ನಿರ್ದೇಶಕನೊಬ್ಬನ ಕಲ್ಪನೆಯಲ್ಲಿ ಮೂಡಿಬರುವ ಕಥೆಯನ್ನು ನಿರೂಪಿಸುತ್ತ ಸಾಗುವ ಕಥೆಯೇ ಈವಾರ ತೆರೆಕಂದಿರುವ ಕಾಕ್ ಟೈಲ್. ೩ ಜನ ಯುವತಿಯರ ಸರಣಿ ಕೊಲೆ ಪ್ರಕರಣವೇ ಚಿತ್ರದ ಥೀಮ್. ಇದರ ತನಿಖೆ ನಡೆಸುವವಳೂ ಒಬ್ಬ ಮಹಿಳಾ ಇನ್ಸ್ ಪೆಕ್ಟರ್. ಈ ಇನ್ವೆಸ್ಟಿಗೇಶನ್ ಹಾದಿಯಲ್ಲಿ ನಡೆಯುವ ಘಟನೆಗಳನ್ನು ನಿರ್ದೇಶಕ ಶ್ರೀರಾಮ್, ಸೆಸ್ಪೆನ್ಸ್, ಥ್ರಿಲ್ಲರ್ ವೇನಲ್ಲಿ ಹೇಳಲು ಪ್ರಯತ್ನಿಸಿದ್ದಾರೆ. ಚಿತ್ರದ ಆರಂಭದಿಂದ ಕೊನೆಯವರೆಗೂ ವೀಕ್ಷಕರಲ್ಲಿ ಕುತೂಹಲವನ್ನು ಹಾಗೇ ಕಾಯ್ದುಕೊಂಡು ಹೋಗಿದ್ದಾರೆ. ಈ ಚಿತ್ರದಲ್ಲಿ ಮರ್ಡರ್ ಮಿಸ್ಟರಿ, ಸಸ್ಪೆನ್ಸ್, ಥ್ರಿಲ್ಲರ್, ಮನರಂಜನೆಯ ಜೊತೆಗೆ ಕಾಮಿಡಿಯಂಥ ಎಲ್ಲ ಅಂಶಗಳನ್ನು ಹದವಾಗಿ ಬೆರೆಸಿರುವ ಶ್ರೀರಾಮ್ ರುಚಿಕಟ್ಟಾದ ಪಾಯಸವನ್ನು ಉಣಬಡಿಸಿದ್ದಾರೆ. ಮುಂದೆ ಏನೋ ನಡೆಯುತ್ತಿದೆ ಎಂದು ವೀಕ್ಷಕರು ಕಣ್ಣಗಲಿಸಿ ಕುಳಿತುಕೊಳ್ಳುವಳತೆ ದೃಶ್ಯಗಳನ್ನು ಪೋಷಿಸಿಕೊಂಡು ಹೋಗಿದ್ದಾರೆ. ಆಸಕ್ತಿ ಕೆರಳಿಸುತ್ತ ಸಾಗುವ ಕಥೆಯಲ್ಲಿ ಕೊನೆಗೆ ಬರುವ ಒಂದು ಒಂದು ಟ್ವಿಸ್ಟ್ ಓಹ್, ಚಿತ್ರದ ಕಥೆ ಇದೇನಾ ಎಂದು ಪ್ರೇಕ್ಷಕ ಆಶ್ಚರ್ಯಪಡುವಂತೆ ಮಾಡುತ್ತದೆ. ಒಂದೇ ಹೆಸರಿನ ಮತ್ತು ಒಂದೇ ವಯಸಿನ ಮೂವರು ಹುಡುಗಿಯರ ಸರಣಿ ಕೊಲೆ ನಡೆದಾಗ, ಅದರ ತನಿಖೆಯ ಸುತ್ತ ನಡೆಯುವ ರೋಚಕ ತಿರುವುಗಳನ್ನು ನೀಡುತ್ತ ಸಾಗುವ ನಿರ್ದೇಶಕರು ಕೊನೆಯಲ್ಲಿ ಚಿತ್ರಕ್ಕೆ ಬೇರೆಯದೇ ರೀತಿಯ ಟ್ವಿಸ್ಟ್ ನೀಡಿದ್ದಾರೆ. ಕ್ಲೈಮ್ಯಾಕ್ಸ್ ಹಾಗೇ ಬಾಕಿ ಉಳಿಸಿಕೊಂಡಿದ್ದಾರೆ. ಅಲ್ಲಿ ಬೇರೆಯದೆ ವಿಷಯಗಳು ತೆರೆದುಕೊಳ್ಳುತ್ತದೆ. ಈ ಹಂತದಲ್ಲಿ ನಿರ್ದೇಶಕರು ನಿಜಕ್ಕೂ ಗೆದ್ದಿದ್ದಾರೆ.
ಸಿನಿಮಾ ಯಾವತ್ತೂ ಮುಂದೆ ಹೀಗೇ ನಡೆಯುತ್ತೆ ಎನ್ನುವಂತಿರಬಾದರು, ಛೇ, ಹೀಗಾಯಿತೇ ಎಂದು ನೋಡುಗನ ಮುಖದಲ್ಲಿ ಆತಂಕ ಮೂಡಿಸಬೇಕು, ಆಗಲೇ ಆ ಚಿತ್ರ ಗೆಲ್ಲುವುದು, ಇದೆಲ್ಲವೂ ಕಾಕ್‌ಟೈಲ್ ಚಿತ್ರಕ್ಕೆ ಪ್ಲಸ್ ಆಗಿವೆ. ಕಾಕ್ಟೇಲ್ ರೀತಿಯಲ್ಲೇ ಚಿತ್ರ ಪ್ರೇಕ್ಷಕರಿಗೆ ಹೊಸ ಸ್ವಾದ ನೀಡುತ್ತದೆ. ಒಬ್ಬ ಮಂತ್ರವಾಯ ಕಥೆ, ಒಬ್ಬ ವೇಶ್ಯೆಯ ಕಥೆ, ರಾಜಕಾರಣಯ ಕಥೆ ಹೀಗೆ ಎಲ್ಲವೂ ಪಾತ್ರಗಳಾಗಿ ಬರುತ್ತವೆ, ಒಬ್ಬ ಚಿತ್ರ ನಿರ್ದೇಶಕನೂ ಇಲ್ಲಿ ಪಾತ್ರವಾಗಿ ಬರುತ್ತಾನೆ. ಹೀಗೆ ಆರಂಭದಿಂದಲೂ ಗೊಂದಲದ ಗೂಡಾಗಿ ಸಾಗುವ ಕಥೆಗೆ ನಿರ್ದೇಶಕರು ಕೊನೇ ಹಂತದಲ್ಲಿ ಒಂದು ತಾತ್ವಿಕ ತಿರುವು ಕೊಡುತ್ತಾರೆ. ಇಡೀ ಕಥೆಗೆ ಕ್ಲೈಮ್ಯಾಕ್ಸ್ ನೀಡದೆ ಪ್ರೇಕ್ಷಕರ ತಲೆಯಲ್ಲಿ ಹುಳ ಬಿಟ್ಟು ಮುಂದಿನ ಭಾಗಕ್ಕೆ ಕಾಯುವಂತೆ ಮಾಡಿದ್ದಾರೆ. ಇದು ಒಬ್ಬ ನಿರ್ದೇಶಕನಲ್ಲಿರಬೇಕಾದ ಚತುರತೆ. ಯುವನಟ ವೀರೇನ್ ಕೇಶವ್ ತಾನು ನಿರ್ಮಾಪಕರ ಪುತ್ರ ಎಂದು ಎಲ್ಲೂ ಕಾಣಿಸದಂತೆ ಸಹಜಾಭಿನಯ ನೀಡುವ ಮೂಲಕ ಪ್ರತಿ`ಪ್ರತಿಭಾವಂತಿಕೆ ತೋರಿಸಿದ್ದಾರೆ. ಉತ್ತಮ ಅವಕಾಶಗಳು ಸಿಕ್ಕರೆ ಬೆಳೆಯಬಹುದು ಎಂದು ನಿರೂಪಿಸಿದ್ದಾರೆ.
ವಿಜಯಲಕ್ಷೀ ಕಂಬೈನ್ಸ್ ಮೂಲಕ ಡಾ.ಶಿವಪ್ಪ ಅವರು ತಮ್ಮ ಪುತ್ರನಿಗಾಗಿಯೇ ಈ ಚಿತ್ರವನ್ನು ನಿರ್ಮಿಸಿದ್ದು, ಶ್ರೀರಾಮ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ನಾಯಕಿ ಚರಿಷ್ಮಾ ಹೀರೋಗೆ ಚಾಲೆಂಜ್ ನೀಡುವಂತೆ ಅಭಿನಯಿಸುವ ಮೂಲಕ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಇನ್ನು ಶೋಭರಾಜ್, ಶಿವಮಣಿ, ಚಂದ್ರಕಲಾ ಮೋಹನ್, ಕರಿಸುಬ್ಬು, ರಮೇಶ್ ಪಂಡಿತ್ ಇವರಂಥ ಹಿರಿಯ ಕಲಾವಿದರಾದರು ತಂತಮ್ಮ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಲೋಕಿ ತವಸ್ಯ ಅವರ ಸಂಗೀತದ ಝಲಕ್ ಜೊತೆಗೆ ಚಿತ್ರದ ಪ್ರತಿ ಫ್ರೇಮ್ ನ್ನು ರವಿವರ್ಮ(ಗಂಗು) ಅವರು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.