ಹೊಸಬರೇ ಸೇರಿಕೊಂಡು `ಮಾರಿಗುಡ್ಡದ ಗಡ್ಡಧಾರಿಗಳು` ಎನ್ನುವ ಚಿತ್ರವನ್ನು ಸಿದ್ದಪಡಿಸುತ್ತಿದ್ದಾರೆ. ಆದರೆ ರಾಜೀವ್‌ಚಂದ್ರಕಾಂತ್ ಈ ಹಿಂದೆ ನಾಗಭರಣ ಅವರಲ್ಲಿ ಕೆಲಸ ಕಲಿತುಕೊಂಡು, ನಂತರ 75ಕ್ಕೂ ಹೆಚ್ಚು ಚಿತ್ರಗಳಿಗೆ ಪೋಸ್ಟರ್ ಡಿಸೈನ್ ಮಾಡಿದ ಅನುಭವ ಇದೆ. ಇದರಿಂದಲೇ ಸಿನಿಮಾಕ್ಕೆ ರಚನೆ,ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಎಲ್ಲರೂ ನಾಯಕನಿಗೆ ಕಥೆ ಬರೆದರೆ, ಇವರು ಖಳನಾಯಕನ ಮೇಲೆ ಕಥೆಯನ್ನು ಬರೆದಿರುವುದು ವಿಶೇಷ. `ಸಲಗ` ದಲ್ಲಿ ಸೂರಿಯಣ್ಣ ಪಾತ್ರ ನಿರ್ವಹಿಸಿ ಗುರುತಿಸಿಕೊಂಡಿದ್ದ ದಿನೇಶ್‌ಕುಮಾರ್.ಡಿ ಖತರ್‌ನಾಕ್ ಖಳನಾಯಕನಾಗಿ ಹುಲಿಯಾ ಹೆಸರಿನಲ್ಲಿ ಕಾಣಿಸಿಕೊಳ್ಳುವ ಜತೆಗೆ ಡಿಜೆ ಪ್ರಕಾಶ್ ಸಿನಿ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.
ರಾಮಾಪುರ ಎಂಬ ಊರು, ಮಜ್ಜೇನಹಳ್ಳಿ ಎನ್ನುವ ಪಟ್ಟಣದಲ್ಲಿ 1990ರಂದು ನಡೆಯುವ ಕಾಲ್ಪನಿಕ ಘಟನೆಯನ್ನು ತೆಗೆದುಕೊಳ್ಳುತ್ತಿದ್ದಾರೆ. ಎಂಟು ಗಡ್ಡಧಾರಿಗಳ ಸುತ್ತ ಸಾಗುವ ಪಯಣದಲ್ಲಿ ಏರುಪೇರು ಉಂಟಾಗುತ್ತದೆ. ಅದು ಏನೆಂಬುದನ್ನು ಕುತೂಹಲದ ಮೂಲಕ ತೋರಿಸಲಾಗುವುದು.
ತಾರಗಣದಲ್ಲಿ ಪ್ರವೀಣ್, ನಂಜುಂಡ, ಗೌಡನಾಗಿ ಅವಿನಾಶ್, ನಾಯಕನ ತಂದೆಯಾಗಿ ರಮೇಶ್‌ಭಟ್, ಇನ್ಸ್‌ಪೆಕ್ಟರ್ ಆಗಿ ಗಣೇಶ್‌ರಾವ್, ಬೆನಕ ನಂಜಪ್ಪ, ಪ್ರಶಾಂತ್‌ಸಿದ್ದಿ ಮುಂತಾದವರು ಅಭಿನಯಿಸುತ್ತಿದ್ದಾರೆ. ನಾಯಕಿ ಸದ್ಯದಲ್ಲೆ ಆಯ್ಕೆಯಾಗಲಿದ್ದಾರೆ. ನಾಲ್ಕು ಹಾಡುಗಳಿಗೆ ಸಂಗೀತ ಕೆ.ಎಂ.ಇಂದ್ರ, ಛಾಯಾಗ್ರಹಣ ವೀರೇಶ್, ಸಾಹಸ ಪಳನಿ, ನೃತ್ಯ ಮೋಹನ್ ಅವರದಾಗಿದೆ. ಏಪ್ರಿಲ್ 10ರಿಂದ ಕೋಲಾರ, ಕೆಜಿಎಫ್ ಸ್ಥಳಗಳಲ್ಲಿ 35 ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಲು ತಂಡವು ಯೋಜನೆ ರೂಪಿಸಿಕೊಂಡಿದೆ. ಬಂಡಿ ಕಾಳಮ್ಮ ದೇವಸ್ಥಾನದಲ್ಲಿ ನಡೆದ ಮಹೂರ್ತ ಸಮಾರಂಭಕ್ಕೆ `ಟಗರು``ಸಲಗ``ನಿರ್ಮಾಪಕ ಕೆ.ಪಿ.ಶ್ರೀಕಾಂತ್, ಮಾಜಿ ಶಾಸಕ ನೆ.ಲ.ನರೇಂದ್ರಬಾಬು ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು.