ಎಸ್.ಎಲ್.ಎನ್ ಕ್ರಿಯೇಶನ್ಸ್ ಸಂಸ್ಥೆಯ ಅಡಿಯಲ್ಲಿ ನಾಗೇಶ ಕೋಗಿಲು ಅವರು ನಿರ್ಮಿಸಿರುವ ಚಿತ್ರ ಟಕ್ಕರ್. ಕನ್ನಡತಿ ಖ್ಯಾತಿಯ ರಂಜನಿ ರಾಘವನ್ ಮತ್ತು ಮನೋಜ್ ಕುಮಾರ್ ನಟನೆಯ ಚಿತ್ರ ಮೇ 6ರಂದು ಬರಲು ಸಕಲ ಸಿದ್ದತೆ ಮಾಡಿಕೊಂಡಿದೆ. ಮಣಿ ಕಾಂತ್ ಕದ್ರಿ ಸಂಗೀತ ನೀಡಿರುವ ಟಕ್ಕರ್ ಚಿತ್ರದ ಹಾಡುಗಳನ್ನು ಎಟು ಮ್ಯೂಸಿಕ್ ಸಂಸ್ಥೆ ಅತ್ಯುತ್ತಮ ಬೆಲೆ ನೀಡಿ ಖರೀದಿಸಿದೆ. ವಿಜಯ ಪ್ರಕಾಶ್- ಅನುರಾಧಾ ಭಟ್, ಸಂಜಿತ್ ಹೆಗ್ಡೆ, ಶಶಾಂಕ್ ಶೇಷಗಿರಿ ಹಾಡಿರುವ ಹಾಡುಗಳು ಈಗ ಎಟು ಮ್ಯೂಸಿಕ್ ಮೂಲಕ ಲೋಕಾರ್ಪಣೆಗೊಳ್ಳಲಿದೆ. ಇದರ ಜೊತೆಗೆ ಟ್ರೇಲರ್ ಕೂಡಾ ಇದೇ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ನಾಗೇಶ್ ಕೋಗಿಲು ತಿಳಿಸಿದ್ದಾರೆ.
ಇಡೀ ಜಗತ್ತನ್ನು ನಲುಗುವಂತೆ ಮಾಡಿರುವ, ಅದರಲ್ಲೂ ಹೆಣ್ಣುಮಕ್ಕಳನ್ನು ಹಿಂಡುತ್ತಿರುವ ಸೈಬರ್ ಕ್ರೈಂ ಸುತ್ತ ಹೆಣೆದಿರುವ ಕತೆಯನ್ನು ರೋಚಕವಾಗಿ ಹಿಡಿದಿಟ್ಟಿರುವ ಚಿತ್ರ ಟಕ್ಕರ್. ಭಜರಂಗಿ ಖ್ಯಾತಿಯ ಸೌರವ್ ಲೋಕಿ ಇಲ್ಲಿ ಖಳನಾಯಕನಾಗಿ ಅಬ್ಬರಿಸಿದ್ದಾರೆ. ವಿಕ್ರಾಂತ್ ರೋಣ ಚಿತ್ರದ ಮೂಲಕ ಜಾಗತಿಕ ಮಟ್ಟದಲ್ಲಿ ಹೆಸರು ಮಾಡುತ್ತಿರುವ ವಿಲಿಯಮ್ಸ್ ಡೇವಿಡ್ ಟಕ್ಕರ್ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಅತ್ಯಾಧುನಿಕ ಕ್ಯಾಮೆರಾಗಳನ್ನು ಬಳಸಿ ಚಿತ್ರೀಕರಣ ಮಾಡಲಾಗಿದೆ. ಪುಟ್ಟಗೌರಿಯಾಗಿ ಎಂಟ್ರಿ ಕೊಟ್ಟು ಸದ್ಯ ಕನ್ನಡತಿಯಾಗಿ ಮನೆಮಾತಾಗಿರುವ ರಂಜನಿ ರಾಘವನ್ ಮನೋಜ್ ಕುಮಾರ್ ಜೋಡಿಯಾಗಿ ನಟಿಸಿದ್ದಾರೆ.
ಟಕ್ಕರ್ ಚಿತ್ರದಲ್ಲಿ ಸಾಕಷ್ಟು ಕಲಾವಿದರ ದಂಡೇ ಇದೆ. ಸಾಧು ಕೋಕಿಲಾ, ಅಶ್ವಿನ್ ಹಾಸನ್, ಆದಿ, ಕಾಮಿಡಿ ಕಿಲಾಡಿ ನಯನಾ, ಕುರಿ ಸುನಿಲ್, ಜೈಜಗದೀಶ್, ಈಟಿವಿ ಶ್ರೀಧರ್, ಹಿರಿಯ ನಟಿ ಸುಮಿತ್ರಾ ಸೇರಿದಂತೆ ಇನ್ನೂ ಅನೇಕಲ ಕಲಾವಿದರು ಟಕ್ಕರ್ ಚಿತ್ರದ ಭಾಗವಾಗಿದ್ಧಾರೆ. ಹೀರೋ ಇಂಟ್ರಡಕ್ಷನ್ ಹಾಡಿಗೆ ಹೆಚ್.ಎಂ.ಟಿ.ಯಲ್ಲಿ ವಿಶೇಷ ಸೆಟ್ ಕೂಡಾ ಹಾಕಲಾಗಿತ್ತು. ಮಲೇಶಿಯಾ, ಮೈಸೂರು, ಬೆಂಗಳೂರು ಸೇರಿದಂತೆ ಸಾಕಷ್ಟು ಕಡೆ ಚಿತ್ರೀಕರಣ ನಡೆಸಲಾಗಿದೆ.
ಕೋಟ್:
ಕೊರೋನಾ ತಂದಿಟ್ಟ ಸಂಕಷ್ಟದಿಂದ ಟಕ್ಕರ್ ಚಿತ್ರ ತೆರೆಗೆ ಬರೋದು ಸ್ವಲ್ಪ ತಡವಾಯ್ತು. ಪ್ರಸ್ತುತ ಜಗತ್ತನ್ನು ನಲುಗಿಸುತ್ತಿರುವ, ಹೆಣ್ಣುಮಕ್ಕಳ ಮಾನ, ಪ್ರಾಣಕ್ಕೆ ಮಾರಕವಾಗಿರುವ ಕಥಾವಸ್ತು ನಮ್ಮ ಚಿತ್ರದಲ್ಲಿದೆ. ತಂತ್ರಜ್ಞಾನ ಹೇಗೆ ಜನರ ನೆಮ್ಮದಿ ಕೆಡಿಸುತ್ತಿದೆ ಮತ್ತು ಅದರಿಂದ ಹೇಗೆ ಎಚ್ಚರ ವಹಿಸಬೇಕು ಅನ್ನೋದನ್ನು ವಿವರವಾಗಿ ಹೇಳಿದ್ದೇವೆ. ಮನೆಮಂದಿಯೆಲ್ಲಾ ಬಂದು ನೋಡಲೇಬೇಕಿರುವ ಚಿತ್ರ ʻಟಕ್ಕರ್ʼ. ವಿ. ರಘು ಶಾಸ್ತಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ನಾಗೇಶ ಕೋಗಿಲು, ನಿರ್ಮಾಪಕ
ಇನ್ನೂ ಮಾತು ಬಾರದ ಮಕ್ಕಳು ಕೂಡಾ ಇಂದು ಕೈಲಿ ಮೊಬೈಲು ಹಿಡಿದಿರುತ್ತಾರೆ. ಕೈಗೆ ಮೊಬೈಲು ಕೊಡದಿದ್ದರೆ ಊಟ ಕೂಡಾ ಮಾಡದ ಮಕ್ಕಳನ್ನು ನೋಡಿದ್ದೇವೆ. ಇನ್ನು ವಯಸ್ಸಿಗೆ ಬಂದ ಹೆಣ್ಣುಮಕ್ಕಳನ್ನು ಇದೇ ಮೊಬೈಲು ಯಾವ ಮಟ್ಟಕ್ಕೆ ಹಿಂಸೆ ನೀಡಬಹುದು? ನಾಲ್ಕು ಗೋಡೆ ನಡುವೆ ನಮ್ಮ ಕೈಲಿರುವ ಮೊಬೈಲು ನಮ್ಮದೇ ಖಾಸಗೀ ಬದುಕನ್ನು ಮತ್ತೊಬ್ಬರಿಗೆ ಬಂಡವಾಳ ಮಾಡುತ್ತಿದೆ ಅನ್ನೋದನ್ನು ವಿವರವಾಗಿ ತೆರೆದಿಟ್ಟಿದ್ದೇವೆ. ಯಾರೂ ಊಹೆ ಮಾಡಲಾಗದ ಅಂಶಗಳನ್ನು ಅನಾವರಣಗೊಳಿಸಿದ್ದೇವೆ. ಮನರಂಜನೆಯ ಜೊತೆಗೆ ಗಂಂಭೀರವಾದ ವಿಚಾರವನ್ನು ಹೇಳಿದ್ದೇವೆ. ಎಲ್ಲರಿಗೂ ಇಷ್ಟವಾಗುತ್ತದೆ. ಮನಸ್ಸಿಗೆ ಹತ್ತಿರವಾಗುತ್ತದೆ ಎನ್ನುವ ನಂಬಿಕೆ ನನ್ನದು.
ಮನೋಜ್ ಕುಮಾರ್, ನಾಯಕನಟ
ಭಜರಂಗಿ, ತಾರಕಾಸುರ ಸೇರಿದಂತೆ ನಾನು ನಟಿಸಿರುವ ಬಹುತೇಕ ಸಿನಿಮಾಗಳಲ್ಲಿ ನನಗೆ ವಿಭಿನ್ನವಾದ ಪಾತ್ರಗಳೇ ದೊರೆತಿವೆ. ಈ ಸಲ ʻಟಕ್ಕರ್ʼ ಚಿತ್ರದಲ್ಲಿ ನನ್ನನ್ನು ಬೇರೆಯದ್ದೇ ಶೇಡ್ ನಲ್ಲಿ ನೋಡಬಹುದು. ಈ ಸಿನಿಮಾ ನೋಡಿ ಹೊರಬಂದಮೇಲೆ ಹೆಣ್ಣುಮಕ್ಕಳು ನನಗೆ ಹಿಡಿ ಶಾಪ ಹಾಕೋದಂತೂ ಖಂಡಿತಾ. ಆ ಮಟ್ಟಿಗೆ ಎಲ್ಲರನ್ನೂ ಹೆದಸಿರುವ ಕ್ಯಾರೆಕ್ಟರ್ ನನ್ನದು. ನೇರವಾಗಿ ಭಾಗಿಯಾಗದೇ ಒಬ್ಬ ವ್ಯಕ್ತಿ ಕೂತಲ್ಲಿಂದಲೇ ಬೆದರಿಸುವ ಆನ್ ಲೈನ್ ಭಯೋತ್ಪಾದಕನಂತೆ ಕಾಣಿಸಿಕೊಂಡಿದ್ದೇನೆ. ಕನ್ನಡ ಚಿತ್ರರಂಗಕ್ಕೆ ಇದು ಹೊಸ ಬಗೆಯ ಸಿನಿಮಾ ಆಗುತ್ತದೆ ಎನ್ನುವುದರಲ್ಲಿ ಡೌಟೇಇಲ್ಲ.
ಸೌರವ್ ಲೋಕಿ, ಖಳನಟ