ಕಳೆದ ಶುಕ್ರವಾರವಷ್ಟೇ ರಾಜ್ಯಾದ್ಯಂತ ಬಿಡುಗಡೆಯಾಗಿರುವ ಪುನೀತ್ಗೌಡ ಅವರ ನಿರ್ಮಾಣದ ಅಘೋರ ಚಿತ್ರಕ್ಕೆ ಕನ್ನಡ ಸಿನಿ ಪ್ರೇಕ್ಷಕರು ಮಾತ್ರವಲ್ಲದೆ ವಿಮರ್ಶಕರಿಂದಲೂ ಸಹ ಉತ್ತಮ ಚಿತ್ರವೆಂಬ ಪ್ರಶಂಸೆ ದೊರೆತಿದೆ. ಬಿಡುಗಡೆಯಾದೆಲ್ಲಡೆ ಪ್ರೇಕ್ಷಕರಿಂದ ಉತ್ತಮ ಚಿತ್ರವೆಂದು ಅಪಾರ ಮೆಚ್ಚುಗೆ ಪಡೆದುದಲ್ಲದೆ, ಹಾರರ್ ಸಿನಿಮಾ ಇಷ್ಟಪಡೋ ವೀಕ್ಷಕ ವರ್ಗದಿಂದ ಚಪ್ಪಾಳೆಯನ್ನೂ ಗಿಟ್ಟಿಸಿಕೊಂಡಿದೆ. ಹೀಗೆ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ಅಘೋರ ಚಿತ್ರವೀಗ ಪೈರಸಿ ಚೋರರ ಹಾವಳಿಗೆ ತುತ್ತಾಗಿಬಿಟ್ಟಿದೆ. ಬಿಡುಗಡೆಯಾಗಿರುವ ಬಹುತೇಕ ಎಲ್ಲಾ ಕೇಂದ್ರಗಳಲ್ಲೂ ಹೌಸುಲ್ ಪ್ರದರ್ಶನ ಕಾಣುತ್ತಿರುವ ಅಘೋರ ಚಿತ್ರವು ಪರಭಾಷೆಯ ದೊಡ್ಡ ದೊಡ್ಡ ಸಿನಿಮಾಗಳಿಗೂ ಸಹ ಸವಾಲು ಹಾಕಿ ಮುನ್ನಡೆದಿರುವ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ ಈಗ ಪೈರಸಿಯಿಂದಾಗಿ ಚಿತ್ರತಂಡಕ್ಕೆ ದೊಡ್ಡ ಸಂಕಷ್ಟವೇ ಎದುರಾಗಿದೆ. ಪೈರಸಿಯಾದ ತಕ್ಷಣವೇ ಕಾರ್ಯಪ್ರವೃತ್ತರಾದ ಚಿತ್ರದ ನಿರ್ಮಾಪಕರು ಹಾಗೂ ನಾಯಕ ನಟರೂ ಆದ ಪುನೀತ್ಗೌಸಡ ಅವರು ಇದುವರೆಗೂ ೫೦೦ಕ್ಕೂ ಹೆಚ್ಚು ಪೈರಸಿ ಲಿಂಕಗಳನ್ನು ಡಿಲೀಟ್ ಮಾಡಿಸಿದ್ದಾರೆ.
ಅದರೆ ಡಿಲೀಟ್ ಮಾಡಿಸಿದ ನಂತರವೂ ಸಹ ಪದೇ ಪದೇ ಚಿತ್ರದ ವೀಡಿಯೋಗಳನ್ನು ಅಪ್ರೊಡ್ ಮಾಡಲಾಗುತ್ತಿದೆ. ಈಗಿನ ಪರಿಸ್ಥಿತಿಯಲ್ಲಿ ಚಿತ್ರವೊಂದು ಯಶಸ್ವಿಯಾಗುವುದೇ ದುಸ್ತರವಾಗಿದ್ದು, ಉತ್ತಮ ಕಂಟೆಂಟ್ ಹೊಂದಿದ್ದುದರಿಂದ ಜನತೆ ಇಷ್ಟಪಟ್ಟು ಈ ಚಿತ್ರವನ್ನು ವೀಕ್ಷಿಸುತ್ತಿರುವ ಸಮಯದಲ್ಲಿ ಯಾರೋ ದುರುಳರು ಅದನ್ನೇ ಪೈರಸಿ ಮಾಡುತ್ತಿರುವುದು ನಿಜಕ್ಕೂ ಸಹಿಸಲಾಗದ ಸಂಗತಿ.
ಇತ್ತೀಚಿನ ವರ್ಷಗಳಲ್ಲಿ ಬಂದಂಥ ಅತ್ಯುತ್ತಮ ಹಾರರ್ ಸಿನಿಮಾ ಎಂಬ ಹೆಗ್ಗಳಿಕೆ ಅಘೊರ ಚಿತ್ರಕ್ಕಿದೆ. ಅಲ್ಲದೆ ಈಗಾಗಲೇ ಹಲವಾರು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು, ವಿವಿಧ ವಿಭಾಗಗಳಲ್ಲಿ ೧೬ಕ್ಕೂ ಹೆಚ್ಚು ಪ್ರಶಸ್ತಿಗಳಿಗೆ ಈ ಚಿತ್ರ ಭಾಜನವಾಗಿದೆ. ಪ್ರಮೋದ್ರಾಜ್ ಅವರ ನಿರ್ದೇಶನದ ಚೊಚ್ಚಲ ಚಿತ್ರದಲ್ಲಿ ಪುನೀತ್ಗೌಡ ಅವರು ನಾಯಕನಾಗಿದ್ದು, ಅವರ ನಟನೆಗೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಕೆಜಿಎಫ್, ಮಿ ಅಂಡ್ ಮಿಸಸ್ ರಾಮಾಚಾರಿ ಖ್ಯಾತಿಯ ಅಶೋಕ್ ಶರ್ಮ ಹಾಗೂ ಅಘೋರನ ಪಾತ್ರದಲ್ಲಿ ವಿಭಿನ್ನ ಗೆಟಪ್ ಮೂಲಕ ಮಿಂಚಿರುವ ಹಿರಿಯ ನಟ ಅವಿನಾಶ್ ಅವರುಗಳು ಈ ಚಿತ್ರದ ಹೈಲೈಟ್. ನಾಯಕಿಯರಾದ ರಚನಾ ದಶರಥ್ ಮತ್ತು ದೃವ್ಯಾ ಶೆಟ್ಟಿ ಒಬ್ಬರಿಗೊಬ್ಬ ಪೈಪೋಟಿಗೆ ಬಿದ್ದಂತೆ ಈ ಚಿತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ವೈರಲ್ ಆಗಿರುವ ಚಿತ್ರದ ಪಾರ್ಟಿಸಾಂಗ್ ಕೂಡ ಚಿತ್ರದ ಮತ್ತೊಂದು ಹೈಲೈಟ್.