Chief Editor
Manohar. R (Manu)
Photo Journalist
chitrataramanu@gmail.com
+91 9845549026
ವಿಷ್ಣು ಪರಮಾತ್ಮನ ಮತ್ತೊಂದು ಅವತಾರ ತಾರಕಾಸುರ
Posted date: 18 Thu, May 2017 08:59:43 AM

ರಥಾವರ ನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ ೧೮ ತಿಂಗಳ ನಂತರ ತಾರಕಾಸುರ ಚಿತ್ರಕ್ಕೆ ಕತೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ.  ವಿಷ್ಣು ಪರಮಾತ್ಮನಿಗೆ ಈ ಹೆಸರಿನಿಂದಲೂ ಕರೆಯುವುದುಂಟು. ಕರ್ನಾಟಕ ವಾಣಿಜ್ಯ ಮಂಡಳಿ ಪದಾಧಿಕಾರಿ ಹಾಗೂ ಸಿಲಿಕಾನ್ ಸಿಟಿಯಲ್ಲಿ ನಾಲ್ಕು ಚಿತ್ರಮಂದಿರಗಳ ಮಾಲೀಕರಾಗಿರುವ  ಎಂ.ನರಸಿಂಹಲು, ಪುತ್ರ ವೈಭವ್‌ಗಾಗಿ ಮೊದಲ ಬಾರಿ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಕತೆಯ ಗುಟ್ಟನ್ನು ಬಿಟ್ಟುಕೊಡದ ನಿರ್ದೇಶಕರು ನಾಯಕ  ಸಾಧು ಸಂತನಂತೆ, ಬೆಂಗಳೂರಿನ ಹೈದನಾಗಿ ಕ್ಲೈಮಾಕ್ಸ್‌ನಲ್ಲಿ ೧೯ರ ಯುವಕನಂತೆ  ಮೂರು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಾನೆ. ಸದ್ಯ ೭೮ ಕೆ.ಜಿ ತೂಕ ಇರುವುದರಿಂದ,  ಕೊನೆಯಲ್ಲಿ ಬರುವ ಸನ್ನಿವೇಶಕ್ಕೆ ಸುಮಾರು ೨೦ ಕೆ.ಜಿ ತೂಕ ಕಡಿಮೆ ಮಾಡಿಕೊಳ್ಳಬೇಕಾಗಿರುವುದರಿಂದ ತಡವಾಗಬಹುದು ಎಂಬ ಸುಳಿವನ್ನಷ್ಟೇ ಬಿಟ್ಟು ಕೊಟ್ಟಿದ್ದಾರೆ.

 

ಚಂದನವನದ ಪ್ರಸಿದ್ಧ ನಟಿಯ ಜೊತೆ ನಾಯಕಿ ಪಾತ್ರಕ್ಕೆ ಮಾತುಕತೆ ನಡೆದಿದ್ದು, ಆಕೆಯಿಂದ ಹಸಿರು ನಿಶಾನೆ ಬಂದ ನಂತರ ಸುದ್ದಿ ಹೊರಬರುವ ಸಾಧ್ಯತೆ ಇದೆ. ಉಳಿದಂತೆ ವಿಭಿನ್ನ ಪಾತ್ರದಲ್ಲಿ ಸಾಧುಕೋಕಿಲ, ರಾಮರಾಮರೇ ಖ್ಯಾತಿ ಮಠ ನಟಿಸುತ್ತಿದ್ದಾರೆ.  ಲಂಡನ್ ರಂಗಭೂಮಿಯ ಸೌತ್ ಆಫ್ರಿಕಾದ ಕಲಾವಿದರೊಬ್ಬರು ಮುಖ್ಯ ಖಳನಾಯಕನಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಬೆಂಗಳೂರು, ಕೋಲಾರ, ಚಾಮರಾಜನಗರ ಸುಂದರ ತಾಣಗಳಲ್ಲಿ ೮೦ ದಿನಗಳ ಕಾಲ ಮೂರು ಹಂತಗಳಲ್ಲಿ ಚಿತ್ರೀಕರಣ ನಡೆಸಲಾಗುವುದು. ಡಾ.ವಿ.ನಾಗೇಂದ್ರಪ್ರಸಾದ್,ಯೋಗರಾಜಭಟ್, ಜಯಂತ್‌ಕಾಯ್ಕಿಣಿ, ಕವಿರಾಜ್, ಪತ್ರಕರ್ತ ಮದನ್‌ಕುಮಾರ್ ಬೆಳ್ಳಿಸಾಲು ರಚಿಸಲಿರುವ ಗೀತೆಗಳಿಗೆ ಧರ್ಮವಿಶ್ ಸಂಗೀತ  ಸಂಯೋಜಿಸುತ್ತಿದ್ದಾರೆ.  ಛಾಯಗ್ರಹಣ ಕುಮಾರ್‌ಗೌಡ, ಸಂಕಲನ ಶಿವಶಂಕರ್, ಸಾಹಸ ಡಿಫರೆಂಟ್‌ಡ್ಯಾನಿ, ನೃತ್ಯ ಮುರಳಿ ಅವರದಾಗಿದೆ.

ಚಿತ್ರದ ಟೀಸರ್ ಅನಾವರಣ ಕಾರ್ಯಕ್ರಮವು ಇತ್ತೀಚೆಗೆ ಉತ್ತರಹಳ್ಳಿಯ ವೈಭವ್ ಚಿತ್ರಮಂದಿರದಲ್ಲಿ ನೆರವೇರಿತು. ನಿರ್ಮಾಪಕರು, ಕಲಾವಿದರನ್ನು ಚಿತ್ರರಂಗವು ಸ್ವಾಗತಿಸುತ್ತದೆ. ಮಗನ ಸಲುವಾಗಿ ಸಾಹಸಕ್ಕೆ ಮುಂದಾಗಿದ್ದಾರೆ. ಅವರಿಗೆ ಒಳ್ಳೆ ಹೆಸರು ತಂದು ಕೊಡಲಿ ಎಂದರು ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾ ಗೋವಿಂದು ಹಾರೈಸಿದರು. ಒಬ್ಬ ಹೊಸ ಕಲಾವಿದ ಯಾವ ರೀತಿ ಹೀರೋ ಆಗಬೇಕೆಂದು ಗೊತ್ತಾಗಬೇಕಾದರೆ ಕಿರಿಕ್ ಪಾರ್ಟಿಯ ರಕ್ಷಿತ್‌ಶೆಟ್ಟಿ ಕಾಣಿಸುತ್ತಾರೆ. ಅದೇ ರೀತಿ ನವ ಪ್ರತಿಭೆ ವೈಭವ್ ತಾರಕಾಸುರ ತಾರಕಕ್ಕೆ ಏರಿ, ಸಿನಿರಸಿಕರ ಮನಸ್ಸು ಗೆಲ್ಲಲ್ಲಿ  ಎಂಬ ನುಡಿ ಉಪ ಪೊಲೀಸ್ ಆಯುಕ್ತರಾದ ಡಿ.ಸಿ.ಶರಣಪ್ಪ ಅವರದು.

 

ಕನ್ನಡ ಚಿತ್ರರಂಗದಲ್ಲಿ ವಿನೂತನ  ರೀತಿಯ ಚಿತ್ರಗಳು ಗೆಲ್ಲುತ್ತಿವೆ. ಕನ್ನಡ ಚಿತ್ರಗಳ ಶಕ್ತಿ ಏನೆಂದು ಎಲ್ಲಾ ಕಡೆ ಪಸರಿಸುತ್ತಿದೆ. ಈ ಚಿತ್ರವು ಎಲ್ಲರನ್ನು ಗೆದ್ದು ೧೦೦ ದಿವಸ ಓಡಲಿ ಎಂದವರು ರಕ್ಷಿತ್‌ಶೆಟ್ಟಿ. ಯಾವ ಭಾಷೆಯ ಚಿತ್ರಗಳಿಗೂ ನಮ್ಮ ಸಿನಿಮಾಗಳು ಕಡಿಮೆ ಇಲ್ಲ. ರಾಜಕುಮಾರ ೫೦ ಕೋಟಿ ಗಳಿಕೆ ಬಂದಿದೆ. ಕಿರಿಕ್ ಪಾರ್ಟಿ ಶತದಿನ ಪೂರೈಸಿ ಇಂದಿಗೂ ಪ್ರದರ್ಶನವಾಗುತ್ತಿದೆ. ಈ ಚಿತ್ರದ ಟೈಟಲ್ ನೋಡಿದಾಗ ಅನೂಹ್ಯ  ಕತೆ ಇರಲಿದ್ದು ನಿರ್ಮಾಪಕರಿಗೆ ಲಾಭ ತಂದು ಕೊಡಲಿದೆ ಎಂದು ಭವಿಷ್ಯ ನುಡಿದರು ಮಾಜಿ ವಾಣಿಜ್ಯ ಮಂಡಳಿ ಅಧ್ಯಕ್ಷ ಚಂದ್ರಶೇಖರ್.  ಮಹಾಪೌರರಾದ ಪದ್ಮಾವತಿ ತಂಡಕ್ಕೆ ಶುಭಹಾರೈಸಿದರು. ಸಮಾರಂಭದಲ್ಲಿ ಸರಿಗಮವಿಜಿ, ಸಿನಿಪಂಡಿತರು, ತಂತ್ರಜ್ಘರು ಹಾಜರಿದ್ದರು. ಒಂದೂವರೆ ನಿಮಿಷದ ಟೀಸರ್‌ನಲ್ಲಿ ನಾಯಕ ಸಹಕಲಾವಿದರೊಂದಿಗೆ ಹೆಜ್ಜೆ ಹಾಕುವ ದೃಶ್ಯಗಳು ನೋಡುಗರನ್ನು ಮೋಡಿ ಮಾಡಿತು.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ವಿಷ್ಣು ಪರಮಾತ್ಮನ ಮತ್ತೊಂದು ಅವತಾರ ತಾರಕಾಸುರ - Chitratara.com
Copyright 2009 chitratara.com Reproduction is forbidden unless authorized. All rights reserved.