ಕಳೆದ ಏಳೆಂಟು ವರ್ಷಗಳಿಂದ ಕಿರುತೆರೆ ವಾಹಿನಿಯಲ್ಲಿ ಕೆಲಸ ಮಾಡಿರುವ ಪ್ರಮೋದ್ ಬೋಪಣ್ಣ ಹಾಗೂ ಮೇಘನಾಗೌಡ ನಾಯಕ, ನಾಯಕಿಯಾಗಿ ನಟಿಸಿರುವ ಮರೆಯದೆ ಕ್ಷಮಿಸು ಜ.6ರಂದು ರಾಜ್ಯಾದ್ಯಂತ ತೆರೆಕಾಣಲಿದೆ, ಕೆ.ರಾಘವ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರವನ್ನು ಬಾಳೆಕಾಯಿ ವ್ಯಾಪಾರಿ ಶಿವರಾಮ್ ಅವರು ನಿರ್ಮಿಸಿದ್ದಾರೆ. ನೆನಪಾದರೆ ಎಂಬ ಟ್ಯಾಗ್‌ಲೈನ್ ಈ ಚಿತ್ರಕ್ಕಿದೆ. ವಾಹಿನಿಯಲ್ಲಿ ನ್ಯೂಸ್‌ರೀಡರ್ ಆಗಿದ್ದ ಪ್ರಮೋದ್ ಬೋಪಣ್ಣ ಗಾರೆ ಕೆಲಸ ಮಾಡುವ ಯುವಕನ ಪಾತ್ರ ನಿರ್ವಹಿಸಿದ್ದಾರೆ.
ಅಪ್ಪಟ ಪ್ರೇಮಕಥಾನಕ ಇರುವ ಚಿತ್ರವಾಗಿದ್ದು, ಈಗಿನ ಕಾಲದ ಯುವಕರಿಗೆ ಉತ್ತಮ ಸಂದೇಶವಿದೆ. ಗಾರೆ ಕೆಲಸ ಮಾಡುವ ಸಾಮಾನ್ಯ ಯುವಕನನ್ನು ಶ್ರೀಮಂತ ಮನೆತನದ ಹುಡುಗಿಯೊಬ್ಬಳು ಪ್ರೀತಿ ಮಾಡಿದಾಗ ಏನಾಗುತ್ತದೆ ಎಂಬುದನ್ನು ಈ ಚಿತ್ರದ ಮೂಲಕ ಹೇಳಲಾಗಿದೆ. ಪ್ರೀತಿ ಮಾಡುವುದು ತಪ್ಪಲ್ಲ, ಅದರಿಂದ ಒಳ್ಳೆಯದು, ಕೆಟ್ಟದ್ದು ಎರಡೂ ಸಂಭವಿಸುವ ಸಾಧ್ಯತೆ ಇರುತ್ತದೆ.
ಈಗಿನ ಸಮಾಜದಲ್ಲಿ ನಡೆಯುವ ನೈಜ ಘಟನೆಗಳನ್ನೇ ಇಟ್ಟುಕೊಂಡು ಈ ಕಥೆಯನ್ನು ಮಾಡಲಾಗಿದೆ. ಪೋಷಕರು ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕು, ಅಲ್ಲದೆ ಮಕ್ಕಳು ಪೋಷಕರಿಗೆ ಯಾವರೀತಿ ಗೌರವಿಸಬೇಕು ಎಂದು ಕೂಡ ಈ ಚಿತ್ರದ ಮೂಲಕ ಹೇಳಲು ಪ್ರಯತ್ನಿಸಲಾಗಿದೆ. ಟಿ.ನರಸೀಪುರದಲ್ಲಿ ಈ ಚಿತ್ರದ ಹೆಚ್ಚಿನ ಭಾಗದ ಚಿತ್ರೀಕರಣ ನಡೆಸಲಾಗಿದೆ.
ನಾಯಕಿ ಮೇಘನಾಗೌಡ ಅವರು ಈ ಹಿಂದೆ ಹಳ್ಳಿಪಂಚಾಯ್ತಿ ಚಿತ್ರದಲ್ಲಿ ಅಭಿನಯಿಸಿದ್ದರು. ನಂದಿನಿ ಎಂಬ ಶ್ರೀಮಂತರ ಮನೆಯ ಟ್ರೆಡಿಷನಲ್ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಕಾರ್ತೀಕ್ ವೆಂಕಟೇಶ್ ಅವರ ಸಂಗೀತ ನಿರ್ದೇಶನವಿದೆ.