ್ ರಾಜಕುಮಾರ್ ಅವರ ಜೊತೆ ಸೇರಿ ‘ಗೋಧೂಳಿ’ ಧಾರವಾಹಿಗೆ ಬರುವುದಕ್ಕೂ ಮುಂಚೆ ಟಿ ಎನ್ ಸೀತಾರಾಂ ಹಾಗೂ ಟಿ ಎಸ್ ನಾಗಾಭರಣ ಅವರ ಬಳಿ ಸಾಹಾಯಕರಾಗಿ ಕೆಲಸ ಕಲಿತರು. ಸುನಿಲ್ ಕುಮಾರ್ ಸಿಂಗ್ ‘ಗೋಧೂಳಿ’ ಧಾರಾವಾಹಿಯಲ್ಲಿ ಮಾರನಯಕನ ಪಾತ್ರ ಮಾಡಿದ್ದು ಆ ಧಾರಾವಾಹಿ ಮೂರು ವರ್ಷಗಳ ಕಾಲ ಉದಯ ವಾಹಿನಿಯಲ್ಲಿ ಪ್ರಸಾರವಾಯಿತು. 
ರಾಣಾ ಸುನಿಲ್ ಕುಮಾರ್ ಸಿಂಗ್ ಅವರು ಅಂದಿನಿಂದ ಬಹುತೇಕ ವ್ಯಕ್ತಿಗಳಿಂದ ಕೇಳಿದ್ದು ಒಂದು ಮಾತು ‘ನೀವು ನಟನೆ ಮಾಡುತ್ತೀರ ಅಲ್ಲವೇ ಎಂದು’. ಈ ಮಾತು ಸಹ ನನ್ನನ್ನು ನಟನಾಗಿ ಪರಿವರ್ತಿಸಿತು ಎಂದು ಅವರು ಹೇಳಿಕೊಳ್ಳುತ್ತಾರೆ.
ಅವರ ನಿರ್ದೇಶನದ ‘ಮೀನ ಬಜಾರ್ ಸಿನಿಮಾಕ್ಕೆ ಜಿಮ್‌ನಲ್ಲಿ ಕಸರತ್ತು ಮಾಡಿ, ಸಾಕಷ್ಟು ತೂಕ ಇಳಿಸಿಕೊಂಡು ಕ್ಯಾಮರಾ ಮುಂದೆ ಬಂದಿದ್ದಾರೆ. ‘ಮೀನ ಬಜಾರ್’ ೭೦ ರಷ್ಟು ಚಿತ್ರೀಕರಣವನ್ನು ಕನ್ನಡ ಹಾಗೂ ತೆಲುಗು ಭಾಷೆಯಲಿ ಮುಗಿಸಿಕೊಂಡಿದೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ರಾಣಾ ಸುನಿಲ್ ಕುಮಾರ್ ಸಿಂಗ್ ನಟನೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.