ಅದೊಂದು ಸುಂದರವಾದ ಹಳ್ಳಿ. ಅಲ್ಲಿನ ಜನರೆಲ್ಲ ಬಹುತೇಕ ಮುಗ್ಧರು. ತಮ್ಮ ಸುತ್ತ ಏನೇನು ನಡೆಯುತ್ತಿದೆ ಎಂಬುದನ್ನೂ ಅರಿಯರು. ಇವರ ಒಳ್ಳೇತನವನ್ನೇ ಕೆಲ ಬಂಡವಾಳಶಾಹಿಗಳು ಹೇಗೆ ದುರುಪಯೋಗಪಡಿಸಿಕೊಳ್ಳಲು ಹವಣಿಸುತ್ತಾರೆ.
ತಮ್ಮ ಸ್ವಾರ್ಥಕ್ಕೋಸ್ಕರ ಅವರ ಜೀವನವನ್ನೇ ಹೇಗೆ ಬಲಿ ತೆಗೆದುಕೊಳ್ಳಲು ಮುಂದಾಗುತ್ತಾರೆ. ಇವರ ಕ್ರೂರಮುಖವನ್ನು ಎದುರಿಸಲು ಕೊನೆಗೂ ಅಲ್ಲೊಬ್ಬ ಗಂಡುಲಿ ಹುಟ್ಟಿಕೊಳ್ಳುತ್ತಾನೆ. ಇದು ಶುಕ್ರವಾರ ಬಿಡುಗಡೆಯಾಗಿರುವ ಗಂಡುಲಿ ಚಿತ್ರದ ಒನ್ಲೈನ್ ಸ್ಟೋರಿ. ವಿನಯ್ ರತ್ನಸಿದ್ಧಿ ಅವರು ಈ ಚಿತ್ರದ ನಿರ್ದೇಶಕ ಹಾಗೂ ನಾಯಕನೂ ಹೌದು. ಆ ಹಳ್ಳಿಯಲ್ಲಿ ಅದೊಂದು ದಿವಾನರ ಕುಟುಂಬ, ಒಂದು ಕಾಲದಲ್ಲಿ ಊರ ಜನರಿಗೆ ಸಾಕಷ್ಟು ದಾನ ಧರ್ಮ ಮಾಡಿಕೊಂಡು ಬಂದಿದ್ದ ಆ ಕುಟುಂಬದ ಕುಡಿಯೇ ಚಿತ್ರದ ನಾಯಕ ರವಿ(ವಿನಯ್ ರತ್ನಸಿದ್ದಿ) ಆ ಊರಲ್ಲಿ ಒಂದಷ್ಟು ಧೈರ್ಯವಂತ ಎಂದರೆ ಈತನೇ.
ಸದಾ ಗೆಳೆಯರ ಜೊತೆ ಹರಟುತ್ತ ಕಾಲಕಳೆಯುತ್ತಿದ್ದ ರವಿ, ತನ್ನ ತಾತ ಉಳಿಸಿಹೋಗಿದ್ದ ಮೂರು ಎಕರೆ ಹೊಲದಲ್ಲೇ ಆಧುನಿಕ ಬೇಸಾಯ ಪದ್ದತಿ ಅನುಸರಿಸಿ ಉತ್ತಮಬೆಳೆ ತೆಗೆದು ಕೈತುಂಬ ಆದಾಯಗಳಿಸುವ ಮೂಲಕ ಮಾದರಿ ರೈತನಾಗುತ್ತಾನೆ.
ಆ ಊರಿನಲ್ಲಿರುವ ಪುರಾತನ ರಂಗನಾಥ ದೇವಾಲಯದ ಬಗ್ಗೆ ಸಂಶೋಧನೆ ನಡೆಸಲು ಬರುವ ಪುರಾತತ್ವ ಇಲಾಖೆಯ ಅಧಿಕಾರಿಗಳು ಇದ್ದಕ್ಕಿದ್ದ ಹಾಗೆ ಕಣ್ಮರೆಯಾಗುತ್ತಾರೆ, ಅಲ್ಲದೆ ಆ ಊರಿನ ಕೆಲವರು ಇದೇರೀತಿ ನಾಪತ್ತೆಯಾಗುತ್ತಾರೆ. ಅದೇ ಸಮಯದಲ್ಲಿ ಒಬ್ಬ ಹುಚ್ಚ ಕಣ್ಮರೆಯಾದ ನಂತರ ಇದರ ಹಿಂದೇನೋ ರಹಸ್ಯವಿದೆ ಎಂಬ ಅನುಮಾನ ಬಂದ ನಾಯಕ ರವಿ ಅದರಜಾಡು ಹಿಡಿದು ಹೋಗುತ್ತಾನೆ. ಅಲ್ಲೊಂದು ಭಯಾನಕ ಸತ್ಯ ಗೋಚರವಾಗುತ್ತದೆ, ಆ ಊರ ಅದ್ಯಕ್ಷನೂ ಸಹ ಅದರಲ್ಲಿ ಶಾಮೀಲಾಗಿರುವುದು ಗೊತ್ತಾಗುತ್ತದೆ. ಆ ಸತ್ಯವೇನು, ಅದರಹಿಂದೆ ಹೊರ ರಾಜ್ಯದವರೂ ಬಿದ್ದಿರುವುದೇಕೆ ಎಂಬುದನ್ನು ನಾಯಕ ರವಿ ಪತ್ತೆಹಚ್ಚುವ ಮೂಲಕ ಇಡೀ ಊರನ್ನೇ ಉಳಿಸಿದ ಗಂಡುಲಿಯಾಗುತ್ತಾನೆ. ನಾಯಕಿ ನಂದಿನಿ(ಛಾಯಾದೇವಿ) ಆ ಅಧ್ಯಕ್ಷನ ಮಗಳಾಗಿದ್ರೂ ತನ್ನ ತಂದೆಯ ಇನ್ನೊಂದು ಕರಾಳಮುಖ ಆಕೆಗೆ ಗೊತ್ತಿರುವುದಿಲ್ಲ.
ಮೊದಲು ನಾಯಕನ ಮೇಲೆ ಸಿಟ್ಟಿನಿಂದಲೇ ಹರಿಹಾಯುವ ನಂದಿನಿ ನಂತರ ಆತನ ಒಳ್ಳೇ ನಡತೆಗೆ ಮಾರುಹೋಗಿ ಆತನನ್ನೇ ಪ್ರೀತಿಸುತ್ತಾಳೆ. ನಾಯಕನ ತಾಯಿಯಾಗಿ ಕಾಣಿಸಿಕೊಂಡಿರುವ ಹಿರಿಯ ಕಲಾವಿದೆ ಸುಧಾ ನರಸಿಂಹರಾಜು ಅವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಊರ ಅಧ್ಯಕ್ಷನಾಗಿ ಧರ್ಮೇಂದ್ರ ಅರಸ್ ಅವರು ಗಾಂಭೀರ್ಯತೆ ತುಂಬಿದ್ದಾರೆ. ಇನ್ನು ಈ ಚಿತ್ರದಲ್ಲಿರುವ ಮೂರು ಹಾಡುಗಳೂ ಒಂದಕ್ಕಿಂತ ಒಂದು ವಿಭಿನ್ನವಾಗಿವೆ.
ಜೊತೆಗೆ ತಾಯಿ ಮಗನ ನಡುವಿನ ಸೆಂಟಿಮೆಂಟ್ ಸೀನ್ಗಳು ವೀಕ್ಷಕರ ಮನ ಕಲಕುತ್ತವೆ. ಚಿತ್ರದಲ್ಲಿ ಮಾಸ್, ಕ್ಲಾಸ್, ಮದರ್ ಸೆಂಟಿಮೆಂಟ್ ಆ್ಯಕ್ಷನ್ ಜೊತೆಗೆ ಸಸ್ಪೆನ್ಸ್, ಥ್ರಿಲ್ಲರ್ ಕಥೆಯೂ ಇದ್ದು ಒಟ್ಟಾರೆ ಗಂಡುಲಿ ಒಂದು ಎಂಟರ್ಟೈನ್ಮೆಂಟ್ ಪ್ಯಾಕೇಜ್ ಎನ್ನಬಹುದು. ಅಮರೇಂದ್ರ, ಪುನೀತ್, ಲೋಕೇಶ್ ರಾಜಣ್ಣ ಹಾಗೂ ಚಂದನ ಸೇರಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅಜಯ್ ಮತ್ತು ರವಿದೇವ್ ಅವರ ಸಂಗೀತ ಕೇಳಲು ಹಿತವಾಗಿದೆ. ರಾಜು ಶಿವಶಂಕರ್ ಮತ್ತು ಶ್ಯಾಮ್ ಅವರ ಛಾಯಾಗ್ರಹಣ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್.