ನವರಸ ನಾಯಕ ಜಗ್ಗೇಶ್ ನಟನೆಯ `ತೋತಾಪುರಿ` ಎಲ್ಲೆಡೆ ಮಿಂಚು ಹರಿಸುತ್ತಿದೆ. ಕರ್ನಾಟಕ ಮಾತ್ರವಲ್ಲದೆ, ದೇಶ-ವಿದೇಶಗಳಲ್ಲೂ ಈ ಚಿತ್ರದ ಹಾಡಿನದ್ದೇ ಹವಾ. ಇತ್ತೀಚೆಗೆ ಬಿಡುಗಡೆಯಾದ `ಬಾಗ್ಲು ತೆಗಿ ಮೇರಿ ಜಾನ್` ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡು ಮಾಡುತ್ತಿದೆ. ಕನ್ನಡಿಗರು ಮಾತ್ರವಲ್ಲದೇ ಬೇರೆ ಭಾಷೆಯವರೂ ಈ ಹಾಡನ್ನು ಒಪ್ಪಿಕೊಂಡು ಅಪ್ಪಿಕೊಂಡಿದ್ದಾರೆ ಎಂಬುದಕ್ಕೆ ಮಿಲಿಯನ್`ಗಟ್ಟಲೆ ಹಿಟ್ಸ್ ದಾಖಲಿಸಿರುವುದೇ ಸಾಕ್ಷಿ.
ಅಮೆರಿಕಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಇದರ ಸಂಭ್ರಮವನ್ನು ಜಗ್ಗೇಶ್ ಅವರೊಂದಿಗೆ ಗ್ಲೋಬಲ್ ವರ್ಚುವಲ್ ಮೀಟ್ ಮೂಲಕ ಹೆಚ್ಚಿಸಿದ್ದು `ತೋತಾಪುರಿ` ತಂಡಕ್ಕೆ ಹುರುಪು ತುಂಬಿದೆ. ಅದರ ಬೆನ್ನಲ್ಲೇ ಇದೀಗ ದುಬೈನಲ್ಲೂ ಗ್ಲೋಬಲ್ ಮೀಟ್ ಸಂಭ್ರಮಕ್ಕೆ `ತೋತಾಪುರಿ` ಸಾಕ್ಷಿಯಾಗಲಿದೆ.
ಹೌದು. ಫೆಬ್ರವರಿ 25ರ ಶುಕ್ರವಾರ ಭಾರತೀಯ ಕಾಲಮಾನ ರಾತ್ರಿ 7.30ರಿಂದ ಗಲ್ಫ್ ಕನ್ನಡಿಗರೊಂದಿಗೆ ಜಗ್ಗೇಶ್ ಮಾತುಕತೆ ನಡೆಸಲಿದ್ದಾರೆ. ಒಮನ್, ಬಹ್ರೇನ್, ಕತಾರ್, ಕುವೈತ್ ಸೇರಿದಂತೆ ನೆರೆಹೊರೆಯ ಕನ್ನಡಿಗರು ಈ ಕಾರ್ಯಕ್ರಮದ ಭಾಗವಾಗಲಿದ್ದಾರೆ. ಓವರ್ಸೀ ಸ್ ಕನ್ನಡ ಮೂವೀಸ್ ಸಂಸ್ಥೆಯೊಂದಿಗೆ ಕೈ ಜೋಡಿಸಿರುವ ಚಿತ್ರತಂಡ ಅದ್ದೂರಿಯಾಗಿ ನಡೆಸಲು ಯೋಜನೆ ರೂಪಿಸಿಕೊಂಡಿದೆ. `ಮೋನಿಫ್ಲಿಕ್ಸ್ ಆಡಿಯೋಸ್` ಯೂ ಟ್ಯೂಬ್ ಚಾನಲ್`ನಲ್ಲಿ ಈ ಕಾರ್ಯಕ್ರಮ ನೇರ ಪ್ರಸಾರವಾಗಲಿದೆ.
ವಿಜಯಪ್ರಸಾದ್ ನಿರ್ದೇಶನವಿರುವ ಈ ಚಿತ್ರಕ್ಕೆ ಕೆ.ಎ.ಸುರೇಶ್ ನಿರ್ಮಾಣವಿದೆ. `ಡಾಲಿ`ಧನಂಜಯ್, ಅದಿತಿ ಪ್ರಭುದೇವ, ದತ್ತಣ್ಣ, ಸುಮನ್ ರಂಗನಾಥ್, ವೀಣಾ ಸುಂದರ್, ಹೇಮಾದತ್ ಮೊದಲಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿರುವ ಈ ಚಿತ್ರಕ್ಕೆ ನಿರಂಜನ್ ಬಾಬು ಛಾಯಾಗ್ರಹಣವಿದೆ.