`ಗಂಡುಲಿ` ವಿನಯ್ ರತ್ನಸಿದ್ದಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರ ಏ.22 ರ ಶುಕ್ರವಾರ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಪಕ್ಕಾ ಗ್ರಾಮೀಣ ಕಥಾಹಂದರ ಹೊಂದಿರುವ ಸಸ್ಪೆನ್ಸ್ , ಥ್ರಿಲ್ಲರ್ ಚಿತ್ರ ಇದಾಗಿದ್ದು, ಈ ಚಿತ್ರಕ್ಕೆ ಓಟಿಟಿಯಲ್ಲಿ ಕೂಡ ತುಂಬಾ ಬೇಡಿಕೆ ಬರುತ್ತಿದೆ, ಅಲ್ಲದೆ ಬೇರೆ ಕಡೆಯಿಂದ ಡಬ್ಬಿಂಗ್ ರೈಟ್ಸ್ ಗೂ ಹೆಚ್ಚು ಆಫರ್ ಬರುತ್ತಿದೆ. ಪಕ್ಕಾ ಹಳ್ಳಿ ಸೊಗಡಿನ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ನಾಯಕನಾಗಿ ನಿರ್ದೇಶಕ ವಿನಯ್ ರತ್ನಸಿದ್ದಿ ಅವರೇ ಕಾಣಿಸಿಕೊಂಡಿದ್ದಾರೆ. ವಿನಯ್ ರತ್ನಸಿದ್ದಿ ಈ ಹಿಂದೆ ಇಂಜಿನಿಯರ್ಸ್ ಹಾಗೂ ಕಿಲಾಡಿಗಳು ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದರು. ಗಂಡುಲಿ ಇವರ ನಿರ್ದೇಶನದ ಮತ್ತೊಂದು ಚಿತ್ರವಾಗಿದೆ. ಇದೇ ಮೊದಲಬಾರಿಗೆ ಇಂಥ ಸಬ್ಜೆಕ್ಟ್ ಕೈಗೆತ್ತಿಕೊಂಡಿರುವ ವಿನಯ್ ರತ್ನಸಿದ್ದಿ ಅವರು ಈ ಚಿತ್ರಕ್ಕೆ ರಾಜ್ಯದ ಪ್ರಮುಖ ಸ್ಥಳಗಳಾದ ಮೈಸೂರು. ಬೆಂಗಳುರು, ಶ್ರವಣಬೆಳಗೊಳ, ಹುಬ್ಬಳ್ಳಿ, ಸುತ್ತಮುತ್ತ ೪೫ ದಿನಗಳ ಕಾಲ ಚಿತ್ರೀಕರಣ ನಡೆಸಿದ್ದಾರೆ.
ಚಿತ್ರದ ವಿಶೇಷತೆಗಳ ಕುರಿತು ಮಾತನಾಡಿರುವ ವಿನಯ ರತ್ನಸಿದ್ಧಿ ಗಂಡುಲಿ ಎನ್ನುವುದು ನಾಯಕನ ನಿಕ್ನೇಮ್. ಗ್ರಾಮೀಣ ಪ್ರದೇಶಗಳಲ್ಲಿ ಧೈರ್ಯವಂತ, ಸಾಹಸಿ ಯುವಕರನ್ನು ಗಂಡುಲಿ ಎಂದು ಕರೆಯುವುದು ರೂಡಿಯಲ್ಲಿದೆ. ನಮ್ಮ ಚಿತ್ರದ ಕಥೆ ಕೂಡ ಅದೇ ಥರದ ಕ್ಯಾರೆಕ್ಟರ್ ಹೊಂದಿದ ಯುವಕನ ಹಿನ್ನೆಲೆಯಲ್ಲಿ ನಡೆಯುತ್ತದೆ. ಹಳ್ಳಿಯೊಂದರಲ್ಲಿ ನಡೆಯುವ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಈ ಸಿನಿಮಾದಲ್ಲಿದೆ. ದೇವಸ್ಥಾನದ ಕುರಿತು ಸರ್ವೆಗೆಂದು ಹಳ್ಳಿಗೆ ಬರುವ ಪುರಾತತ್ವ ಇಲಾಖೆಯ ಅಧಿಕಾರಿಗಳು ಒಬ್ಬೊಬ್ಬರಾಗಿ ನಿಗೂಢವಾಗಿ ಕೊಲೆಯಾಗುತ್ತಾರೆ, ಆ ಸರಣಿ ಕೊಲೆಗೆ ಕಾರಣವೇನು, ಅದರ ಹಿಂದಿರುವ ರಹಸ್ಯವೇನು ಎಂದು ನಾಯಕ ಕಂಡುಹಿಡಿಯುವುದೇ ಈ ಸಿನಿಮಾದ ಒನ್ಲೈನ್ ಕಹಾನಿ. ಇದನ್ನು ಅಷ್ಟೇ ರೋಚಕವಾಗಿ ಕಥೆ ಬರೆದು ತೆರೆಮೇಲೆ ಕಟ್ಟಿಕೊಟ್ಟಿದ್ದಾರೆ ನಟ, ಕಂ ನಿರ್ದೇಶಕ ವಿನಯ್ ರತ್ನಸಿದ್ದಿ. ತಾಯಿ ಮಗನ ಸೆಂಟಿಮೆಂಟ್ ಜೊತೆಗೆ ಒಂದೊಳ್ಳೆ ಲವ್ಕಹಾನಿ ಇರುವ ಮಾಸ್, ಕ್ಲಾಸ್ ಸಿನಿಮಾ ಇದಾಗಿದೆ. ಇಡೀ ಚಿತ್ರದ ಕಥೆ ಹಳ್ಳಿಯ ಬ್ಯಾಕ್ಡ್ರಾಪ್ನಲ್ಲಿ ನಡೆಯುತ್ತದೆ ಎಂದು ಹೇಳಿದರು. ಚಿತ್ರದ ನಾಯಕಿ ಛಾಯಾದೇವಿ ಮೆಡಿಕಲ್ ಮುಗಿಸಿ ಸಿಟಿಯಿಂದ ಹಳ್ಳಿಗೆ ಡಾಕ್ಟರ್ ಆಗಿ ಬರುವ ಯುವತಿಯ ಪಾತ್ರವನ್ನು ನಿರ್ವಹಿಸಿದ್ದಾರೆ.
ರವಿದೇವ್ ಈ ಚಿತ್ರದ ಮೂರು ಹಾಡುಗಳನ್ನು ಕಂಪೋಸ್ ಮಾಡಿದ್ದಾರೆ. ಮ್ಯೂಸಿಕ್ ಬಾಕ್ಸ್ ಈ ಚಿತ್ರದ ಹಾಡುಗಳನ್ನು ಹೊರತಂದಿದೆ. ಅಲ್ಲದೆ ಈ ಚಿತ್ರದಲ್ಲಿ ೫ ವಿಶೇಷ ಸಾಹಸ ದೃಶ್ಯಗಳಿವೆ. ಧರ್ಮೇಂದ್ರ ಅರಸ್, ಸುಧಾ ನರಸಿಂಹರಾಜು ಗೌತಮ್ ವಿಜಯ್ ಪ್ರಜ್ವಲ್, ಶಿವು ಹಾಗೂ ಸಂತೋಷ್ ಚಿತ್ರದ ಉಳಿದ ತಾರಾಬಳಗದಲ್ಲಿದ್ದಾರೆ.