ವಿಕ್ರಂಪ್ರಭು ನಿರ್ಮಿಸಿ, ನಿರ್ದೇಶಿಸುತ್ತಿರುವ ``ವೆಡ್ಡಿಂಗ್ ಗಿಫ್ಟ್`` ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಮಾತಿನ ಜೋಡಣೆ ಸಹ ಮುಕ್ತಾಯವಾಗಿದೆ.
ಖ್ಯಾತ ನಟಿ ಪ್ರೇಮ ಈ ಚಿತ್ರದ ಪ್ರಮುಖಪಾತ್ರದಲ್ಲಿ ಅಭಿನಯಿಸಿದ್ದು, ಇತ್ತೀಚೆಗೆ ಅವರ ಅಭಿನಯದ ಭಾಗಕ್ಕೆ ಸಾಧುಕೋಕಿಲ ಅವರ ಸ್ಟೂಡಿಯೋದಲ್ಲಿ ಡಬ್ಬಿಂಗ್ ಮಾಡಿದ್ದಾರೆ.
ನಾನು ಇದೇ ಮೊದಲ ಬಾರಿಗೆ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀನಿ. ನಿರ್ದೇಶಕ ವಿಕ್ರಂಪ್ರಭು ಅವರು ಉತ್ತಮ ಕಥೆ ಮಾಡಿದ್ದಾರೆ. ನಾನು ಕೋರ್ಟಿನಲ್ಲಿ ಕೆಲವು ಕಲಾಪಗಳನ್ನು ನೋಡಿದ್ದೀನಿ. ಅಲ್ಲಿ ವಕೀಲರು ಮಾತನಾಡುವ ಹತ್ತಿರದಿಂದ ಕಂಡ ನನಗೆ ಈ ಪಾತ್ರ ಮಾಡಲು ಅನುಕೂಲವಾಯಿತು ಎಂದು ಪ್ರೇಮ ತಿಳಿಸಿದ್ದಾರೆ.
ಈಗಿನ ಕಾಲದ ಕೆಲವು ಕಾನೂನುಗಳನ್ನು ಕೆಲವರು ಹೇಗೆ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ? ಎಂಬ ವಿಷಯಯಿಟ್ಟುಕೊಂಡು ಈ ಚಿತ್ರ ನಿರ್ದೇಶನ ಮಾಡಿದ್ದೇನೆ. ಎಲ್ಲಾ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೈಖರಿ ಚೆನ್ನಾಗಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ ವಿಕ್ರಂಪ್ರಭು.
ನಿಶಾನ್ ನಾಣಯ್ಯ - ಸೋನುಗೌಡ ನಾಯಕ, ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಲಾಯರ್ ಪಾತ್ರದಲ್ಲಿ ಓಂ ಖ್ಯಾತಿ ಪ್ರೇಮ ನಟಿಸಿದ್ದಾರೆ. ಅಚ್ಯುತ್ ಕುಮಾರ್, ಪವಿತ್ರಲೋಕೇಶ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಏಪ್ರಿಲ್ ವೇಳೆಗೆ ಚಿತ್ರ ಬಿಡುಗಡೆಯಾಗಲಿದೆ.
ಬಾಲಚಂದ್ರ ಪ್ರಭು ಸಂಗೀತ ನಿರ್ದೇಶನ, ಉದಯಲೀಲ ಛಾಯಾಗ್ರಹಣ ಹಾಗೂ ವಿಜೇತ್ ಚಂದ್ರ ಅವರ ಸಂಕಲನ ಈ ಚಿತ್ರಕ್ಕಿದೆ.