Chief Editor
Manohar. R (Manu)
Photo Journalist
chitrataramanu@gmail.com
+91 9845549026
ಆರ್ಟಿಕಲ್ 370 ಟ್ರೈಲರ್ ಬಿಡುಗಡೆ
Posted date: 24 Thu, Nov 2022 12:26:16 PM
ನಮ್ಮ ದೇಶದಗಡಿ ಕಾಯುವ ವೀರಯೋಧನ ಸಾಹಸದ  ಕಥೆಯ ಜೊತೆ ಜಮ್ಮ ಕಾಶ್ಮೀರದ  ಪಂಡಿತರ ಮೇಲೆ ನಡೆದ ದೌರ್ಜನ್ಯದ ಘಟನೆಗಳನ್ನು  ನಿರ್ದೇಶಕ ಕೆ. ಶಂಕರ್ ಅವರು ಆರ್ಟಿಕಲ್ ೩೭೦ ಚಿತ್ರದ ಮೂಲಕ ಹೇಳಹೊರಟಿದ್ದಾರೆ. ಈ ಚಿತ್ರದಲ್ಲಿ ಹಿರಿಯನಟ ಶಶಿಕುಮಾರ್ ಒಬ್ಬ ಮಿಲಿಟರಿ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಪತ್ನಿಯಾಗಿ ಶ್ರೀಮತಿ ಶೃತಿ ಅವರು ನಟಿಸಿದ್ದಾರೆ. ದೇಶಪ್ರೇಮದ ಕಿಚ್ಚು ಹಚ್ಚುವಂಥ ಕಥಾಹಂದರ ಇರುವ ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು. ಈ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ದೊಡ್ಡರಂಗೇಗೌಡ, ವೀರಯೋಧ ಜಯರಾಮ್ ಕೃಷ್ಣ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಹಿಂದೂ ಮುಸ್ಲಿಂ‌ ಸಮುದಾಯ ನಡುವೆ ಭಾವೈಕ್ಯತೆ ಮೂಡಿಸುವ ತಿರುಳು ಹೊಂದಿರುವ ಚಿತ್ರವಿದು. ಮಗಳು ರಾಷ್ಟ್ರಪ್ರೇಮಿ ಆದರೆ ಮಗ ರಾಷ್ಟ್ರದ್ರೋಹದ ಕೆಲಸ ಮಾಡುತ್ತಾನೆ ಎಂದು ದೊಡ್ಡರಂಗೇಗೌಡರು ತಮ್ಮ ಪಾತ್ರದ ಬಗ್ಗೆ ಹೇಳಿದರು.

ನಂತರ ಮಾತನಾಡಿದ ನಿರ್ದೇಶಕ ಕೆ.ಶಂಕರ್, ಜಮ್ಮು ಮತ್ತು ಕಾಶ್ಮೀರದಲ್ಲಿ ವಿಶೇಷ ಕಾಯಿದೆ ಜಾರಿಯಾದ ನಂತರ ಮತ್ತು ಅದು ಕ್ಯಾನ್ಸಲ್ ಆದಾಗ ನಡೆದಂಥ ಘಟನೆಗಳನ್ನು ಈ ಚಿತ್ರದಲ್ಲಿ ಹೇಳಿದ್ದೇವೆ,  ಈ ಕಥೆಯನ್ನು ರೆಡಿ ಮಾಡಿಕೊಂಡ ನಂತರ ಭರತ್‌ಗೌಡ ಅವರಬಳಿ ಈ ಬಗ್ಗೆ ಮಾತಾಡಿದಾಗ ಅವರೂ ನಿರ್ಮಾಣಕ್ಕೆ ಒಪ್ಪಿದರು. ಬೆಂಗಳೂರು, ಮೈಸೂರು, ಮಂಡ್ಯ, ಶಿವಮೊಗ್ಗ, ಮಡಿಕೇರಿ, ಚಿಕ್ಕಮಗಳೂರು, ಶ್ರವಣಬೆಳಗೊಳ ಹಾಗೂ ಶ್ರೀನಗರ, ಪೆಹಲ್ಗಾವ್, ಗುಲ್ಮಾರ್ಗ್ ಸುತ್ತಮುತ್ತ ೬೦ ದಿನಗಳ ಕಾಲ ಚಿತ್ರೀಕರಣ ನಡೆಸಿದ್ದೇವೆ. ಚಿತ್ರವೀಗ ಬಿಡುಗಡೆಯ ಹಂತಕ್ಕೆ ಬಂದಿದ್ದು, ಇಂದು ಚಿತ್ರದ ಟ್ರೈಲರ್ ಹೊರಬಂದಿದೆ ಎಂದು ಹೇಳಿದರು. 

ನಟ ಗಣೇಶ್‌ರಾವ್ ಕೇಸರಕರ್ ಮಾತನಾಡಿ ಈ ಚಿತ್ರದಲ್ಲಿ ನಾನು ಸೈನಿಕರಿಗೆ ಚಿಕಿತ್ಸೆ ಕೊಡುವ ಒಬ್ಬ ವೈದ್ಯನಾಗಿ ಕಾಣಿಸಿಕೊಂಡಿದ್ದೇನೆ ಎಂದರು. ಕೆಜಿಎಫ್ ಖ್ಯಾತಿಯ ಕೃಷ್ಣಪ್ಪ ಮಾತನಾಡಿ ಕಾಶ್ಮೀರಿ ಪಂಡಿತನ ಪಾತ್ರವನ್ನು ನನಗೆ ಕೊಟ್ಟಿದ್ದರು, ನನಗೆ ಓಡಲು ಶಕ್ತಿ ಇಲ್ಲದಿದ್ದರೂ, ಕಾಡಲ್ಲಿ ತುಂಬಾನೇ ಓಡಿಸಿದ್ದಾರೆ ಎಂದು ಹೇಳಿದರು, ನಿರ್ಮಾಪಕ ಭರತ್‌ಗೌಡ ಮಾತನಾಡಿ ಶಂಕರ್ ಅವರು ಈ ಕಥೆ ಹೇಳಿದಾಗ, ಕಥೆ ನನಗೆ ತುಂಬಾ ಇಷ್ಟವಾಗಿ ನಿರ್ಮಾಣಕ್ಕೆ ಮುಂದಾದೆ, ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದು ಹೇಳಿದರು.

ನಂತರ ನಟಿ ಶೃತಿ ಮಾತನಾಡಿ ಒಬ್ಬ ಕಲಾವಿದೆಯಾಗಿ ಒಂದು ಪಾತ್ರವನ್ನು ಒಪ್ಪಿಕೊಳ್ಳಬೇಕಾದರೆ, ಸಾಕಷ್ಟು ಯೋಚನೆ ಮಾಡುತ್ತೇನೆ. ಆದರೆ ಈ ಪಾತ್ರವನ್ನು ಹೇಳಿದ ಕೂಡಲೇ ಒಪ್ಪಿದೆ. ದೇಶದ ಗಡಿಯನ್ನು ಕಾಯುತ್ತಿರುವ ಯೋಧನ ಪತ್ನಿಯ ಪಾತ್ರ. ನನಗೆತುಂಬಾ ತೃಪ್ತಿ ಕೊಟ್ಟಿತು. ಪ್ರತಿವರ್ಷ ನನಗೆ ಇಂಥದ್ದೊಂದು ಪಾತ್ರ ಸಿಗುತ್ತಿದೆ. ಕಳೆದ ವರ್ಷ ನಾನು ಗಾಂಧಿ ಚಿತ್ರದಲ್ಲಿ ನಟಿಸಿದ್ದೆ, ಈವರ್ಷ ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ ಎಂದರು. 
 
ವೈರಿ ದೇಶವೊಂದು ಭಾರತದ ಗಡಿ, ಕಾಶ್ಮೀರದಲ್ಲಿರುವ ನಮ್ಮ ಅಮಾಯಕ ಜನರನ್ನು ಬಳಸಿಕೊಂಡು ನಮ್ಮ ದೇಶದ ಮೇಲೆಯೇ ಯುದ್ದ ಸಾರುವ ಕಥಾನಕ ಈ ಚಿತ್ರದಲ್ಲಿದ್ದು, ಆ ವೈರಿದೇಶದ ವಿರುದ್ದ ಹುಲಿಯಂತೆ ಹೋರಾಡುವ ಕೊಡಗಿನಕಲಿ ಮೇಜರ್ ಸುಶೀಲ್‌ಕುಮಾರ್ ಪಾತ್ರದಲ್ಲಿ ಶಶಿಕುಮಾರ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ನಾಯಕನ ತಂದೆ ಹಾಗೂ ಕೊಡಗಿನ ವೀರಯೋಧನಾಗಿ ಹಿರಿಯನಟ ಶಿವರಾಮಣ್ಣ ನಟಿಸಿದ್ದಾರೆ. 

ಆರ್ಟಿಕಲ್ 370 ಚಿತ್ರದಲ್ಲಿ ಕೇವಲ 2 ಹಾಡುಗಳಿದ್ದು, ಯುಗಂತ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಅಲ್ಲದೆ ರವಿ ಅವರ ಕ್ಯಾಮೆರಾವರ್ಕ್ ಈ ಚಿತ್ರಕ್ಕಿದೆ. ಲೈರಾ ಎಂಟರ್‌ಟೈನ್‌ಮೆಂಟ್ ಅಂಡ್ ಮೀಡಿಯಾ ಮೂಲಕ ನಿರ್ದೇಶಕರ ಸ್ನೇಹಿತ ಭರತ್‌ಗೌಡ ಅವರು ಚಿತ್ರವನ್ನು ನಿರ್ಮಿಸಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ನಿರ್ದೇಶಕ ಕೆ.ಶಂಕರ್ ಅವರೇ ರಚಿಸಿದ್ದಾರೆ. ಉಳಿದಂತೆ ಸಂಜೀವರೆಡ್ಡಿ ಅವರ ಸಂಕಲನ, ವೇಲು ಅವರ ಸಾಹಸ ನಿರ್ದೇಶನ ಚಿತ್ರಕ್ಕಿದ್ದು, ಹಿರಿಯ ಸಾಹಿತಿ ದೊಡ್ಡರಂಗೇಗೌಡರು, ರಮಾನಂದ್, ವೆಂಕಟೇಶ್, ಲಕ್ಷ್ಮಣ, ಕಿಲ್ಲರ್ ವೆಂಕಟೇಶ್, ಅವಿನಾಶ್, ರಘುರಂಜನ್ ಮುಂತಾದವರು ಉಳಿದ ಪಾತ್ರವರ್ಗದಲ್ಲಿದ್ದಾರೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಆರ್ಟಿಕಲ್ 370 ಟ್ರೈಲರ್ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.