ಜುಲೈ 17, ರಾಷ್ಟ್ರಪ್ರಶಸ್ತಿ ನಟ ಸಂಚಾರಿ ವಿಜಯ್ ಅವರ ಹುಟ್ಟುಹಬ್ಬ. ಬಿ.ನವೀನ್ ಕೃಷ್ಣ ನಿರ್ದೇಶಿಸಿರುವ ``ಮೇಲೊಬ್ಬ ಮಾಯಾವಿ`` ಚಿತ್ರದಲ್ಲಿ ಇರುವೆ ಎಂಬ ವಿಶೇಷ ಪಾತ್ರದಲ್ಲಿ ಸಂಚಾರಿ ವಿಜಯ್ ನಟಿಸಿದ್ದಾರೆ. ವಿಜಯ್ ಅವರ ಹುಟ್ಟುಹಬ್ಬದ ನೆನಪಿಗಾಗಿ ಚಿತ್ರತಂಡ ಕಂಟೆಂಟ್ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದೆ.
ಇತ್ತೀಚೆಗೆ ಬಿಡುಗಡೆಯಾಗಿದ್ದ ``ಮೇಲೊಬ್ಬ ಮಾಯಾವಿ``ಚಿತ್ರದ ವೀಡಿಯೋ ಹಾಡುಗಳು ಭಾರಿ ಸದ್ದು ಮಾಡುತ್ತಿದೆ. ಕಂಟೆಂಟ್ ಮೋಷನ್ ಪೋಸ್ಟರ್ ನಲ್ಲಿ ಚಿತ್ರತಂಡ ಹರಳು ಮಾಫಿಯಾ ದ ಹಿಂದಿನ ಕಟು ಸತ್ಯಗಳನ್ನು ತೆರೆಯ ಮೇಲೆ ತರಲಿದೆ ಎಂಬ ಹಿಂಟ್ ಅನ್ನು ನೀಡಿದೆ. ಮೋಷನ್ ಪೋಸ್ಟರ್ ನಲ್ಲಿರುವ... ಯಾವತ್ತೂ... ಹುಟ್ಟಿಲ್ಲ, ಯಾವತ್ತೂ ಸತ್ತಿಲ್ಲ... ಜಗಕೇ ಭೇಟಿ ಕೊಟ್ಟೆ ನೀ ಅಷ್ಟೆ... ಅನ್ನುವ ಸಾಲುಗಳು ಸಂಚಾರಿ ವಿಜಯ್ ಅವರ ಧ್ವನಿಯಲ್ಲಿಯೇ ಇದ್ದು ವಾಸ್ತವಕ್ಕೆ ಹಿಡಿದ ಕನ್ನಡಿಯಂತಿದೆ.
ಸರ್ಕಾರ ಚಿತ್ರಮಂದಿರಗಳ ಆರಂಭಕ್ಕೆ ಅನುಮತಿ ನೀಡಿದರೆ, ಶೀಘ್ರದಲ್ಲೇ ``ಮೇಲೊಬ್ಬ ಮಾಯಾವಿ``ಚಿತ್ರ ತೆರೆಗೆ ಬರಲಿದೆ.
ಸತ್ಯ ಕಥೆ ಆಧಾರಿತ ಈ ಚಿತ್ರವನ್ನು ಬಿ.ನವೀನ್ ಕೃಷ್ಣ ಕಥೆ, ಬರೆದು ನಿರ್ದೇಶಿಸಿದ್ದಾರೆ. ಶ್ರೀ ಕಟೀಲ್ ಸಿನಿಮಾಸ್ ಲಾಂಛನದಲ್ಲಿ ಭರತ್ ಹಾಗೂ ತನ್ವಿ ಅಮಿನ್ ಕೊಲ್ಯ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.
ಚಿತ್ರಕ್ಕೆ ಎಲ್.ಎನ್. ಶಾಸ್ತ್ರಿ ಸಂಗೀತ ನೀಡಿದ್ದು, ಚಕ್ರವರ್ತಿ ಚಂದ್ರಚೂಡ್ ಸಾಹಿತ್ಯ ರಚಿಸಿದ್ದಾರೆ. ಕೆ.ಗಿರೀಶ್ ಕುಮಾರ್ ಸಂಕಲನಕಾರರಾಗಿರುವ `ಮೇಲೊಬ್ಬ ಮಾಯಾವಿ`ಗೆ, ದೀಪಿತ್ ಬಿಜೈ ರತ್ನಾಕರ್ ಛಾಯಾಗ್ರಹಣ ಮಾಡಿದ್ದಾರೆ. ಮಣಿಕಾಂತ್ ಕದ್ರಿ ಹಿನ್ನಲೆ ಸಂಗೀತ ನೀಡಿರುವ ಈ ಚಿತ್ರದಲ್ಲಿ ಸಂಚಾರಿ ವಿಜಯ್, ಅನನ್ಯ ಶೆಟ್ಟಿ, ಚಕ್ರವರ್ತಿ ಚಂದ್ರಚೂಡ್, ಕೃಷ್ಣಮೂರ್ತಿ ಕವತ್ತಾರ್, ಎಮ್.ಕೆ.ಮಠ, ಬೆನಕ ನಂಜಪ್ಪ, ಮಾಸ್ಟರ್ ಲಕ್ಷ್ಮೀ ಅರ್ಪಣ್, ನವೀನ್‌ಕುಮಾರ್, ಪವಿತ್ರಾ ಜಯರಾಮ್, ಮುಖೇಶ್, ಡಾ||ಮನೋನ್ಮಣಿ, ಸೇರಿದಂತೆ ಸಾಕಷ್ಟು ರಂಗಭೂಮಿ ನಟರು ಚಿತ್ರದಲ್ಲಿ ನಟಿಸಿದ್ದಾರೆ.