ಪೂರ್ಣಸತ್ಯ ಹಾಗೂ ಸೀತಮ್ಮನ ಮಗ ಚಿತ್ರಗಳ ನಂತರ ನಟ,ನಿರ್ದೇಶಕ ಯತಿರಾಜ್ ತಮ್ಮ ನಿರ್ದೇಶನದ ಮೂರನೇ ಚಿತ್ರ ಘೋಷಿಸಿದ್ದಾರೆ.
ಚಿತ್ರದುರ್ಗದ ಜಯಲಕ್ಷ್ಮಿ ರಘು ಅವರ ನಿರ್ಮಾಣದ ನೂತನ ಚಿತ್ರಕ್ಕೆ `ಮಾಯಾಮೃಗ` ಎಂಬ ಶೀರ್ಷಿಕೆ ಇಟ್ಟಿದ್ದಾರೆ.
ಟಿ ಎನ್ ಸೀತಾರಾಂ ಅವರ ಜನಪ್ರಿಯ ಧಾರಾವಾಹಿ ಮಾಯಾಮೃಗ ದ ಹೆಸರೇ ನನ್ನ ಕಥೆಗೂ ಸೂಕ್ತ ಎನಿಸಿದ ಕಾರಣ ಅದನ್ನೇ ಅಂತಿಮಗೊಳಿಸಲಾಯಿತು ಎಂದು ವಿವರಣೆ ನೀಡುವ ಯತಿರಾಜ್, ಉಳಿದ ವಿವರಗಳನ್ನು ನೀಡಲು ಸ್ವಲ್ಪ ಸಮಯ ಬೇಕು ಎನ್ನುತ್ತಾರೆ.
ಸದ್ಯ ನಾಯಕಿಗಾಗಿ ಹುಡುಕಾಟ ನಡೆಯುತ್ತಿದೆ. ಅದಕ್ಕಾಗಿ ಇದೇ ತಿಂಗಳ 13 ರ ಭಾನುವಾರದಂದು ಚಿತ್ರದುರ್ಗದ ವಾಸವಿ ಶಾಲೆಯಲ್ಲಿ ಆಡಿಷನ್ ಕರೆಯಲಾಗಿದೆ. ನಿರ್ಮಾಪಕರು ದುರ್ಗದವರೇ ಆಗಿರುವುದರಿಂದ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಎಂಬುದು ಅವರ ಆಶಯ ಎನ್ನುತ್ತಾರೆ ಯತಿರಾಜ್ .
ಅಪರೂಪದ ಕಥಾವಸ್ತು ಹೊಂದಿರುವ ಮಾಯಾಮೃಗದಲ್ಲಿ ಯತಿರಾಜ್ ಅವರೇ ನಾಯಕನಾಗಿ ಬಣ್ಣ ಹಚ್ಚುತ್ತಿದ್ದು, ಉಳಿದ ತಾರಾ ಬಳಗ ಹಾಗೂ ತಾಂತ್ರಿಕ ವರ್ಗದ ಪಟ್ಟಿ ಶೀಘ್ರದಲ್ಲೇ ಹೊರ ಬೀಳಲಿದೆಯಂತೆ.