- ಕಬ್ಜ, ಗಾಳಿಪಟ 2, ಬನಾರಸ್, ತ್ರಿಬಲ್ ರೈಡಿಂಗ್, ಮುಗಿಲ್ಪೇಟೆಗೂ ಕಾಸ್ಟೂಮ್ ಡಿಸೈನಿಂಗ್
- ಸಾಲು ಸಾಲು ಸಿನಿಮಾಗಳಿಗೆ ಕಾಸ್ಟೂಮ್ ಡಿಸೈನಿಂಗ್
- ಯೋಗರಾಜ್ ಭಟ್, ಸೋನಲ್ ಮೊಂತೆರೋ,ಶೈನ್ ಶೆಟ್ಟಿ, ತೇಜಸ್ವಿನಿ ಪ್ರಕಾಶ್ಗೆ ಇವರೇ ಸೆಲೆಬ್ರಿಟಿ ಕಾಸ್ಟೂಮ್ ಡಿಸೈನರ್
ಸಿನಿಮಾ ಕ್ಷೇತ್ರಕ್ಕೆ ಫ್ಯಾಷನ್ ಕ್ಷೇತ್ರದ ನಂಟಿದೆ. ಸಿನಿಮಾ ಕ್ಷೇತ್ರದಲ್ಲಿ ಫ್ಯಾಷನ್ ಡಿಸೈನಿಂಗ್ನಿಂದ ಹಿಡಿದು, ಕಾಸ್ಟೂಮ್ ಡಿಸೈನ್, ಮೇಕ್ ಓವರ್, ಸೆಲೆಬ್ರಿಟಿ ಫ್ಯಾಷನ್ ಡಿಸೈನಿಂಗ್ ಹೀಗೆ ವಿಫುಲ ಅವಕಾಶಗಳಿವೆ. ಅಂಥ ಒಂದು ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ ರಶ್ಮಿ ಅನೂಪ್ ರಾವ್.
ಅರುಲಾ ಹೆಸರಿನ ಬ್ಯೂಟಿಕ್ ತೆರೆದು, ಅಲ್ಲಿಂದ ಆರಂಭವಾದ ಅವರ ಸಣ್ಣ ಜರ್ನಿ ಇದೀಗ, ಸೆಲೆಬ್ರಿಟಿ ಕಾಸ್ಟೂಮ್ ಡಿಸೈನಿಂಗ್, ರಿಯಾಲಿಟಿ ಶೋ ಕಾಸ್ಟೂಮ್ವರೆಗೆ ಬಂದು ನಿಂತಿದೆ. ಇದೆಲ್ಲದರ ಜತೆಗೆ ಸಿನಿಮಾ ಕಡೆಗೆ ಹೆಚ್ಚಿನ ಒಲವು ಬೆಳೆಸಿಕೊಂಡಿರುವ ರಶ್ಮಿ, ಕಳೆದ ಮೂರು ವರ್ಷಗಳಲ್ಲಿ 15ಕ್ಕೂ ಅಧಿಕ ಸಿನಿಮಾಗಳಿಗೆ ಕಾಸ್ಟೂಮ್ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ.
ಈ ಬಗ್ಗೆ ಮಾತನಾಡುವ ಅವರು, ಅಗ್ನಿಸಾಕ್ಷಿ ಚಂದ್ರಿಕಾ ಅವರ ಪಾತ್ರಕ್ಕೆ ಮೇಕ್ ಓವರ್ನಿಂದ ಹಿಡಿದು ಕಾಸ್ಟೂಮ್ ಡಿಸೈನಿಂಗ್ನಿಂದ ಈ ಪಯಣ ಶುರುವಾಗಿದೆ. ಅಲ್ಲಿಯವರೆಗೂ ವಿಜಯನಗರದಲ್ಲಿ ಚಿಕ್ಕ ಬ್ಯೂಟಿಕ್ ನಡೆಸುತ್ತಿದ್ದೆ. ಅಲ್ಲಿಂದ ಕಲರ್ಸ್ ಕನ್ನಡದ ಬಿಗ್ಬಾಸ್ ಶೋಗೆ ನಾನೇ ಕಾಸ್ಟೂಮ್ ಡಿಸೈನ್ ಮಾಡಿದೆ. ಅದಾದ ಬಳಿಕ ಅವರದೇ ಅನುಬಂಧ ಅವಾರ್ಡ್ ಕಾರ್ಯಕ್ರಮಕ್ಕೂ ಅವಕಾಶ ಸಿಕ್ಕಿತು. ಸದ್ಯ ಕಾಮಿಡಿ ಕಿಲಾಡಿಗಳು ಶೋದ ಯೋಗರಾಜ್ ಭಟ್ ಅವರಿಗೂ ಕಾಸ್ಟೂಮ್ ಡಿಸೈನ್ ಮಾಡುತ್ತಿದ್ದೇನೆ ಎಂದು ಸಂತಸ ವ್ಯಕ್ತಪಡಿಸುತ್ತಾರವರು.
ಹರಿಪ್ರಿಯಾ ನಟಿಸಿರುವ ಕನ್ನಡ್ ಗೊತ್ತಿಲ್ಲ, ಎಲ್ಲಿದ್ದೇ ಇಲ್ಲಿ ತನಕ, ಗಾಳಿಪಟ 2, ಬನಾರಸ್, ಕಬ್ಜ, ಮುಗಿಲ್ಪೇಟೆ, ತ್ರಿಬಲ್ ರೈಡಿಂಗ್ ಹೀಗೆ 3 ವರ್ಷಗಳಲ್ಲಿ 15ಕ್ಕೂ ಅಧಿಕ ಸಿನಿಮಾಗಳಿಗೆ ರಶ್ಮಿ ಕೆಲಸ ಮಾಡಿದ್ದಾರೆ. ಪಕ್ಕದ ತೆಲುಗು ಇಂಡಸ್ಟ್ರಿಗಳಿಂದಲೂ ಅವಕಾಶಗಳು ಅವರನ್ನು ಅರಸಿ ಬರುತ್ತಿವೆ.
2013ರಲ್ಲಿ ಆರಂಭವಾದ ಈ ಪಯಣ ಇದೀಗ ಎಂಟು ವರ್ಷಗಳನ್ನು ಪೂರೈಸಿದೆ. ಫ್ಯಾಷನ್ ಕ್ಷೇತ್ರದಲ್ಲಿ ಸಾಕಷ್ಟು ಎಕ್ಸ್ಪಿರಿಮೆಂಟ್ಗಳನ್ನು ಮಾಡಿದ್ದೇನೆ. ಇದೀಗ ನಾನು ಮಾಡಿದ್ದನ್ನು ಇನ್ನೂ ಹಲವು ಜನರಿಗೆ ಕಲಿಸುವ ಆಸೆಯೂ ಇದೆ. ಹೋದಲೆಲ್ಲ ಸಾಕಷ್ಟು ಜನ ನನಗೆ ಕೇಳಿದ್ದುಂಟು. ಕಲಿಸಿಕೊಡುತ್ತೀರಾ ಎಂದು. ಹಾಗಾಗಿ ಮುಂದೊಂದಿನ ಬ್ಯೂಟಿಕ್ ಕೋರ್ಸ್ ಶುರುಮಾಡುವ ಕನಸಿದೆ ಎಂಬುದು ರಶ್ಮಿ ಮಾತು.
ಕಾಸ್ಟೂಮ್ ಡಿಸೈನಿಂಗ್, ಗ್ರೂಮಿಂಗ್, ಮೇಕ್ಓವರ್, ಸೆಲೆಟ್ರೀಟಿ ಸ್ಟೈಲಿಂಗ್, ಸೆಲೆಬ್ರಿಟಿ ಡಿಸೈಲಿಂಗ್, ವೆಡ್ಡಿಂಗ್ ಕಾಸ್ಟೂಮ್, ರಿಯಾಲಿಟಿ ಶೋಗೆ ಕಾಸ್ಟೂಮ್ ಡಿಸೈನಿಂಗ್ ಮಾಡಿದ್ದಾರೆ. ರ್ಯಾಂಪ್ ಮೇಲೆ ವಾಕ್ ಮಾಡುವ ರೂಪದರ್ಶಿಗಳಿಗೆ ಫ್ಯಾಷನ್ ಕೌನ್ಸೆಲಿಂಗ್ ಸೇರಿ ಈ ಕ್ಷೇತ್ರದ ಹತ್ತು ಹಲವು ವಿಭಾಗಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದೆಲ್ಲದರ ಜತೆಗೆ ಇವರ ಕೈಯಲ್ಲಿ ಐದು ಸಿನಿಮಾಗಳಿವೆ. ಸಿನಿಮಾ ಕ್ಷೇತ್ರದತ್ತಲೂ ಹೆಚ್ಚು ಒಲವು ಮೂಡಿದ್ದು, ಅಲ್ಲಿಯೂ ತಮ್ಮ ಛಾಪು ಮೂಡಿಸುತ್ತಿದ್ದಾರೆ.