Chief Editor
Manohar. R (Manu)
Photo Journalist
chitrataramanu@gmail.com
+91 9845549026
``ಗಿರ್ಕಿ`` ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ
Posted date: 08 Fri, Jul 2022 02:20:00 PM
ಚಿತ್ರ : ಗಿರ್ಕಿ
ನಿರ್ದೇಶಕ :ವೀರೇಶ್.ಪಿ.ಎಮ್ ನಿರ್ಮಾಪಕ : ತರಂಗ ವಿಶ್ವ ಸಂಗೀತ : ವೀರ್ ಸಮರ್ಥ್
ಛಾಯಾಗ್ರಹಕ : ನವೀನ್ ಛಲ
ತಾರಾಗಣ : ತರಂಗ ವಿಶ್ವ , ವಿಲೋಕ್ ರಾಜ್, ರಾಶಿ ಮಹಾದೇವ್,  ದಿವ್ಯಾ ಉರುಡುಗ, ಮಂಡ್ಯ ರಮೇಶ್, ಬಾಬು ಹಿರಣ್ಣಯ್ಯ, ಧರ್ಮ  ಹಾಗೂ ಮುಂತಾದವರು...   
 

ಜೀವನವೇ ಒಂದು  ಪಾಠವಿದ್ದಂತೆ. ನಾವು ಕಟ್ಟಿಕೊಳ್ಳುವ ಬದುಕು, ನಮ್ಮ ಸುತ್ತ ಇರುವ ಜನರು, ನಮ್ಮ ನಂಬಿಕೆ, ವಿಶ್ವಾಸವೇ ಕೆಲವೊಮ್ಮೆ ಹಲವು ಮುಖವಾಡಗಳ ಕನ್ನಡಿಯನ್ನ ತೆರೆದಿಡುತ್ತದೆ. ಇಂತಹದ್ದೇ ವಿಚಾರವನ್ನು ಇಟ್ಟುಕೊಂಡು ಬಡ ಕುಟುಂಬದ ವರ್ಗದ ಬದುಕು, ಬವಣೆಯೊಂದಿಗೆ ಗೆಳೆತನ, ಪ್ರೀತಿ, ಪೊಲೀಸ್, ಅಪಹರಣ, ನಂಬಿಕೆ ದ್ರೋಹ, ರೇಪ್  ಸೇರಿದಂತೆ ಹಲವು ಸೂತ್ರಗಳನ್ನು ಇಟ್ಟುಕೊಂಡು  ಬಂದಿರುವ ಚಿತ್ರವೇ `ಗಿರ್ಕಿ`. ಬಾಲ್ಯದಲ್ಲೇ ತಂದೆ ತಾಯಿಯನ್ನು ಕಳೆದುಕೊಂಡ ಚಿತ್ರದ ಕಥಾನಾಯಕ (ವಿಲೋಕ್ ರಾಜ್) ವಿದ್ಯಾಭ್ಯಾಸವಿಲ್ಲದೆ ಮಾವ ಪೋಲಿಸ್ (ತರಂಗ ವಿಶ್ವ) ಮಾರ್ಗದರ್ಶನದಂತೆ ಬಾರ್ ನಲ್ಲಿ ಸಪ್ಲೆಯರ್ ಕೆಲಸಕ್ಕೆ ಸೇರಿ ಗೆಳೆಯರೊಟ್ಟಿಗೆ ಜೀವನ ಕಳೆಯುತ್ತಾನೆ. ಇನ್ನು ನಾಯಕಿ (ದಿವ್ಯಾ ಉರುಡುಗ) ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ದಿನನಿತ್ಯ ಬಾರ್ ಮುಂದೆ ಸಾಗುವ ಸಮಯಕ್ಕೆ ಸರಿಯಾಗಿ ನಾಯಕ ನಾಯಕಿಯನ್ನು  ಭೇಟಿ ಮಾಡಿ ನಡೆದುಕೊಂಡು ಮನೆವರೆಗೂ ಹೋಗಿ ಬಿಟ್ಟು ಬರುತ್ತಾನೆ. ಇದು ಅವರಿಬ್ಬರ ಪ್ರೇಮಕ್ಕೆ ಸಾಕ್ಷಿಯಂತೆ. ಇನ್ನೂ ಬಾರ್ ಅಂದಮೇಲೆ  ಪುಂಡ ಪೋಕರಿಗಳ ಕಾಟ ಇದ್ದಿದ್ದೆ, ಇದರ ನಡುವೆ ನಾಲ್ವರು ಕಿಡಿಗೇಡಿಗಳು ಹೆಣ್ಣು ಮಕ್ಕಳನ್ನು ಅಪಹರಿಸಿ  ಅತ್ಯಾಚಾರವೆಸಗಿ ಬ್ಲ್ಯಾಕ್ ಮೇಲ್ ಮಾಡುತ್ತಾ ಆರ್ಭಟಿಸುತ್ತಾರೆ. ಮತ್ತೊಂದು ಕಡೆ ನಾಯಕನ ಮಾಮ ಪೊಲೀಸ್ ಮಾಮೂಲಿ ವಸೂಲಿ ಮಾಡುತ್ತಾ ಗೆಳತಿಯ ಹುಡಕಾಟಕ್ಕೆ ಪರದಾಡುತ್ತಿರುತ್ತಾನೆ. ಅವನ ಆಸೆಯಂತೆ  ಲೇಡಿ ಕಾನ್ಸ್ ಟೆಬಲ್ ಆಗಿ ಸ್ಟೇಷನ್ ಗೆ ಬರುವ ಮತ್ತೊಬ್ಬ ನಟಿ (ರಾಶಿ ಮಹದೇವ್) ಪ್ರೀತಿ. ಒಮ್ಮೆ ರಸ್ತೆಯಲ್ಲಿ ಜೀಪ್ ರಿಪೇರಿ ಸಂದರ್ಭದಲ್ಲಿ ಸ್ಟೇಷನ್ ಇನ್ಸ್ ಪೆಕ್ಟರ್ ಧರ್ಮ ಕೈಯಲ್ಲಿ ಸಿಕ್ಕಿ ಹಾಕಿಕೊಳ್ಳುವ ನಾಯಕ, ನಾಯಕಿಯ ಪ್ರೀತಿಯ ವಿಚಾರ ಬಹಿರಂಗ. ನಾಯಕಿಯ  ಅಂಕಲ್  (ಬಾಬು ಹಿರಣ್ಣಯ್ಯ)  ಇವರಿಬ್ಬರ ಮದುವೆಗೆ ಗ್ರೀನ್ ಸಿಗ್ನಲ್ ನೀಡುತ್ತಾರೆ. ಮತ್ತೊಂದೆಡೆ ನಾಯಕ ಕೆಲಸ ಮಾಡುವ ಮಾಲೀಕ (ಮಂಡ್ಯ ರಮೇಶ್) ಹಾಗೂ ಸ್ನೇಹಿತರು ಮತ್ತು  ಸೋದರ ಮಾವ ಕೂಡ ಒಪ್ಪುತ್ತಾರೆ. ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದೆ ಮದುವೆಗೆ ತಯಾರಿ ಮಾಡೋಣ ಎನ್ನುವಷ್ಟರಲ್ಲಿ ನಾಯಕಿಯ ಅಪಹರಣ ವಾಗುತ್ತದೆ. ಇಲ್ಲಿಂದ ಕಥೆಯ ಟ್ವಿಸ್ಟ್ ತೆರೆದುಕೊಳ್ಳುತ್ತದೆ.
ನಾಯಕಿಯ ಕಿಡ್ನ್ಯಾಪ್ ಮಾಡಿದ್ದು ಯಾರು...ಯಾಕೆ...
ಈ ಜಾಗದ ಬೆಲೆ ಯಾರದು...
ನಾಯಕ ನಾಯಕಿ ಒಂದಾಗ್ತಾರಾ...
ಇಂಥ ಹಲವು ಸೂಕ್ಷ್ಮ ವಿಚಾರವನ್ನು ನೋಡಬೇಕಾದರೆ ನೀವೆಲ್ಲರೂ ಒಮ್ಮೆ  ಚಿತ್ರಮಂದಿರಕ್ಕೆ ಹೋಗಿ ಗಿರ್ಕಿ ಚಿತ್ರ  ನೋಡಲೇಬೇಕು.

 ತನ್ನ ಹಾಸ್ಯದ ಮೂಲಕ ಪ್ರೇಕ್ಷಕರನ್ನ ರಂಜಿಸಿದ ತರಂಗ ವಿಶ್ವ ಪ್ರಥಮ ಬಾರಿಗೆ ಒಂದು ಸಸ್ಪೆನ್ಸ್ , ಥ್ರಿಲ್ಲರ್ ಚಿತ್ರವನ್ನು ನಿರ್ಮಿಸಿ ಸೈ ಎನಿಸಿ ಕೊಂಡಿದ್ದಾರೆ. ಇನ್ನು ನಟನೆ ವಿಚಾರಕ್ಕೆ ಬಂದರೆ ತರಂಗ ವಿಶ್ವ ಲೀಲಾಜಾಲವಾಗಿ ತಮ್ಮ ಪಾತ್ರ ಪೋಷಣೆ ಮಾಡಿದ್ದು, ಹಾಸ್ಯ ಸನ್ನಿವೇಶಗಳು ಮನಸ್ಸನ್ನು ತಣಿಸುತ್ತದೆ. ಇದು ಇವರ ಮೊದಲ ನಿರ್ಮಾಣವಾಗಿದ್ದು, ಎಲ್ಲೋ ತಮ್ಮದೇ ಹಾಸ್ಯ ಜಾನರ್ ಚಿತ್ರವೇ ಮಾಡಬಹುದಿತ್ತು ಅನಿಸುತ್ತದೆ.
 
ಇನ್ನು ಮತ್ತೊಬ್ಬ ನಾಯಕ  ವಿಲೋಕ್ ರಾಜ್ ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದು, ಆ್ಯಕ್ಷನ್ ದೃಶ್ಯಗಳನ್ನ ಉತ್ತಮವಾಗಿ ನಿರ್ವಹಿಸಿದ್ದಾರೆ. ಇವರಿಗೆ ಜೋಡಿಯಾಗಿ ಅಭಿನಯಿಸಿರುವ ದಿವ್ಯ ಉರುಡುಗ ಬಹಳ ಮುದ್ದಾಗಿ ಕಾಣಿಸಿಕೊಳ್ಳುವುದರ ಜತೆಗೆ ಗಮನ ಸೆಳೆಯುವಂತೆ ನಟಿಸಿದ್ದಾರೆ. ಇನ್ನು ಮತ್ತೋರ್ವ ನಟಿ ರಾಶಿ ಮಹದೇವ್ ಪೊಲೀಸ್ ಕಾನ್ ಸ್ಟೆಬಲ್ ಪಾತ್ರವಾದರೂ ಸ್ಕ್ರೀನ್ ಮೇಲೆ ಸೊಗಸಾಗಿ ಕಾಣಿಸುತ್ತಾರೆ. ಉಳಿದಂತೆ ಅಭಿನಯಿಸಿರುವ ಮಂಡ್ಯ ರಮೇಶ್, ಧರ್ಮ, ಬಾಬು ಹಿರಣ್ಣಯ್ಯ, ಬಹುತೇಕ ಪ್ರತಿಭೆಗಳು ಅಚ್ಚುಕಟ್ಟಾಗಿ ಪಾತ್ರವನ್ನು ನಿರ್ವಹಿಸಿದ್ದಾರೆ. ಈ  ಚಿತ್ರದ ನಿರ್ದೇಶಕ ವೀರೇಶ ಪಿ.ಎಂ. ಆಯ್ಕೆ ಮಾಡಿಕೊಂಡ ಕಥಾವಸ್ತು ಉತ್ತಮವಾಗಿದೆ. ಆದರೆ ಚಿತ್ರಕಥೆ ಮತ್ತಷ್ಟು ಬಿಗಿ ಮಾಡಬೇಕಿತ್ತು. ಚಿತ್ರದ ಬಹುತೇಕ ದೃಶ್ಯಗಳು ಗಿರಿಕಿ ಹೊಡೆದಂತೆ ಭಾಸವಾಗುತ್ತದೆ.
ಚಿತ್ರದ ಹಿಡಿತ ಕಾಣುವುದೆ ದ್ವಿತೀಯಾರ್ಧದಲ್ಲಿ. ಇದರ ಜೊತೆಗೆ ಪಾತ್ರಧಾರಿಗಳ ಮೂಲಕ ಉತಮ ಕೆಲಸವನ್ನ ತೆಗಿಸಿದ್ದಾರೆ.ತಾಂತ್ರಿಕವಾಗಿ ಕೂಡ ಚಿತ್ರ ಗಮನ ಸೆಳೆಯುತ್ತದೆ. ಈ ಚಿತ್ರಕ್ಕೆ ಸಂಗೀತ ನೀಡಿರುವ ವೀರ್ ಸಮರ್ಥ್ ಕೆಲಸ ಗಮನಾರ್ಹ ವಾಗಿದೆ. ಅದೇ ರೀತಿ ನವೀನ್ ಛಲ್ಲ ಆವರ ಕ್ಯಾಮೆರಾ  ಕೈಚಳಕ ಉತ್ತಮವಾಗಿ ಮೂಡಿಬಂದಿದೆ. ಜನರಲ್ಲಿ ಜಾಗೃತಿ ಮೂಡಿಸುವ ವಿಚಾರವನ್ನು ಸೂಕ್ಷ್ಮವಾಗಿ ಬಡ ಕುಟುಂಬದ ಬದುಕು, ಬವಣೆಯನ್ನು ಜೊತೆಗೆ ಹಾಸ್ಯ ಲೇಪನದಲ್ಲಿ ``ಗಿರ್ಕಿ`` ಸಾಗಿದ್ದು, ಒಮ್ಮೆ ಎಲ್ಲರೂ ಹೋಗಿ ಈ ಚಿತ್ರವನ್ನು ನೋಡಬಹುದು.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ``ಗಿರ್ಕಿ`` ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ - Chitratara.com
Copyright 2009 chitratara.com Reproduction is forbidden unless authorized. All rights reserved.