ನಾಯಕ ನಟ ಅನೀಶ್ `ನಮ್ ಗಣಿ ಬಿಕಾಂ ಪಾಸ್`, `ಗಜಾನನ ಅಂಡ್ ಗ್ಯಾಂಗ್`ಸಿನಿಮಾ ಖ್ಯಾತಿಯ ನಿರ್ದೇಶಕ ಅಭಿಷೇಕ್ ಶೆಟ್ಟಿ ಕಾಂಬಿನೇಶನ್ ನಲ್ಲಿ ಮೂಡಿ ಬರ್ತಿರೋ ಸಿನಿಮಾ `ಆರಾಮ್ ಅರವಿಂದ್ ಸ್ವಾಮಿ`. ರೋಮ್ಯಾಂಟಿಕ್ ಕಾಮಿಡಿ ಸಬ್ಜೆಕ್ಟ್ ಒಳಗೊಂಡ ಈ ಚಿತ್ರದ ನಾಯಕ ನಟಿ ಯಾರೆಂಬುದನ್ನು ಚಿತ್ರತಂಡ ರಿವೀಲ್ ಮಾಡಿದೆ.
ಲವ್ ಮಾಕ್ಟೇಲ್ ಸಿನಿಮಾ ನಂತರ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಮಿಲನ ನಾಗರಾಜ್ `ಆರಾಮ್ ಅರವಿಂದ್ ಸ್ವಾಮಿ`ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದೇ ಮೊದಲ ಬಾರಿಗೆ ನಾಯಕ ಅನೀಶ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಮಿಲನ ನಾಗರಾಜ್ ಬಹಳ ವಿಭಿನ್ನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಚಿತ್ರದಲ್ಲಿ ಎರಡು ಶೇಡ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಲಯಾಳಿ ಹುಡುಗಿ ಹಾಗೂ ಟೀಚರ್ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಈಗಾಗಲೇ ಮಿಲನ ನಾಗರಾಜ್ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದು ಸದ್ಯದಲ್ಲೇ ಇಬ್ಬರ ಪೋಸ್ಟರ್ ಬಿಡೋದಾಗಿ ನಿರ್ದೇಶಕ ಅಭಿಷೇಕ್ ಶೆಟ್ಟಿ ಮಾಹಿತಿ ಹಂಚಿಕೊಂಡಿದ್ದಾರೆ.
`ಆರಾಮ್ ಅರವಿಂದ್ ಸ್ವಾಮಿ` ಚಿತ್ರಕ್ಕೆ ಅಭಿಷೇಕ್ ಶೆಟ್ಟಿ ಕಥೆ, ಚಿತ್ರಕಥೆ, ಡೈಲಾಗ್ ಬರೆದು ನಿರ್ದೇಶನ ಮಾಡುತ್ತಿದ್ದು, ಅಕಿರ ಸಿನಿಮಾ ಖ್ಯಾತಿಯ ಶ್ರೀಕಾಂತ್ ಪ್ರಸನ್ನ, ಗುಳ್ಟು ಸಿನಿಮಾ ಖ್ಯಾತಿಯ ಪ್ರಶಾಂತ್ ರೆಡ್ಡಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ರೋಮ್ಯಾಂಟಿಕ್ ಕಾಮಿಡಿ ಸಬ್ಜೆಕ್ಟ್ ಒಳಗೊಂಡ ಈ ಚಿತ್ರದಲ್ಲಿ ಅನೀಶ್ ಇಲ್ಲಿವರೆಗಿನ ಸಿನಿಮಾಗಳಿಗಿಂತ ಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಹಂತದ ಚಿತ್ರೀಕರಣ ಕಂಪ್ಲೀಟ್ ಮಾಡಿರುವ ಚಿತ್ರತಂಡ ಶೀಘ್ರದಲ್ಲೇ ಮೋಷನ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲಿದೆ.