ತೆಲುಗು, ತಮಿಳು, ಹಿಂದಿ ಸಿನಿಮಾಗಳಿಗೆ ಚಾಲೆಂಜ್ ಮಾಡುವಂತೆ ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ಕನ್ನಡ ಚಿತ್ರ ಓ ಮೈ ಲವ್. ಜಿಸಿಬಿ. ಪ್ರೊಡಕ್ಷನ್ಸ್ ಲಾಂಛನದಲ್ಲಿ ಜಿ. ರಾಮಾಂಜಿನಿ ಅವರು ಬಹುಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಚಿತ್ರ ಇದಾಗಿದ್ದು, ಈ ಚಿತ್ರಕ್ಕೆ ಇತ್ತೀಚೆಗೆ ಗೋವಾದ ಸುಂದರ ಲೊಕೇಶನ್ಗಳಲ್ಲಿ ಟಪಾಂಗುಚಿ ಹಾಡೊಂದರ ಚಿತ್ರೀಕರಣ ನಡೆಸಲಾಯಿತು, `ನಿನ್ನ ಡ್ಯಾಡಿ ನಂಗೆ ಯಾವಾಗಿಂದ ಮಾವ ಆಗೋದು` ಎಂಬ ಸಾಹಿತ್ಯ ಇರುವ ಈ ಹಾಡಿಗೆ ನಾಯಕ ಅಕ್ಷಿತ್ ಶಶಿಕುಮಾರ್, ನಾಯಕಿ ಕೀರ್ತಿ ಕಲ್ಕೆರೆ ಸಾಧು ಕೋಕಿಲ, ಅಕ್ಷತ, ಸುಯೋಧ, ಟೆನ್ನಿಸ್ ಕೃಷ್ಣ ಅಭಿನಯಿಸಿದರು, ಇದಲ್ಲದೆ ಚಿತ್ರದ ಟೈಟಲ್ ಹಾಡನ್ನು ಉತ್ತರ ಪ್ರದೇಶ, ಮಧ್ಯಪ್ರದೇಶದಲ್ಲಿ ಶೂಟ್ ಮಾಡಲಾಗಿದೆ. ಇದರೊಂದಿಗೆ ಚಿತ್ರತಂಡ ಸಂತಸದಿಂದ ಚಿತ್ರೀಕರಣಕ್ಕೆ ಅಂತ್ಯ ಹಾಡಿದೆ.
ಈ ಚಿತ್ರಕ್ಕೆ ನಿರ್ಮಾಪಕರೇ ಕಥೆ ಬರೆದಿದ್ದು, ಬಳ್ಳಾರಿ ದರ್ಬಾರ್ ಖ್ಯಾತಿಯ ಸ್ಮೈಲ್ ಶ್ರೀನು ಚಿತ್ರಕತೆ-ಸಂಭಾಷಣೆ ರಚಿಸಿ ನಿರ್ದೇಶಿಸುತ್ತಿದ್ದಾರೆ. ಅತಿ ಹೆಚ್ಚು ಲೊಕೇಶನ್ ಗಳಲ್ಲಿ ಚಿತ್ರೀಕರಣಗೊಂಡಿರುವ ಲವ್‍ಸ್ಟೋರಿ ಇದಾಗಿದ್ದು, ಕಾಮಿಡಿ, ಸೆಂಟಿಮೆಂಟ್ ಜೊತೆಗೆ ಭರ್ಜರಿ ಆಕ್ಷನ್‍ಗಳೂ ಈ ಚಿತ್ರದ ಹೈಲೈಟ್ ಆಗಿದೆ.
ಈ ಚಿತ್ರದಲ್ಲಿ ಹಿರಿಯ ನಿರ್ದೇಶಕ ಎಸ್.ನಾರಾಯಣ್ ಹಾಗೂ ತೆಲುಗು ಖಳನಟ ದೇವ್‍ಗಿಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಿರ್ಮಾಪಕ ಜಿ.ರಾಮಾಂಜಿನಿ ಅವರು ಚಿತ್ರ ಅದ್ದೂರಿಯಾಗಿ ಮೂಡಿಬರಬೇಕೆಂದು ಧಾರಾಳವಾಗಿ ಖರ್ಚು ಮಾಡಿದ್ದಾರೆ. ಚಿತ್ರದ ಕಥೆ ಹಾಗೂ ನಿರೂಪಣೆಗೆ ಪ್ರಾಮುಖ್ಯತೆ ನೀಡುವ ಸ್ಮೈಲ್ ಶ್ರೀನು ಹೊಸಬರ ಜೊತೆ ಅನುಭವಿ ಕಲಾವಿದರನ್ನು ಇಟ್ಟುಕೊಂಡು ಈ ಚಿತ್ರ ಮಾಡಿದ್ದಾರೆ.
ಇನ್ನು ಈ ಚಿತ್ರಕ್ಕೆ ಚರಣ್ ಅರ್ಜುನ್ ಅವರ ಸಂಗೀತ, ಹಾಲೇಶ್ ಎಸ್. ಅವರ ಛಾಯಾಗ್ರಹಣ, ರಿಯಲ್ ಸತೀಶ್ ಅವರ ಸಾಹಸ, ಡಾ.ವಿ.ನಾಗೇಂದ್ರಪ್ರಸಾದ್ ಅವರ ಸಾಹಿತ್ಯ, ವಿ.ಮುರಳಿ ಅವರ ನೃತ್ಯ ನಿರ್ದೇಶನ, ಡಿ.ಮಲ್ಲಿ ಅವರ ಸಂಕಲನ, ಜನಾರ್ದನ್ ಅವರ ಕಲಾ ನಿರ್ದೇಶನವಿದೆ. ಹಿರಿಯ ನಿರ್ದೇಶಕ ಎಸ್.ನಾರಾಯಣ್, ಅಕ್ಷಿತ್ ಶಶಿಕುಮಾರ್, ಕೀರ್ತಿ ಕಲ್ಕೆರೆ, ದೀಪಿಕಾ ಆರಾಧ್ಯ, ಪೃಥ್ವಿರಾಜ್ , ಸಾಧುಕೋಕಿಲ, ಪವಿತ್ರಾ ಲೋಕೇಶ್, ಸಂಗೀತಾ, ಆನಂದ್, ಭಾಗ್ಯಶ್ರೀ, ಶಿಲ್ಪಾ, ರವಿ ರಾಮ್‍ಕುಮಾರ್ ಹಾಗೂ ಇತರರು ಈ ಚಿತ್ರದ ತಾರಾ ಬಳಗದಲ್ಲಿದ್ದಾರೆ.