Chief Editor
Manohar. R (Manu)
Photo Journalist
chitrataramanu@gmail.com
+91 9845549026
ಅಮೆಜ಼ಾನ್ ಪ್ರೈಮ್ ವಿಡಿಯೋದಲ್ಲಿ ಟಕ್ಕರ್!
Posted date: 30 Sat, Jul 2022 11:27:17 AM
ಕಳೆದ ಮೇ 6ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದ ಸಿನಿಮಾ ʻಟಕ್ಕರ್ʼ. ನೋಡಿದ ಎಲ್ಲ ಪ್ರೇಕ್ಷಕರ ಮತ್ತು ಕನ್ನಡ ಸಿನಿಮಾ ವಿಮರ್ಶಕರಿಂದ ಅಪಾರ ಮೆಚ್ಚುಗೆ ಪಡೆದಿದ್ದ ಚಿತ್ರವಿದು. ಸದ್ಯ ಅಮೆಜ಼ಾನ್ ಪ್ರೈಮ್ ವಿಡಿಯೋದಲ್ಲಿ ʻಟಕ್ಕರ್ʼ ಸ್ಟ್ರೀಮಿಂಗ್ ಆಗುತ್ತಿದೆ. ʻʻಕಳೆದ ನಾಲ್ಕು ತಿಂಗಳಿಂದ ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಳು ರಭಸದಿಂದ ಬಿಡುಗಡೆಯಾಗುತ್ತಿವೆ. ವಾರವೊಂದಕ್ಕೆ ೮-೧೦ ಸಿನಿಮಾಗಳನ್ನು ಬರುತ್ತಿರುವುದರಿಂದ ಪ್ರೇಕ್ಷಕರಿಗೆ ಉತ್ತಮ ಚಿತ್ರ ಯಾವುದು ಎನ್ನುವ ಗೊಂದಲ ಮೂಡಿದೆ. ನಮ್ಮ ಟಕ್ಕರ್ ಚಿತ್ರಕ್ಕೆ ಖ್ಯಾತ ಸಿನಿಮಾ ವಿಮರ್ಶಕರು ಮತ್ತು ಮಾದ್ಯಮಗಳು ಉತ್ತಮ ಪ್ರಶಂಸೆ ನೀಡಿದ್ದಾರೆ. ಒಂದು ವೇಳೆ ಯಾರೆಲ್ಲಾ ಚಿತ್ರಮಂದಿರಕ್ಕೆ ಬಂದು ʻಟಕ್ಕರ್ʼ ಚಿತ್ರವನ್ನು ವೀಕ್ಷಿಸಲು ಸಾಧ್ಯವಾಗಿಲ್ಲವೋ ಅವರೆಲ್ಲಾ ಅಮೆಜ಼ಾನ್ ಪ್ರೈಮ್ ವಿಡಿಯೋದಲ್ಲಿ ಚಿತ್ರ ವೀಕ್ಷಿಸಿ. ಖಂಡಿತಾ ʻಟಕ್ಕರ್ʼ ಮನರಂಜನೆ ನೀಡುವುದರೊಂದಿಗೆ ನಿಮ್ಮ ಮನಸ್ಸನ್ನು ಜಾಗೃತಗೊಳಿಸುವ ಕಥಾ ಹಂದರ ಹೊಂದಿದೆʼʼ ಎಂದು ಚಿತ್ರದ ನಿರ್ಮಾಪಕ ನಾಗೇಶ ಕೋಗಿಲು ಮನವಿ ಮಾಡಿದ್ದಾರೆ. 

ಏನಿದೆ ಟಕ್ಕರ್ ಒಳಗೆ?
ಪ್ರಸ್ತುತ ಜಗತ್ತನ್ನು ನಲುಗಿಸುತ್ತಿರುವ, ಹೆಣ್ಣುಮಕ್ಕಳ ಮಾನ, ಪ್ರಾಣಕ್ಕೆ ಮಾರಕವಾಗಿರುವ ಕಥಾವಸ್ತು ಹೊಂದಿರುವ ಸೈಬರ್ ಕ್ರೈಂ ಕಥಾವಸ್ತು ಹೊಂದಿರುವ ಚಿತ್ರ ʻಟಕ್ಕರ್ʼ. ಭಯ ಅಂದರೆ ಏನು ಅಂತಲೇ ಗೊತ್ತಿಲ್ಲದೆ ಬೆಳೆದವನು. ಹೆಸರು ಸಾಥ್ಯುಕಿ ಅಲಿಯಾಸ್ ಒಂಟೆ. ಕಾಲೇಜಿನಲ್ಲಿ ವಿರೋಧಿ ಗುಂಪಿನ ಜೊತೆ ಬಡಿದಾಡಿಕೊಂಡು ಪೊಲೀಸ್ ಸ್ಟೇಷನ್ನಿಗೆ ಎಡತಾಕೋದು ಮಾಮೂಲಿ. ಅದೇ ಪೊಲೀಸ್ ಸ್ಟೇಷನ್ನಿನಲ್ಲಿ ಅಪ್ಪ ಹಿರಿಯ ಅಧಿಕಾರಿ. ಅಮ್ಮ ಲಾಯರು. ಜೊತೆಗೊಬ್ಬಳು ತಂಗಿ. ಪಕ್ಕದಮನೆಯಲ್ಲಿ ಮತ್ತೊಬ್ಬಳು ಮಮತೆಯ ಸಹೋದರಿ. ಆಕೆ ಸಮಸ್ಯೆಯೊಂದರಲ್ಲಿ ಸಿಲುಕಿಕೊಳ್ಳುತ್ತಾಳೆ. ಅವಳನ್ನು ಬಚಾವು ಮಾಡಲು ಹೋದಾಗ ಒಂಟೆಯ ಮುಂದೆ ತೆರೆದುಕೊಳ್ಳೋದು ಭಯಾನಕ ಸೈಬರ್ ಜಾಲ. ಅದನ್ನು ಹೇಗೆ ಬೇಧಿಸುತ್ತಾನೆ? ಎಲ್ಲೋ ಕೂತು ಮನೆ ಹೆಣ್ಣುಮಕ್ಕಳ ಮೇಲೆ ಕಣ್ಣಿಡುವ ಕಿರಾತಕನನ್ನು ನಾಮಾವಶೇಷ ಮಾಡುತ್ತಾನಾ? ಈ ನಡುವೆ ಹೀರೋ ಮತ್ತು ವಿಲನ್ ನಡುವೆ ಏರ್ಪಡುವ ʻಟಕ್ಕರ್ʼ ಹೇಗಿರುತ್ತದೆ ಅನ್ನೋದಿಲ್ಲಿ ಬಿಚ್ಚಿಕೊಂಡಿದೆ. ಅಪರೂಪಕ್ಕೆನ್ನುವಂತೆ ಈ ಕಾಲಕ್ಕೆ ಹೊಂದುವ ಗಟ್ಟಿ ಕತೆ, ಅಷ್ಟೇ ರೋಚಕವಾದ ನಿರೂಪಣೆ, ಸಂಭಾಷಣೆಗಳನ್ನು ಒಳಗೊಂಡ ಸಿನಿಮಾ ಟಕ್ಕರ್. ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾದ ಅನೇಕ ಅಂಶಗಳನ್ನು ಮನರಂಜನೆಯ ಸಮೇತ ಕಟ್ಟಿಕೊಟ್ಟಿದ್ದಾರೆ.
 
ಟಕ್ಕರ್ ಯಾಕೆ ನೋಡಬೇಕು?
ಇನ್ನೂ ಮಾತು ಬಾರದ ಮಕ್ಕಳು ಕೂಡಾ ಇಂದು ಕೈಲಿ ಮೊಬೈಲು ಹಿಡಿದಿರುತ್ತಾರೆ. ಕೈಗೆ ಮೊಬೈಲು ಕೊಡದಿದ್ದರೆ ಊಟ ಕೂಡಾ ಮಾಡದ ಮಕ್ಕಳನ್ನು ನೋಡಿದ್ದೇವೆ. ಇನ್ನು ವಯಸ್ಸಿಗೆ ಬಂದ ಹೆಣ್ಣುಮಕ್ಕಳನ್ನು ಇದೇ ಮೊಬೈಲು ಯಾವ ಮಟ್ಟಕ್ಕೆ ಹಿಂಸೆ ನೀಡಬಹುದು? ನಾಲ್ಕು ಗೋಡೆ ನಡುವೆ ನಮ್ಮ ಕೈಲಿರುವ ಮೊಬೈಲು ನಮ್ಮದೇ ಖಾಸಗೀ ಬದುಕನ್ನು ಮತ್ತೊಬ್ಬರಿಗೆ ಹೇಗೆ ಬಂಡವಾಳ ಮಾಡುತ್ತಿದೆ ಅನ್ನೋದನ್ನು ಇಲ್ಲಿ ಕಣ್ಣಿಗೆ ಕಟ್ಟಿದಂತೆ ಚಿತ್ರಿಸಲಾಗಿದೆ. ʻʻಅಯ್ಯೋ ದೇವ್ರೇ… ನಮ್ಮ ಕೈಲಿರುವ ಮೊಬೈಲು ನಮ್ಮ ಬದುಕನ್ನು ಇಷ್ಟೊಂದು ಇಕ್ಕಟ್ಟಿಗೆ ಸಿಲುಕಿಸಲು ಸಾಧ್ಯವಾ?ʼʼ ಅಂತಾ ಆಶ್ಚರ್ಯ ಮತ್ತು ಗಾಬರಿ ಒಟ್ಟೊಟ್ಟಿಗೇ ಆಗುತ್ತದೆ. 

ನಾಯಕ ನಟ ಮನೋಜ್ ಕುಮಾರ್
ಈ ಸಿನಿಮಾದಲ್ಲಿ ಮನೋಜ್ ಕುಮಾರ್ ಹೀರೋ ಆಗಿ ನಟಿಸಿದ್ದಾರೆ. ನಾಯಕನಾಗಿ ನಟಿಸಿರುವ ಮೊದಲ ಸಿನಿಮಾವಾದರೂ ಮನೋಜ್ ಪಾತ್ರಕ್ಕೆ ಬೇಕಾದಂತೆ ತಮ್ಮನ್ನು ಮೋಲ್ಡ್ ಮಾಡಿಕೊಂಡಿದ್ದಾರೆ. ಅನುಭವಿಯಂತೆ ಪಾತ್ರ ಪೋಷಣೆ ಮಾಡಿದ್ದಾರೆ. ಆರಡಿ ಎತ್ತರದ ಮೈಕಟ್ಟಿನ ಮನೋಜ್ ಆಕ್ಷನ್ ದೃಶ್ಯಗಳಲ್ಲಿ ಅಮೋಘವಾಗಿ ಕಾಣಿಸಿಕೊಂಡಿದ್ದಾರೆ. ಮನೋಜ್ ಅವರ ಮಾಸ್ ಲುಕ್ ಮತ್ತು ಅಭಿನಯ ಪ್ರತಿಯೊಬ್ಬರಿಗೂ ಇಷ್ಟವಾಗಲಿದೆ. ಇಡೀ ಚಿತ್ರದ ಕೇಂದ್ರ ಬಿಂದುವಾಗಿ, ನೂರಾರು ಜನ ಹೆಣ್ಣುಮಕ್ಕಳ ಮಾನ, ಪ್ರಾಣ ಕಾಪಾಡುವ ನಾಯಕನ ಪಾತ್ರದಲ್ಲಿ ಮನೋಜ್ ಎಲ್ಲರನ್ನೂ ಮಂತ್ರಮುಗ್ದರನ್ನಾಗಿಸುತ್ತಾರೆ.

ಮೋಡಿ ಮಾಡುವ ಕನ್ನಡತಿ
ಇನ್ನು ನಾಯಕಿ ರಂಜನಿ ರಾಘವನ್ ಬಗ್ಗೆ ಹೊಸದಾಗೇನು ಹೇಳುವಂಥದ್ದಿಲ್ಲ. ಈಕೆಯ ಅಭಿನಯ ಚಾತುರ್ಯ ಎಂಥದ್ದು ಅಂತಾ ಪುಟ್ಟಗೌರಿ ಮದುವೆ ಮತ್ತು ಕನ್ನಡತಿ ಎನ್ನುವ ಕಿರುತೆರೆಯ ಎರಡು ಧಾರಾವಾಹಿಗಳು  ಈಗಾಗಲೇ ಹೇಳಿವೆ. ಸೀರಿಯಲ್ಲಿಗೆ ಮಾತ್ರವಲ್ಲದೆ, ಗಟ್ಟಿ ಕಥೆಯ, ಗಂಭೀರ ಪಾತ್ರಗಳ ಸಿನಿಮಾಗಳು ಸಿಕ್ಕರೆ ರಂಜನಿ ಅಲ್ಲಿಯೂ ಸ್ಕೋರು ಮಾಡಿಕೊಳ್ಳುತ್ತಾರೆ ಅನ್ನೋದನ್ನು ಟಕ್ಕರ್ ತೋರಿಸಿಕೊಟ್ಟಿದೆ. ನೋವಿಗೀಡಾದವರು ಯಾರಾದರೇನು, ಅವರ ಪ್ರಾಣ ಕಾಪಾಡುವುದೇ ಧರ್ಮ ಅಂತಾ ನಂಬಿದ ವೈದ್ಯೆಯಾಗಿ, ನಾಯಕನ ಮರ್ಮವನ್ನು ಅರಿಯದೆ, ಅವನ ಮಾತನ್ನು ನಂಬುವ ಮುಗ್ದೆಯಾಗಿ, ನಂಬಿಕೆ ದ್ರೋಹ ಅನ್ನಿಸಿದಾಗ ತಿರುಗಿಬೀಳುವ ಗಟ್ಟಿಗಿತ್ತಿಯಾಗಿ ರಂಜನಿ ಇಷ್ಟವಾಗುತ್ತಾರೆ. ಮಾದಕತೆ ಇಲ್ಲದೆ, ನಾಯಕಿಯೊಬ್ಬಳು ನಟನೆಯಿಂದಲೇ ಎಲ್ಲರನ್ನೂ ಸೆಳೆಯಬಲ್ಲಳು ಅನ್ನೋದಕ್ಕೆ ರಂಜನಿ ಇಲ್ಲಿ ಸ್ಪಷ್ಟ ಉದಾಹರಣೆಯಾಗಿದ್ದಾರೆ.

ಭಯ ಹುಟ್ಟಿಸುವ ಭಜರಂಗಿ ಲೋಕಿ
ಭಜರಂಗಿ ಖ್ಯಾತಿಯ ಸೌರವ್ ಲೋಕಿಯಂತೂ ಮೊದಲಾರ್ಧದ  ಸಮಯಕ್ಕೆ ಬಂದರೂ ನಂತರದ ಭಾಗವನ್ನು ಪೂರ್ತಿಯಾಗಿ ಆವರಿಸಿಕೊಳ್ಳುತ್ತಾರೆ. ಘನ ಗಾಂಭೀರ್ಯದ ದನಿ, ಕಣ್ಣುಗಳ ಚಲನೆಯಲ್ಲೇ ಭಯ ಹುಟ್ಟಿಸುತ್ತಾರೆ. ಭಜರಂಗಿ, ರಥಾವರ ನಂತರ ʻಟಕ್ಕರ್ʼ ಚಿತ್ರದಲ್ಲಿ ಲೋಕಿ ಅವರನ್ನು ಬೇರೆಯದ್ದೇ ಶೇಡ್ ನಲ್ಲಿ ನೋಡಬಹುದು. ಈ ಸಿನಿಮಾ ನೋಡಿದ ಹೆಣ್ಣುಮಕ್ಕಳು ಇವರಿಗೆ ಹಿಡಿ ಶಾಪ ಹಾಕೋದಂತೂ ಖಂಡಿತಾ. ಆ ಮಟ್ಟಿಗೆ ಎಲ್ಲರನ್ನೂ ಹೆದಸಿರುವ, ನೇರವಾಗಿ ಭಾಗಿಯಾಗದೇ ಕೂತಲ್ಲಿಂದಲೇ  ಬೆದರಿಸುವ ಆನ್ ಲೈನ್ ಭಯೋತ್ಪಾದಕನಂತೆ ಲೋಕಿ ಕಾಣಿಸಿಕೊಂಡಿದ್ದಾರೆ.

ಇವರೆಲ್ಲಾ ಇದ್ದಾರೆ! 
ಸಾಧುಕೋಕಿಲಾ ಕಾಮಿಡಿ ದೃಶ್ಯಗಳು ನಗು ಹುಟ್ಟಿಸೋದರಲ್ಲಿ ಡೌಟೇ ಇಲ್ಲ. ಯಾವ ಪಾತ್ರ ಕೊಟ್ಟರೂ ಲೀಲಾಜಾಲವಾಗಿ ನಟಿಸುವ ಸಿ.ವಿ. ಶಿವಶಂಕರ್ ಪುತ್ರ ಲಕ್ಷ್ಮಣ್ ಇಲ್ಲಿ ಹ್ಯಾಕರ್ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದಾರೆ. ಅಶ್ವಿನ್ ಹಾಸನ್ ಥರದ ಶಕ್ತಿಶಾಲಿ ನಟ, ಕಾಮಿಡಿ ಕಿಲಾಡಿ ನಯನಾ, ಹಿರಿಯ ನಟಿ ಸುಮಿತ್ರಾ ಮುಂತಾದ ಕಲಾವಿದರನ್ನು ತೀರಾ ಕಡಿಮೆ ದೃಶ್ಯಗಳಲ್ಲಿ ಬಳಸಿಕೊಂಡಿರೋದು ಯಾಕೆ ಅಂತಾ ನಿರ್ದೇಶಕರೇ ಹೇಳಬೇಕು.

ವಿಕ್ರಾಂತ್ ರೋಣ ಛಾಯಾಗ್ರಾಹಕ - ಕದ್ರಿ ಮಣಿಕಾಂತ್ ಸಂಗೀತ ಮನಮೋಹಕ
ಟಕ್ಕರ್ ಚಿತ್ರದಲ್ಲಿ ಒಬ್ಬಬ್ಬರದ್ದೂ ಒಂದೊಂದು ತೂಕವಾದರೆ, ಅವರೆಲ್ಲರನ್ನೂ ಸರಿಗಟ್ಟುವಂತೆ ಕೆಲಸ ಮಾಡಿ ತೋರಿಸಿರೋದು ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ. ಬಹುಶಃ ಕದ್ರಿಯವರ ಹಿನ್ನೆಲೆ ಸಂಗೀತದಲ್ಲಿನ ಮೋಡಿ ಮಾಡುವ ಗುಣವೇ ಟಕ್ಕರ್ ಚಿತ್ರದ ದೃಶ್ಯಗಳಿಗೆ ಹೆಚ್ಚು ಶಕ್ತಿ ನೀಡಿದಂತಿದೆ. ಹಾಡುಗಳೂ ಕೂಡಾ ಅಷ್ಟೇ ಚೆಂದ. ಡಾ. ವಿ ನಾಗೇಂದ್ರ ಪ್ರಸಾದ್ ಬರೆದಿರುವ ʻಬೀಸುವ ತಂಗಾಳಿಯ ಗೊಂಬೆ ಮಾಡಿದನುʼ ಮತ್ತು ʻಆನೆ ನಡೆದಿದ್ದೆ ದಾರಿ ಅಲ್ವೇನ್ರಿ ಯಾರೂ ಕೊಡಬೇಡಿ ಟಕ್ಕರ್ʼ ಟೈಟಲ್ ಸಾಂಗ್, ಮತ್ತು ನಿರ್ದೇಶಕ ರಘು ಶಾಸ್ತ್ರಿ ಅವರೇ ಬರೆದಿರುವ ʻಬಿರುಗಾಳಿ ಬೀಸೋ ಸದ್ದಿಗೆ, ತರಗೆಲೆಯು ನಿಲ್ಲದುʼ ಹಾಡುಗಳ ಗುಣಮಟ್ಟ ಉತ್ಕೃಷ್ಟವಾಗಿವೆ. ಟೈಟಲ್ ಸಾಂಗ್ ಹಾಡಿರುವ ಶಶಾಂಕ್ ಶೇಷಗಿರಿ ದನಿಯಲ್ಲಿ ಪವರ್ ಇದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಅಮೆಜ಼ಾನ್ ಪ್ರೈಮ್ ವಿಡಿಯೋದಲ್ಲಿ ಟಕ್ಕರ್! - Chitratara.com
Copyright 2009 chitratara.com Reproduction is forbidden unless authorized. All rights reserved.