ಸ್ಯಾಂಡಲ್ ವುಡ್ ನ ನಿರ್ದೇಶಕ ದಯಾಳ್ ಪದ್ಮನಾಭನ್ ಈಗಾಗಲೇ ಡಿ ಪಿಕ್ಚರ್ಸ್ ಹೆಸರಿನ ಚಿತ್ರ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. 2008ರಲ್ಲಿ ಖ್ಯಾತ ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ಅವರಿಂದ ಆ ಸಂಸ್ಥೆ ಲೋಕಾರ್ಪಣೆಗೊಂಡಿತ್ತು. ಸರ್ಕಸ್ ಆ ಸಂಸ್ಥೆಯ ಮೊದಲ ಚಿತ್ರವಾಗಿ ಹೊರಹೊಮ್ಮಿತ್ತು. ಅದಾದ ಮೇಲೆ ಒಟ್ಟು 9 ಸಿನಿಮಾಗಳನ್ನು ಈ ಸಂಸ್ಥೆಯಡಿ ದಯಾಳ್ ನಿರ್ಮಿಸಿದ್ದಾರೆ. ಹಗ್ಗದ
ಕೊನೆ ಚಿತ್ರಕ್ಕೆ 2014ರಲ್ಲಿ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದಾರೆ. 2018ರಲ್ಲಿ ಆ ಕರಾಳ ರಾತ್ರಿ ಚಿತ್ರಕ್ಕೂ ರಾಜ್ಯ ಪ್ರಶಸ್ತಿ ಸಂದಿದೆ.
ಹೀಗಿರುವಾಗಲೇ ಇದೇ ದಯಾಳ್ ಇದೀಗ ಮತ್ತೊಂದು ಸಾಹಸಕ್ಕೆ ಮುಂದಾಗಿದ್ದಾರೆ. ದಯಾಳ್ ಅವರ ಮಗ ಥರಗನ್ ದಯಾಳ್ ಸ್ಟ್ರೀಟ್ ಲೈಟ್ ಪ್ರೊಡಕ್ಷನ್ಸ್ ಹೆಸರಿನ ನಿರ್ಮಾಣ ಸಂಸ್ಥೆ ಶುರುಮಾಡಿದ್ದಾರೆ. ಆ ಹೆಸರಿಡುವುದಕ್ಕೂ ಬಲವಾದ ಕಾರಣವೊಂದಿದೆ. ಬಡತನದ ಕುಟುಂಬದಿಂದ ಬಂದ ಅವರಿಗೆ ಬಾಲ್ಯದಲ್ಲಿ ಬೀದಿ ಬದಿಯ ದೀಪ ಗಾಢವಾದ ಪ್ರಭಾವ ಬೀರಿತ್ತು. ಅದನ್ನು ಗಮನದಲ್ಲಿಟ್ಟುಕೊಂಡೇ ಅದೇ ಹೆಸರಿನಲ್ಲಿ ನಿರ್ಮಾಣ ಸಂಸ್ಥೆ ಶುರುಮಾಡಿದ್ದಾರೆ. ಈ ಸಂಸ್ಥೆಯಿಂದ ಅತ್ಯುತ್ತಮ ಗುಣಮಟ್ಟದ ಸಿನಿಮಾಗಳನ್ನು ಕೊಡುವ ಮಹದಾಸೆ ಮತ್ತು ಉದ್ದೇಶ ದಯಾಳ್ ಮತ್ತವರ ಕುಟುಂಬದವರದ್ದಾಗಿದೆ. ಅದಕ್ಕೆ ಎಲ್ಲರ ಸಹಕಾರವನ್ನು ಅವರು ಬೇಡುತ್ತಿದ್ದಾರೆ.