ಇದು ಕನ್ನಡಾಂಬೆಗೆ ಸಂದ ಗೌರವ ಅಂದರು ವೇಲು...
ಕನ್ನಡದಲ್ಲಿ ನಾನಾ ಪ್ರಾಕಾರಗಳ ಚೆಂದದ ಹಾಡುಗಳನ್ನು ಕೊಟ್ಟ ಸಂಸ್ಥೆ ಲಹರಿ. ವೇಲು ಮತ್ತು ಸಹೋದರರ ಸಾರಥ್ಯದಲ್ಲಿ ವಿಸ್ತಾರವಾಗಿ ಬೆಳೆದು ನಿಂತಿರೋ ಈ ಸಂಸ್ಥೆಗೀಗ ಯೂ ಟ್ಯೂಬ್ ಕೊಡ ಮಾಡುವ ಪ್ರತಿಷ್ಠಿತ ಗೋಲ್ಡ್ ಬಟನ್ ಅವಾರ್ಡ್ ಸಿಕ್ಕಿದೆ.
ಸಾಮಾನ್ಯವಾಗಿ ಈ ಪ್ರಶಸ್ತಿಯನ್ನು ಯೂಟ್ಯೂಬ್‌ನಲ್ಲಿ ಹತ್ತು ಲಕ್ಷ ಚಂದಾದಾರರನ್ನು ಹೊಂದಿರೋ ಸಂಸ್ಥೆಗಳಿಗೆ ಕೊಡಲಾಗುತ್ತದೆ. ಆದರೆ ವಿದೇಶಗಳಲ್ಲಿಯೂ ಇಂಥಾದ್ದೊಂದು ಪ್ರಶಸ್ತಿ ಪಡೆದವರು ಕಡಿಮೆಯೇ. ಆದರೆ ಲಹರಿ ಸಂಸ್ಥೆಯ ಮೂಲಕ ಕನ್ನಡಕ್ಕೆ ಪ್ರಪ್ರಥಮವಾಗಿ ಇಂಥಾದ್ದೊಂದು ಗೌರವ ಸಿಕ್ಕಿದೆ.
ಕೇವಲ ಚಲನಚಿತ್ರ ಗೀತೆಗಳು ಮಾತ್ರವಲ್ಲದೇ ಜಾನಪದ, ಯಕ್ಷಗಾನ, ಭಾವಗೀತೆ, ಭಕ್ತಿಗೀತೆ, ರಂಗಗೀತೆ ಸೇರಿದಂತೆ ಎಲ್ಲಾ ಪ್ರಾಕಾರಗಳ ಒಂದು ಲಕ್ಷದ ಎಪ್ಪತೈದು ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹೊರತಂದಿದೆ. ಮೂವತ್ತಾರು ವರ್ಷಗಳಿಂದ ಹಾಡುಗಳ ಮೂಲಕವೇ ಕನ್ನಡಿಗರನ್ನು ತಲುಪಿಕೊಂಡಿರೋ ಲಹರಿ ಸಂಸ್ಥೆ ಯೂ ಟ್ಯೂಬ್‌ನಲ್ಲಿ ಹೊಂದಿರೋ ಜನಪ್ರಿಯತೆಯೇನೂ ಕಡಿಮೆಯದ್ದಲ್ಲ. ಹದಿನೈದು ಲಕ್ಷಕ್ಕೂ ಹೆಚ್ಚು ಕನ್ನಡಿಗರು ಈ ಯೂಟ್ಯೂಬ್ ಚಾನೆಲ್‌ನ ಚಂದಾದಾರರಾಗಿದ್ದಾರೆ.
ಇಂಥಾ ಜನಪ್ರಿಯತೆ ಮತ್ತು ಗುಣಮಟ್ಟದ ಹಾಡುಗಳಿಂದ ಗಮನ ಸೆಳೆದಿರೋ ಲಹರಿ ಸಂಸ್ಥೆಗೆ ಇದೀಗ ಯೂಟ್ಯೂಬ್ ಗೋಲ್ಡ್ ಬಟನ್ ಅವಾರ್ಡ್‌ನ ಗರಿ ಮೂಡಿದೆ. ಇದು ಕನ್ನಡದ ಕೇಳುಗರಿಂದಲೇ ಕನ್ನಡ ತಾಯಿಗೆ ಸಿಕ್ಕ ಗೌರವ ಎಂಬ ವಿಧೇಯತೆಯಿಂದಲೇ ಲಹರಿ ವೇಲು ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.