Chief Editor
Manohar. R (Manu)
Photo Journalist
chitrataramanu@gmail.com
+91 9845549026
ವೃತ್ತಿ ಜೀವನದ ಯಶಸ್ಸಿನ ನಂತರ ಕನಸಿನ ಬೆನ್ನತ್ತಿದ ತೇಜಸ್ವಿನಿ ಕೊಡವೂರ್
Posted date: 30 Wed, Mar 2022 08:43:35 AM
ಮಧ್ಯಮ ವರ್ಗದ ಕುಟುಂಬದಿಂದ ಬಂದು ಅಗಾಧವಾದ ಸಾಧನೆ ಮಾಡುವುದು ಕಷ್ಟದ ಕೆಲಸ. ಆದರೆ, ಆ ಕೆಲಸವನ್ನು ಅಷ್ಟೇ ಸಲೀಸಾಗಿಯೇ ಮಾಡಿದ್ದಾರೆ ಮತ್ತು ಅದನ್ನು ಮುಂದುವರಿಸಿದ್ದಾರೆ ಉಡುಪಿ ಮೂಲದ ತೇಜಸ್ವಿನಿ ಕೊಡವೂರ್. ಶಿಕ್ಷಣ, ಫ್ಯಾಷನ್, ಯೋಗ, ಉದ್ಯಮ, ವ್ಯವಹಾರ ಹೀಗೆ ಈ ಎಲ್ಲ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರವರು. 
ಮಹಿಳೆಯರು ಮದುವೆ ಬಳಿಕ ಫ್ಯಾಷನ್ ಲೋಕದಲ್ಲಿ ತೊಡಗಿಸಿಕೊಳ್ಳುವುದು ತುಂಬ ಅಪರೂಪ. ಅದಕ್ಕೆ ಅಪವಾದವೆಂಬಂತೆ ಹೌತ್ ಮೊಂಡೆ ಮಿಸೆಸ್ ಇಂಡಿಯಾ ವರ್ಲ್ಡ್​ವೈಡ್ 2022ರ ಫೈನಲಿಸ್ಟ್ ಆಗಿದ್ದಾರೆ. ಈ ಮೂಲಕ ಸಾಧನೆಗೆ ವಯಸ್ಸಿನ ಅಡ್ಡಿ ಇಲ್ಲ ಎಂಬುದನ್ನು ತೋರಿಸಿದ್ದಾರೆ. ನಮ್ಮನ್ನು ನಾವು ಮೊದಲು ನಂಬೋಣ. ಎಲ್ಲಿಯೂ ನಿಲ್ಲದೆ ಮತ್ತು ಮಿತಿಯಿಲ್ಲದೆ ತಮ್ಮದೇ ಆದ ಸುಂದರ ಜೀವನವನ್ನು ರೂಪಿಸಿಕೊಳ್ಳಿ ಎಂದು ಸಲಹೆ ನೀಡುತ್ತಾರೆ. 
ತೇಜಸ್ವಿನಿ ಅವರಿಗೆ ಏಳು ವರ್ಷದ ಮಗನಿದ್ದಾನೆ. ತಂತ್ರಜ್ಞಾನ ಎಂಜಿನಿಯರಿಂಗ್​ನಲ್ಲಿಯೂ ಮುಂಚೂಣಿಯಲ್ಲಿದ್ದಾರೆ.   ಸೃಜನಶೀಲ ಕಲಾವಿದೆಯಾಗಿ, ಫಿಟ್ನೆಸ್ ಉತ್ಸಾಹಿಯಾಗಿ, ತರಬೇತಿ ಪಡೆದ ಡಾನ್ಸರ್ ಮತ್ತು ಯೋಗದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಅವರ ಈ ಎಲ್ಲ ಸಾಧನೆಗೆ ಸ್ಫೂರ್ತಿ ಅವರ ತಾಯಿ ಎಂದು ಹೆಮ್ಮೆಯಿಂದಲೇ ಹೇಳಿಕೊಳ್ಳುತ್ತಾರೆ. ಎಂಟು ವರ್ಷದವಳಿದ್ದಾಗಲೇ ತೇಜಸ್ವನಿ ತಂದೆಯನ್ನು ಕಳೆದುಕೊಂಡರು. ಅಲ್ಲಿಂದ ಅವರಿಗೆ ತಾಯಿಯೇ ಆಸರೆ. 
ಕ್ರೀಡೆ, ತಾಂತ್ರಿಕತೆ, ಶಿಕ್ಷಣದ ಜತೆಗೆ ಭರತನಾಟ್ಯದಲ್ಲಿಯೂ ಸಾಧನೆ ಮಾಡಿದ್ದಾರೆ. ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆದ ಶ್ರೀ ಭಗವತ್ ಮಾಧವ್ ರಾವ್ ಕೊಡವೂರ್ ಅವರ ಗರಡಿಯಲ್ಲಿ ನೃತ್ಯಾಭ್ಯಾಸ ಕಲಿತಿದ್ದಾರೆ. ನಿಟ್ಟೆಯಲ್ಲಿ ಬಿಇ ಓದುತ್ತಿದ್ದಾಗ ದೇಶದ ಹಲವೆಡೆಗೆ ತಮ್ಮದೆ ಆದ ತಂಡ ಕಟ್ಟಿಕೊಂಡು ಕಾಲೇಜುಗಳಲ್ಲಿನ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನೃತ್ಯ ಪ್ರದರ್ಶನ ನೀಡಿ ಹತ್ತಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ವಿದ್ಯಾಭ್ಯಾಸದಲ್ಲಿಯೂ ಮುಂದಿದ್ದ ತೇಜಸ್ವಿನಿ ಇಂಜಿನಿಯರಿಂಗ್​ನಲ್ಲಿ ಕಾಲೇಜ್ ಟಾಪರ್ ಆಗುವುದಷ್ಟೇ ಅಲ್ಲದೆ, ವಿಟಿಯು ವಿಶ್ವವಿದ್ಯಾಲಯದಲ್ಲಿ ಟಾಪ್ 15 ಅತೀ ಹೆಚ್ಚು ಅಂಕ ಪಡೆದವರಲ್ಲಿಯೂ ಸ್ಥಾನ ಪಡೆದಿದ್ದರು. 
ಇದೀಗ ಕಳೆದ 13 ವರ್ಷಗಳಿಂದ ಟೆಕ್ನಾಲಜಿ ಉದ್ಯಮದಲ್ಲಿರುವ ತೇಜಸ್ವಿನಿ, ಓರಾಕಲ್, ಸಾಸ್ಕೆನ್​ ಸೇರಿ ವಿಶ್ವದ ಖ್ಯಾತ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡಿದ ಅನುಭವ ಪಡೆದಿದ್ದಾರೆ. ಸದ್ಯ ಡೆಲ್​ಫಿಕ್ಸ್ ಕಂಪನಿಯಲ್ಲಿ ಸೀನಿಯರ್ ಇಂಜಿನಿಯರ್ ಮ್ಯಾನೇಜರ್ ಆಗಿದ್ದಾರೆ. ಕೆಲಸ ಮಾಡಿದ ಕಂಪನಿಗಳಲ್ಲಿ ಔಟ್ ಆಫ್​ ದಿ ಬಾಕ್ಸ್, ಏಸೆಂಟ್ ಗ್ಲೋಬಲ್ ಡೆಲ್​ಫಿಕ್ಸ್ ಅವಾರ್ಡ್​ ಫಾರ್ ಲೀಡರ್ ಶಿಪ್, ವಿನ್ನರ್ ಓರಾಕಲ್ ವುಮೆನ್ಸ್ ಲೀಡರ್ ಶಿಪ್ ಸೇರಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ವಿದೇಶದಲ್ಲಿರುವ ಇನ್​ಸೀಡ್ (INSEAD) ಬಿಜಿನೆಸ್ ಶಾಲೆಯಲ್ಲಿ ಜನರಲ್ ಮ್ಯಾನೇಜ್​ಮೆಂಟ್ ಕೋರ್ಸ್​ ಸಹ ಮುಗಿಸಿದ್ದಾರೆ. ಪರಿಸರದ ರಕ್ಷಣೆ ಸಲುವಾಗಿ ಗ್ಲೋಬಲ್ ಕಮ್ಯುನಿಟಿ ಇಂಪ್ಯಾಕ್ಟ್ ಚಾಲೆಂಜ್ ಗ್ರೂಪ್‌ನೊಂದಿಗೆ ಸ್ವಯಂಸೇವಕರಾಗಿ ಸಕ್ರಿಯವಾಗಿ ಕೆಲಸವನ್ನೂ ತೇಜಸ್ವಿನಿ ಮಾಡುತ್ತಿದ್ದಾರೆ
ಇದೆಲ್ಲವೂ ಒಂದೆಡೆಯಾದರೆ, ಆರಂಭದ ದಿನಗಳಿಂದಲೂ ಸೌಂದರ್ಯ ಮತ್ತು ಫ್ಯಾಷನ್​ ಮೇಲೆ ಅಪಾರ ಒಲವು ಹೊಂದಿದ್ದ ತೇಜಸ್ವಿನಿಗೆ, ವಿಶ್ವ ಸುಂದರಿ ಐಶ್ವರ್ಯಾ ರೈ, ಲಾರಾ ದತ್ತ ಸಾಕಷ್ಟು ಪ್ರಭಾವ ಬೀರಿದ್ದರು. ಇದೀಗ ವೃತ್ತಿ ಜೀವನದಲ್ಲಿ ಎತ್ತರಕ್ಕೇರಿರುವ ಅವರು, ಪ್ಯಾಷನ್ ಬೆನ್ನತ್ತಿದ್ದಾರೆ. ಹೊಸ ಅಧ್ಯಾಯದ ಮೂಲಕ ಕನಸನ್ನು ನನಸು ಮಾಡಿಕೊಳ್ಳುವತ್ತ ದೃಷ್ಟಿನೆಟ್ಟಿದ್ದಾರೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ವೃತ್ತಿ ಜೀವನದ ಯಶಸ್ಸಿನ ನಂತರ ಕನಸಿನ ಬೆನ್ನತ್ತಿದ ತೇಜಸ್ವಿನಿ ಕೊಡವೂರ್ - Chitratara.com
Copyright 2009 chitratara.com Reproduction is forbidden unless authorized. All rights reserved.