Chief Editor
Manohar. R (Manu)
Photo Journalist
chitrataramanu@gmail.com
+91 9845549026
ಬಿಡುಗಡೆಯಾಯ್ತು `ಬನಾರಸ್ `ಬೆರಗಾಗಿಸೋ ಲಿರಿಕಲ್ ವೀಡಿಯೋ ಸಾಂಗ್!
Posted date: 19 Mon, Sep 2022 11:08:11 AM
ಝೈದ್ ಖಾನ್ ನಾಯಕನಾಗಿ ಎಂಟ್ರಿ ಕೊಡುತ್ತಿರುವ ಬಹುನಿರೀಕ್ಷಿತ ಚಿತ್ರ ಬನಾರಸ್. ಜಯತೀರ್ಥ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾ ಈಗಾಗಲೇ ನಾನಾ ದಿಕ್ಕುಗಳಿಂದ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಕುತೂಹಲ ಹುಟ್ಟು ಹಾಕಿದೆ. ಅದನ್ನೆಲ್ಲ ಮತ್ತಷ್ಟು ತೀವ್ರವಾಗಿಸಿದ ಕ್ರೆಡಿಟ್ ಸಲ್ಲುವುದು ಮುದ್ದಾಗಿ ಮೂಡಿಬಂದು, ಹಂತ ಹಂತವಾಗಿ ಬಿಡುಗಡೆಯಾದ ಹಾಡುಗಳಿಗೆ. ಇತ್ತೀಚೆಗಷ್ಟೇ ಬಿಡುಗಡೆಗೊಂಡಿದ್ದ ಮಾಯಗಂಗೆ ಎಂಬ ಹಾಡಿನ ಮೋಡಿಗೆ ಸಿಲುಕದವರೇ ಇಲ್ಲ. ಸಾಹಿತ್ಯ, ಸಂಗೀತ, ದೃಷ್ಯೀಕರಣ ಸೇರಿದಂತೆ ಎಲ್ಲದರಲ್ಲಿಯೂ ಸೈ ಅನ್ನಿಸಿಕೊಂಡಿದ ಮಾಯಗಂಗೆ ಈವತ್ತಿಗೂ ಟ್ರೆಂಡಿಂಗ್‌ನಲ್ಲಿದೆ. ಇದೇ ಹೊತ್ತಿನಲ್ಲೀಗ ಲಿರಿಕಲ್ ವೀಡಿಯೋ ಸಾಂಗ್ ಒಂದು ಬಿಡುಗಡೆಗೊಂಡಿದೆ. 
 
ಎಲ್ಲ ಟ್ರೋಲು ಎಲ್ಲಾ ಟ್ರೋಲು, ಸಿಕ್ಕಾಪಟ್ಟೆ ಕೊಲೇಸ್ಟ್ರಾಲು’ ಅಂತ ಶುರುವಾಗೋ ಈ ಹಾಡಿಗೆ ಡಾ. ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ವಿಶೇಷವೆಂದರೆ, ಸಂಗೀತ ಸಂಯೋಜನೆ ಮಾಡಿರುವ ಅಜನೀಶ್ ಲೋಕನಾಥ್ ಅವರೇ ಈ ಹಾಡನ್ನು ಹಾಡಿದ್ದಾರೆ. ಸಾಮಾನ್ಯವಾಗಿ ಮೆಲೋಡಿ ಹಾಡುಗಳ ಮೂಲಕ ಗಮನ ಸೆಳೆಯುವ, ಅದಕ್ಕೆ ಪ್ರಸಿದ್ಧಿ ಪಡೆದುಕೊಂಡಿರುವವರು ನಾಗೇಂದ್ರ ಪ್ರಸಾದ್. ಅವರು ಆಗಾಗ ಟಪ್ಪಾಂಗುಚ್ಚಿ ಸಾಂಗಿಗೂ ಸೈ ಎಂಬುದನ್ನು ಸಾಬೀತುಪಡಿಸುತ್ತಿರುತ್ತಾರೆ. ಈ ಟ್ರೋಲ್ ಹಾಡಿನ ಮೂಲಕ ಅದು ಮತ್ತೊಮ್ಮೆ ಋಜುವಾತಾಗಿದೆ.
 
ವಿಸೇಷವಾಗಿ, ಈ ಹಾಡಿನಲ್ಲಿ ಝೈದ್ ಖಾನ್ ಮತ್ತೆ ಮಿಂಚಿದ್ದಾರೆ. ಆ ಮೂಲಕ ಮತ್ತಷ್ಟು ಭರವಸೆ ಮೂಡಿಸಿದ್ದಾರೆ. ಈ ಹಿಂದೆ ಮಾಯಗಂಗೆ ಹಾಡು ನೋಡಿದವರೆಲ್ಲರೂ ಝೈದ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಇದೀಗ ಸದರಿ ಟ್ರೋಲ್ ಸಾಂಗ್ ಕೂಡಾ ಅಂಥಾದ್ದೇ ಮೆಚ್ಚುಗೆಗೆ ಪಾತ್ರವಾಗಿದೆ. ಈ ಜಮಾನದ ಟ್ರೆಂಡ್ ಅನ್ನು ಸಾಹಿತ್ಯಕ್ಕೆ ಒಗ್ಗಿಸಿಕೊಂಡಿರುವ ಈ ಹಾಡೂ ಕೂಡಾ ಟ್ರೆಂಡ್ ಸೆಟ್ ಮಾಡೋದರಲ್ಲಿ ಯಾವ ಅನುಮಾನವೂ ಇಲ್ಲ.
 
ಬನಾರಸ್ ಏಕಕಾಲದಲ್ಲಿಯೇ ಐದು ಭಾಷೆಗಳಲ್ಲಿ ತಯಾರುಗೊಂಡಿರುವ ಪ್ಯಾನಿಂಡಿಯಾ ಚಿತ್ರ. ಇದನ್ನು ಬಲು ಪ್ರೀತಿಯಿಂದ ತಿಲಕ್ ರಾಜ್ ಬಲ್ಲಾಳ್ ನಿರ್ಮಾಣ ಮಾಡಿದ್ದಾರೆ. ಕರಾವಳಿಯ ಹುಡುಗಿ ಸೋನಲ್ ಮಂತೇರೋ ನಾಯಕಿಯಾಗಿ ಝೈದ್ ಖಾನ್‌ಗೆ ಸಾಥ್ ಕೊಟ್ಟಿದ್ದಾರೆ. ಸುಜಯ್ ಶಾಸ್ತ್ರಿ, ದೇವರಾಜ್, ಅಚ್ಯುತ್ ಕುಮಾರ್, ಸಪ್ನಾ ರಾಜ್, ಬರ್ಖತ್ ಅಲಿ ಮುಂತಾದವರು ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಬನಾರಸ್ ಇದೇ ನವೆಂಬರ್ ನಾಲಕ್ಕನೇ ತಾರೀಕಿನಂದು ಬಿಡುಗಡೆಗೊಳ್ಳಲಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಬಿಡುಗಡೆಯಾಯ್ತು `ಬನಾರಸ್ `ಬೆರಗಾಗಿಸೋ ಲಿರಿಕಲ್ ವೀಡಿಯೋ ಸಾಂಗ್! - Chitratara.com
Copyright 2009 chitratara.com Reproduction is forbidden unless authorized. All rights reserved.