Chief Editor
Manohar. R (Manu)
Photo Journalist
chitrataramanu@gmail.com
+91 9845549026
`ಪುಷ್ಪ` ಸಿನಿಮಾನ್ನು ನಾಚಿಸುವ, ಮಾಫಿಯಾದ ಕಂಟೆಟ್ ಇರುವ ಸಂಚಾರಿ ವಿಜಯ್ ಅಭಿನಯದ ಚಿತ್ರ ಶೀಘ್ರದಲ್ಲಿ
Posted date: 11 Fri, Feb 2022 05:59:19 PM
ಅಲ್ಲು ಅರ್ಜುನ್ ಅಭಿನಯದ `ಪುಷ್ಪ`ಚಲನಚಿತ್ರ ಬಿಡುಗಡೆಯಾಗಿ ದೇಶಾದ್ಯಂತ ಭಾರೀ ಸದ್ದು ಮಾಡುತ್ತಿದೆ. ರಕ್ತಚಂದನ ಮಾಫಿಯಾವನ್ನೇ ಕೇಂದ್ರವನ್ನಾಗಿ ಆಂಧ್ರದ ದಟ್ಟಾರಣ್ಯದಲ್ಲಿ ನಡೆಯುವ ಈ ಕರಾಳ ದಂಧೆ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ಇರಿಸುವಂತೆ ಮಾಡಿದೆ. `ಪುಷ್ಪ` ಚಲನಚಿತ್ರದ ಮಾದರಿಯಲ್ಲೇ ನಮ್ಮ ರಾಜ್ಯದ ಪಶ್ಚಿಮ ಘಟ್ಟದಲ್ಲಿ ಬಹುದೊಡ್ಡ ದಂಧೆ ಕಾರ್ಯನಿರ್ವಹಿಸುತ್ತಿದೆ. ಈ ಮಾಫಿಯಾದ ಬ್ಯಾಕ್‌ಡ್ರಾಪ್‌ನಲ್ಲೇ  ಸಂಚಾರಿ ವಿಜಯ್ ಅಭಿನಯದ `ಮೇಲೊಬ್ಬ ಮಾಯಾವಿ`ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

ಅರಣ್ಯಪ್ರದೇಶವನ್ನೇ ಹೊದ್ದುಕೊಂಡಿರುವ ದಕ್ಷಿಣ ಕನ್ನಡ ಮತ್ತು ಕೊಡಗು ಗಡಿಭಾಗದ ಪುಷ್ಪಗಿರಿ ಅಭಯಾರಣ್ಯ ಭಾಗದಲ್ಲಿ ಹರಳು ಕಲ್ಲು ದಂಧೆ ಮತ್ತೆ ಕಾರ್ಯಾರಂಭಗೊಂಡಿದೆ. ಕೊಡಗು-ದಕ್ಷಿಣ ಕನ್ನಡ ಜಿಲ್ಲೆಗೆ ಹೊಂದಿಕೊಂಡಿರುವ ಪುಷ್ಪಗಿರಿ ಅರಣ್ಯದಲ್ಲಿ ಈ ನಿಗೂಢ ಹರಳುಕಲ್ಲಿನ ಗಣಿಗಾರಿಕೆ ನಡೆಯುತ್ತಿದೆ. ಆಭರಣ, ಉಂಗುರುಗಳಿಗೆ ಬಳಸುವ ಈ ಹರಳಿನ ಕಲ್ಲಿಗಾಗಿ ಅಕ್ರಮ ದಂಧೆಕೋರರು ಹುಡುಕಾಟ ನಡೆಸುತ್ತಿದ್ದು ಅರಣ್ಯ ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತಿದೆ. ದಶಕಗಳ ಹಿಂದೆ ನಿಂತೂ ಹೋಗಿದ್ದ ಹರಳು ಕಲ್ಲಿನ ಗಣಿಗಾರಿಕೆ ಮತ್ತೆ ಆರಂಭಗೊಂಡಿದ್ದು ಕೂಜಿಮಲೆ, ಸುಟ್ಟತ್ ಮಲೆ ಅರಣ್ಯ ಪ್ರದೇಶದಲ್ಲಿ ಹೊಳೆಯುವ ಕಲ್ಲಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಅಚ್ಚರಿಯ ವಿಚಾರವೆಂದರೆ, `ಮೇಲೊಬ್ಬ ಮಾಯಾವಿ` ಚಿತ್ರತಂಡ ಈ ಅಪಾಯದ ಜಾಗಗಳಲ್ಲೇ ಚಿತ್ರೀಕರಣವನ್ನು ಮಾಡಿತ್ತು.

ಪುಷ್ಪಗಿರಿ ಅರಣ್ಯವಲಯದ ಕೂಜಿಮಲೆ ಮತ್ತು ಸುಟ್ಟತ್ ಮಲೆಯಲ್ಲಿ ಈಗ ಅಕ್ರಮ ದಂಧೆ ಮತ್ತೇ ಗರಿಗೆದರಿದೆ. ಕಳೆದ ಎರಡು ದಶಕಗಳ ಹಿಂದೆ ಸುಬ್ರಹ್ಮಣ್ಯ ಮತ್ತು ಕೊಡಗಿಗೆ ಹೊಂದಿಕೊಂಡಿರುವ ಕೂಜಿಮಲೆ ಮತ್ತು ಸುಟ್ಟತ್ ಮಲೆ ಎಂಬ ಬೆಟ್ಟಗಳಲ್ಲಿ ಹರಳು ಕಲ್ಲು ಪತ್ತೆಯಾಗಿತ್ತು. ಈ ಕಲ್ಲಿಗೆ ಆಗ ಕೆಜಿಯೊಂದಕ್ಕೆ 500 ರೂಪಾಯಿ ಇಂದ ಆರಂಭವಾಗಿ ಸಾವಿರಾರು ರೂಪಾಯಿ ಬೆಲೆ ದೊರೆಯುತ್ತಿತ್ತು. ಆದರೀಗ ಈ ಹರಳು ಕಲ್ಲಿಗೆ ರಾಜಸ್ಥಾನ ,ಗುಜರಾತ್ , ಮುಂಬೈ ಆಭರಣ ತಯಾರಿಕರಿಂದ ಭಾರೀ ಬೇಡಿಕೆ ಇದೆ. ಒಂದು ಮಾಹಿತಿಯ ಪ್ರಕಾರ ಈ ಹರಳು ಕಲ್ಲಿಗೆ ಪ್ರಸ್ತುತ 1 ಕೆಜಿಗೆ 30 ರಿಂದ 40 ಸಾವಿರ ರೂಪಾಯಿ ಇದೆ ಎಂದು ಹೇಳಲಾಗಿದೆ. ಈ ಎಲ್ಲಾ ಅಂಶಗಳನ್ನು ಚಿತ್ರತಂಡ `ಮೇಲೊಬ್ಬ ಮಾಯಾವಿ`ಯಲ್ಲಿ ಮನೋರಂಜನೆಯೊಂದಿಗೆ ಪ್ರೇಕ್ಷಕರ ಮುಂದಿಡಲಿದೆ.

ಹಣದ ಆಸೆಗೆ ಕಾರ್ಮಿಕರು ಗುಡ್ಡದಲ್ಲಿ ಅಪಾಯಕಾರಿ ಸುರಂಗ ಕೊರೆದು ಹೊಳೆಯುವ ಕಲ್ಲುಗಳಿಗಾಗಿ ಹುಡುಕಾಟ ನಡೆಸುತ್ತಾರೆ.. ಇನ್ನು ಸುರಂಗ ಕೊರೆದು ಹರಳುಕಲ್ಲು ತೆಗೆಯುವ ವೇಳೆ ಸುರಂಗ ಕುಸಿದು ಅಲ್ಲಿಯೇ ಸಮಾಧಿಯಾದ ಘಟನೆಗಳು ಕೂಡ ನಡೆದಿವೆ. ಆದರೆ ದಶಕಗಳ ಬಳಿಕ ಮತ್ತೆ ಈ ಭಾಗದಲ್ಲಿ ಹರಳುಕಲ್ಲು ಗಣಿಗಾರಿಕೆ ಆರಂಭವಾಗಿದೆ. ಭೂಮಿಯನ್ನು ನೂರಾರು ಅಡಿಗಳಷ್ಟು ಅಗೆದು ಹರಲು ಕಲ್ಲುಗಳ ಶೋಧ ಕಾರ್ಯ ಮಾಡಲಾಗುತ್ತಿದೆ. ಬ್ರಿಟಿಷರು ಈ ಬೆಟ್ಟವನ್ನು`ರೆಡ್ ಸ್ಟೋನ್ ವ್ಯಾಲಿ` ಅಂತಾ ಕರೆಯುತ್ತಿದ್ದರು. ಆದರೆ ಆಗ ಜನ ಆ ಬಗ್ಗೆ ಹೆಚ್ಚು ಉತ್ಸುಕರಾಗಿರಲಿಲ್ಲ. ಈ ದಂಧೆಗೆ ದಂಧೆಕೋರರು ಮಹಿಳೆಯರು, ಮಕ್ಕಳನ್ನೂ ಬಳಸುತ್ತಿದ್ದಾರೆ ಎಂಬ ಸುದ್ದಿಯೂ ಇದೆ. ಅಲ್ಲದೇ ಈ ದಂಧೆಯಿಂದ ಪೃಕೃತಿಗೂ ಅಪಾರ ನಷ್ಟವುಂಟಾಗುತ್ತಿದೆ. ಪುಷ್ಪಗಿರಿಯ ತಳಭಾಗದಲ್ಲಿರುವ ಸುಳ್ಯ ತಾಲೂಕಿನ ಗಡಿ ಗ್ರಾಮಗಳಾದ ಕೊಲ್ಲಮೊಗ್ರು, ಕಲ್ಮಕಾರು, ಬಾಳಿಗೋಡು, ಹರಿಹರ ಮುಂತಾದ ಪ್ರದೇಶಗಳು ಕಳೆದ ಎರಡು ವರ್ಷಗಳಿಂದ ಪ್ರವಾಹದ ಪರಿಸ್ಥಿತಿ ಎದುರಿಸುತ್ತಿದೆ. ಬೆಟ್ಟ ಅಗೆದಿರುವ ಕಾರಣ ಭಾರೀ ಮಳೆಗೆ ಮಣ್ಣು ಕುಸಿದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಪ್ರವಾಹದ ವೇಳೆಯಲ್ಲೂ ಬೆಟ್ಟದಿಂದ ಹರಳು ಕಲ್ಲುಗಳು ಗ್ರಾಮಸ್ಥರ ಜಮೀನಿಗೆ ಪ್ರವಾಹದ ನೀರಿನಲ್ಲಿ ಬಂದು ಸೇರುತ್ತಿದೆ. ಒಂದು ಕಾಲದಲ್ಲಿ ಹರಳುಕಲ್ಲು ದಂಧೆಯಿಂದಾಗಿ ಹೊಡೆದಾಟ, ಬಡಿದಾಟ ನಡೆದು ಹಲವು ಮಂದಿಯ ಪ್ರಾಣಕ್ಕೆ ಕುತ್ತು ಬಂದಿತ್ತು. ಸುಟ್ಟತ್ ಮಲೆ ಮತ್ತು ಕೂಜಿಮಲೆ ಹರಳು ಕಲ್ಲಿನ ದಂಧೆಗೆ ಅರಣ್ಯ ಇಲಾಖೆ ಕಡಿವಾಣ ಹಾಕಿತ್ತು. ಇದೀಗ ಮತ್ತೆ ಇಲ್ಲಿ ದಂಧೆಯನ್ನು ಸದ್ದಿಲ್ಲದೆ ಆರಂಭಿಸಿರುವುದು ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆ ದಂಧೆಗೆ ಕಡಿವಾಣ ಹಾಕದೆ ಕಣ್ಮುಚ್ಚಿ ಕುಳಿತರೆ ಈ ಬೆಟ್ಟದ ಸಾಲಿನಲ್ಲಿ ಇನ್ನೊಂದಷ್ಟು ಮಂದಿಯ ಹೆಣ ಬೀಳುವುದಂತು ಸತ್ಯ. ಈ ನಿಟ್ಟಿನಲ್ಲಿ `ಮೇಲೊಬ್ಬ ಮಾಯಾವಿ`ಚಿತ್ರ ಪ್ರಕೃತಿಯ ಮೇಲೆ ನಡೆಯುತ್ತಿರುವ ವಿಕೃತಿಯ ಮೇಲೂ ಬೆಳಕು ಚೆಲ್ಲಲ್ಲಿದೆ.

`ಶ್ರೀ ಕಟೀಲ್ ಸಿನಿಮಾಸ್` ಬ್ಯಾನರ್‌ನ ಅಡಿಯಲ್ಲಿ ಭರತ್ ಕುಮಾರ್ ಮತ್ತು ತನ್ವಿ ಅಮಿನ್ ಕೊಲ್ಯ `ಮೇಲೊಬ್ಬ ಮಾಯಾವಿ` ಚಿತ್ರದ ನಿರ್ಮಾಪಕರು. ನಿರ್ದೇಶಕ ಬಿ.ನವೀನ್‌ಕೃಷ್ಣ, ಸಂಚಾರಿ ವಿಜಯ್ ಅವರ `ಇರುವೆ`ಅನ್ನುವ ಪಾತ್ರದ ಮೂಲಕ,  ಅಪರೂಪದ ಕಂಟೆಂಟ್‌ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಇನ್ನು, ಚಿತ್ರದಲ್ಲಿ ರಂಗಭೂಮಿ ಪ್ರತಿಭೆ ಅನನ್ಯ ಶೆಟ್ಟಿ ನಾಯಕಿಯಾಗಿದ್ದು, ಬಿಗ್‌ಬಾಸ್ ಖ್ಯಾತಿಯ ಚಕ್ರವರ್ತಿ ಚಂದ್ರಚೂಡ್ ಮೊಟ್ಟ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಖಳನಟನಾಗಿ ಕಾಣಿಕೊಳ್ಳುತ್ತಿದ್ದಾರೆ. ಉಳಿದಂತೆ ಚಿತ್ರದಲ್ಲಿ.. ಕೃಷ್ಣಮೂರ್ತಿ ಕವತ್ತಾರ್, ಪವಿತ್ರಾ ಜಯರಾಮ್, ಬೆನಕ ನಂಜಪ್ಪ, ಎಮ್.ಕೆ.ಮಠ, ನವೀನ್‌ಕುಮಾರ್, ಲಕ್ಷ್ಮಿ ಅರ್ಪಣ್ , ಮುಖೇಶ್, ಡಾ.ಮನೋನ್ಮಣಿ.. ಹೀಗೆ ಸಾಕಷ್ಟು ರಂಗಭೂಮಿ ಪ್ರತಿಭೆಗಳನ್ನು ಚಿತ್ರದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಕಾಣಬಹುದು.

ಚಿತ್ರಕ್ಕೆ ದಿವಂಗತ ಎಲ್.ಎನ್.ಶಾಸ್ತ್ರೀಯವರ ಸಂಗೀತವಿದ್ದು, ಚಿತ್ರದ ಹಾಡುಗಳು ಈಗಾಗಲೇ ಬಿಡುಗಡೆಯಾಗಿ ಚಿತ್ರದ ಕಂಟೆಂಟ್ ಬಗ್ಗೆ ಸಾಕಷ್ಟು ಕುತೂಹಲವನ್ನು ಹೆಚ್ಚಿಸಿದೆ. ಇನ್ನು, ಚಿತ್ರದ ಹಿನ್ನಲೆ ಸಂಗೀತ ಮಣಿಕಾಂತ್ ಕದ್ರಿಯವರದ್ದಾದರೆ, ಕೆ.ಗಿರೀಶ್ ಕುಮಾರ್ ಚಿತ್ರಕ್ಕೆ ಸಂಕಲನವನ್ನು ಮಾಡಿದ್ದಾರೆ. ದೀಪಿತ್ ಬಿಜೈ ರತ್ನಾಕರ್ ಛಾಯಾಗ್ರಾಹಕರಾಗಿ ದುಡಿದಿರುವ `ಮೇಲೊಬ್ಬ ಮಾಯಾವಿ` ಗೆ ರಾಮು ಅವರ ನೃತ್ಯ ಸಂಯೋಜನೆಯಿದೆ. ಚಿತ್ರತಂಡ ಅತೀಶೀಘ್ರದಲ್ಲಿ ಬಿಡುಗಡೆಯ ದಿನಾಂಕವನ್ನು ಪ್ರಕಟಿಸಲಿದ್ದು... ಚಿತ್ರದ ಹಾಡುಗಳಲ್ಲಿ ಡಿಫೆರೆಂಟ್ ಗೆಟ್‌ಅಪ್ ಮತ್ತು ಮ್ಯಾನರಿಸಮ್‌ನಲ್ಲಿ ಕಾಣಿಸಿಕೊಂಡಿರುವ ಸಂಚಾರಿ ವಿಜಯ್ ಅವರ ಪಾತ್ರಪೋಷಣೆ ಚಿತ್ರದಲ್ಲಿ ಹೇಗಿರಬಹುದು ಅನ್ನೋದೆ ಸಧ್ಯದ ಕುತೂಹಲ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಪುಷ್ಪ` ಸಿನಿಮಾನ್ನು ನಾಚಿಸುವ, ಮಾಫಿಯಾದ ಕಂಟೆಟ್ ಇರುವ ಸಂಚಾರಿ ವಿಜಯ್ ಅಭಿನಯದ ಚಿತ್ರ ಶೀಘ್ರದಲ್ಲಿ - Chitratara.com
Copyright 2009 chitratara.com Reproduction is forbidden unless authorized. All rights reserved.