Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕನ್ನಡ ಸಿನಿತಾರೆಯರ ಪುತ್ರರು ಅಭಿನಯಿಸಿದ ``ಗುರು ಶಿಷ್ಯರು``ಇದೇ ತಿಂಗಳ 23 ರಂದು ಬಿಡುಗಡೆಯಾಗುತ್ತಿದೆ
Posted date: 06 Tue, Sep 2022 08:49:02 AM
ಎಂಭತ್ತರ ದಶಕದಲ್ಲಿ ದ್ವಾರಕೀಶ್ ನಿರ್ಮಾಣದ " ಗುರು ಶಿಷ್ಯರು " ಚಿತ್ರ‌ ಕನ್ನಡಿಗರ ಮನ ಗಿದ್ದಿತ್ತು. ಈಗ ಆದೇ ಹೆಸರಿನ ಚಿತ್ರ ಮತ್ತೊಮ್ಮೆ ಬರುತ್ತಿದೆ. ಶರಣ್ ಕೃಷ್ಣ ಹಾಗೂ ತರುಣ್ ಕಿಶೋರ್ ಸುಧೀರ್ ನಿರ್ಮಿಸಿರುವ ಈ ಚಿತ್ರವನ್ನು ಜಡೇಶ್ ಕೆ ಹಂಪಿ ನಿರ್ದೇಶಿಸಿದ್ದಾರೆ  ಇದೇ ತಿಂಗಳ 23 ರಂದು ಬಿಡುಗಡೆಯಾಗುತ್ತಿದೆ . 

ಶರಣ್ ಹಾಗೂ ನಿಶ್ವಿಕಾ ನಾಯ್ಡು ನಾಯಕ - ನಾಯಕಿಯಾಗಿ ನಟಿಸಿರುವ ಈ ಚಿತ್ರ, ದೇಸಿ ಕ್ರೀಡೆಯಾದ ಖೊಖೊ ಆಟದ ಸುತ್ತ ನಡೆಯುತ್ತದೆ.. ಖೊಖೊ ಕೋಚರ್ ಆಗಿ ಶರಣ್ ಕಾಣಿಸಿಕೊಂಡಿದ್ದಾರೆ.  ವಿಶೇಷವೆಂದರೆ ಹದಿಮೂರು ಜನ ಖೊಖೊ ಆಟಗಾರರ ಪಾತ್ರದಲ್ಲಿ ಆರು ಜನ ಸಿನಿರಂಗದ ನಟರ ಪುತ್ರರು ನಟಿಸಿದ್ದಾರೆ.  ಶರಣ್ ಪುತ್ರ ಹೃದಯ್,  ಪ್ರೇಮ್(ನೆನಪಿರಲಿ) ಪುತ್ರ ಏಕಾಂತ್, ರವಿಶಂಕರ್ ಗೌಡ ಪುತ್ರ ಸೂರ್ಯ, ನವೀನ್ ಕೃಷ್ಣ ಪುತ್ರ ಹರ್ಷಿತ್, ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಹಾಗೂ ಶಾಸಕ‌ ರಾಜು ಗೌಡ ಅವರ ಪುತ್ರ ಮಣಿಕಂಠ ಈ ಚಿತ್ರದಲ್ಲಿ ನಟಿಸಿದ್ದಾರೆ. ಇವರಲ್ಲದೆ ಆಸಿಫ್ ಮುಲ್ಲಾ, ಸಾಂಬಶಿವ, ಸಂದೇಶ್, ಸಾಗರ್, ರುದ್ರಗೌಡ, ಅನುಪ್ ರಾಮಣ್ಣ ಮತ್ತು ಅಮಿತ್ ಬಿ ಕೂಡ ಖೊಖೊ ಆಟಗಾರರಾಗಿ ಕಾಣಿಸಿಕೊಂಡಿದ್ದಾರೆ. 

ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನಡೆಯಿತು. ಹಿರಿಯ ನಟ ದ್ವಾರಕೀಶ್, ನಾಯಕರಾದ ದುನಿಯಾ ವಿಜಯ್ ಹಾಗೂ ಪ್ರಜ್ವಲ್ ದೇವರಾಜ್ ಸೇರಿ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಹಿರಿಯ ಕಲಾವಿದರಾದ ದ್ವಾರಕೀಶ್, ಎಂ.ಎಸ್.ಉಮೇಶ್, ಎಂ.ಎನ್ ಲಕ್ಷ್ಮೀದೇವಿ ಹಾಗೂ ಡಿಂಗ್ರಿ ನಾಗರಾಜ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಹಿರಿಯರು ಚಿತ್ರತಂಡಕ್ಕೆ ‌ಮನತುಂಬಿ ಹಾರೈಸಿದರು. 

ಶರಣ್, ಪ್ರೇಮ್, ರವಿಶಂಕರ್ ಗೌಡ, ನವೀನ್ ಕೃಷ್ಣ ಹಾಗೂ ರಾಜು ಗೌಡ ದಂಪತಿಗಳು ತಮ್ಮ ಮಕ್ಕಳು ಈ ಸಿನಿಮಾಗೆ ಆಯ್ಕೆಯಾದ ಬಗ್ಗೆ ತಿಳಿಸಿದರು. ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಎಲ್ಲಾ ಹುಡಗರು ತಮ್ಮ ಅನುಭವ ಹಂಚಿಕೊಂಡರು.

ಚಿತ್ರ ಸಾಗಿ ಬಂದ ಕುರಿತು "ಜಂಟಲ್  ಮನ್" ಖ್ಯಾತಿಯ ನಿರ್ದೇಶಕ ಜಡೇಶ್ ಕೆ ಹಂಪಿ ಮಾಹಿತಿ ನೀಡಿದರು. ಉತ್ತಮ ಪಾತ್ರ ನೀಡಿರುವುದಕ್ಕೆ ನಿಶ್ವಿಕಾ ನಾಯ್ಡು ಧನ್ಯವಾದ ತಿಳಿಸಿದರು.

ಈಗಾಗಲೇ ಬಿಡುಗಡೆಯಾಗಿರುವ ಹಾಡು ಹಿಟ್ ಆಗಿರುವುದಕ್ಕೆ ಅಜನೀಶ್ ಲೋಕನಾಥ್ ಸಂತೋಷಪಟ್ಟರು.

ಇದೊಂದು ಉತ್ತಮ ಚಿತ್ರ. ತುಂಬಾ ಚೆನ್ನಾಗಿ ಮೂಡಿಬಂದಿದೆ. "ರಾಬರ್ಟ್‌ ನಲ್ಲಿ ದುಡ್ಡಿದ ದುಡ್ಡನೆಲ್ಲಾ ಈ ಚಿತ್ರಕ್ಕೆ ಹಾಕಿದ್ದೇನೆ. ಶಾಸಕ ರಾಜು ಗೌಡ ನಮಗೆ ಬೆನ್ನೆಲುಬಾಗಿ ನಿಂತಿದ್ದಾರೆ. ದೇಸಿ ಕ್ರೀಡೆ ಕುರಿತಾದ ಸಿನಿಮಾಗಳು ನಮ್ಮಲ್ಲಿ ಬರುವುದು ತುಂಬಾ ಕಡಿಮೆ. ಹಾಗಾಗಿ ಖೊಖೊ ಅಂತಹ ಆಟವನ್ನು ನಾವು ಆಯ್ಕೆ ಮಾಡಿಕೊಂಡೆವು. ಇದೇ ಇಪ್ಪತ್ಮೂರರಂದು ಚಿತ್ರ ತೆರೆಗೆ ಬರುತ್ತಿದೆ. ಒಂದು ಖುಷಿ ವಿಚಾರವೆಂದರೆ ನಾವು ಬಿಡುಗಡೆಗೂ ಪೂರ್ವದಲ್ಲೇ ಸೇಫ್ ಆಗಿದ್ದೀವೆ ಎಂದು ತರುಣ್ ಕಿಶೋರ್ ಸುಧೀರ್ ತಿಳಿಸಿದರು. 

ನಾನು ಧನ್ಯವಾದ ಹೇಳಲು ಶುರು ಮಾಡಿದರೆ ಎರಡು ಗಂಟೆ ಬೇಕು ಅಷ್ಟು ಜನರನ್ನು ನಾನು ನೆನಪಿಸಿಕೊಳ್ಳಬೇಕು ಎಲ್ಲರಿಗೂ ಧನ್ಯವಾದ. ನನ್ನ ಮಗ ಈ ಚಿತ್ರದಲ್ಲಿ ನಟಿಸಿದ್ದಾನೆ‌‌. ನನ್ನ ಮಗ ಒಳ್ಳೆಯ ನಟನಾದನೋ? ಇಲ್ಲವೋ? ಗೊತ್ತಿಲ್ಲ. ಈ ಸಿನಿಮಾ ಸಹವಾಸದಿಂದ ಒಳ್ಳೆಯ ಮನುಷ್ಯನಾಗಿದ್ದಾನೆ. ನನ್ನ ಮಗನಿಗೆ ಸ್ನೇಹಿತ ದುನಿಯಾ ವಿಜಯ್  ಸಾಕಷ್ಟು ಸಲಹೆ ನೀಡಿದ್ದಾರೆ. ಎಲ್ಲಾ ಮಕ್ಕಳು ಚೆನ್ನಾಗಿ ಅಭಿನಯಿಸಿದ್ದಾರೆ ಎಂದರು ಶರಣ್.

ನಾನು ಆಣೆ ಮಾಡಿ ಹೇಳುತ್ತೇನೆ ಈ ಸಿನಿಮಾ ಸೂಪರ್ ಹಿಟ್ ಆಗುವುದು ಖಂಡಿತಾ. ಮುಂದೊಂದು ದಿನ ಈ ಮಕ್ಕಳನ್ನಿಟ್ಟು ಕೊಂಡು ನಾನು ಒಂದು ಸಿನಿಮಾ ನಿರ್ದೇಶನ ಮಾಡುತ್ತೇನೆ ಎಂದರು ದುನಿಯಾ ವಿಜಯ್.

ನಾನು ಬೇರೆ ಚಿತ್ರದ ಸಮಾರಂಭಕ್ಕೆ ಬಂದಿದ್ದೀನಿ‌ ಅನಿಸುತ್ತಿಲ್ಲ. ನಮ್ಮ ಸಿನಿಮಾನೇ ಅನಿಸುತ್ತಿದೆ. ಇದರಲ್ಲಿ ಅಭಿನಯಿಸಿರುವವರು ಹುಡುಗರಲ್ಲ . ಹುಲಿಗಳು ಅಷ್ಟು ಚೆನ್ನಾಗಿದೆ ಅವರೆಲ್ಲರ ಅಭಿನಯ ಎಂದು ಪ್ರಜ್ವಲ್ ದೇವರಾಜ್ ಪ್ರಶಂಸೆಯ ಮಾತುಗಳಾಡಿದರು. 

ಮಾಲತಿ ಸುಧೀರ್, ನಂದ ಕಿಶೋರ್, 
ಡಿ.ಎಸ್ ಮ್ಯಾಕ್ಸ್ ದಯಾನಂದ್ ಸೇರಿದಂತೆ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕನ್ನಡ ಸಿನಿತಾರೆಯರ ಪುತ್ರರು ಅಭಿನಯಿಸಿದ ``ಗುರು ಶಿಷ್ಯರು``ಇದೇ ತಿಂಗಳ 23 ರಂದು ಬಿಡುಗಡೆಯಾಗುತ್ತಿದೆ - Chitratara.com
Copyright 2009 chitratara.com Reproduction is forbidden unless authorized. All rights reserved.