ಸೂಪರ್ ಡೂಪರ್ ಹಿಟ್ ‘ದಿಯಾ’ ಸಿನಿಮಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ನಟನೆಯ `ಕೆಟಿಎಂ` ಸಿನಿಮಾ ಟೀಸರ್ ಬಿಡುಗಡೆಯಾಗಿದೆ. ವಿಶೇಷವಾಗಿ ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಎಲ್ಲರ ಗಮನ ಸೆಳೆದಿದೆ. ಸ್ಯಾಂಡಲ್ ವುಡ್ ಅಂಗಳದ 50 ಜನ ಸೆಲೆಬ್ರೆಟಿಗಳು `ಕೆಟಿಎಂ` ಟೀಸರ್ ಬಿಡುಗಡೆ ಮಾಡಿರೋದು ವಿಶೇಷ. ಏಕಕಾಲದಲ್ಲಿ ಐವತ್ತು ಜನ ಸೆಲೆಬ್ರೆಟಿಗಳು ಸೋಶಿಯಲ್ ಮೀಡಿಯಾದಲ್ಲಿ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
`ಅಥರ್ವ` ಸಿನಿಮಾ ಖ್ಯಾತಿಯ ಅರುಣ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಎರಡನೇ ಸಿನಿಮಾ `ಕೆಟಿಎಂ`. ಚಿತ್ರೀಕರಣ ಕೆಲಸ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿರುವ ಚಿತ್ರತಂಡ ಚಿತ್ರದ ಪ್ರಚಾರ ಕಾರ್ಯವನ್ನು ಆರಂಭಿಸಿದ್ದು, ಇಂಟ್ರಸ್ಟಿಂಗ್ ಟೀಸರ್ ತುಣುಕನ್ನು ಬಿಡುಗಡೆ ಮಾಡಿದೆ. ವಿಕ್ರಮ್ ರವಿಚಂದ್ರನ್, ಶೃತಿ ಹರಿಹರನ್, ವಿಜಯ ರಾಘವೇಂದ್ರ, ದೀಪಿಕಾ ದಾಸ್, ಅನುಪಮಾ ಗೌಡ, ನವೀನ್ ಶಂಕರ್, ಮೇಘಾ ಶೆಟ್ಟಿ, ಸಿದ್ದು ಮೂಲಿಮನಿ, ಖುಷಿ ರವಿ, ಇಶಾನ್, ಶೈನ್ ಶೆಟ್ಟಿ ಸೇರಿದಂತೆ 50 ಸೆಲೆಬ್ರೆಟಿಗಳು ಡಿಜಿಟಲಿ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ.
ನವಿರಾದ ಪ್ರೇಮ್ ಕಹಾನಿ ಹೊತ್ತ ‘ಕೆಟಿಎಂ’ ಚಿತ್ರದಲ್ಲಿ ದೀಕ್ಷಿತ್ ಶೆಟ್ಟಿ ನಾಯಕ ನಟನಾಗಿ ನಟಿಸಿದ್ದು, ನಾಲ್ಕು ಶೇಡ್ ನಲ್ಲಿ ತೆರೆ ಮೇಲೆ ಕಾಣಸಿಗಲಿದ್ದಾರೆ. ಕಾಜಲ್ ಕುಂದರ್ ಹಾಗೂ ಸಂಜನಾ ಡೋಸ್ ಚಿತ್ರದಲ್ಲಿ ನಾಯಕಿಯರಾಗಿ ತೆರೆ ಹಂಚಿಕೊಂಡಿದ್ದಾರೆ. ಉಷಾ ಭಂಡಾರಿ, ಪ್ರಕಾಶ್ ತುಮಿನಾಡು, ರಘು ರಮಣಕೊಪ್ಪ, ಶಾನಿಲ್ ಗುರು, ಬಾಬು ಹಿರಿಯಣಯ್ಯ, ದೇವ್ ದೇವಯ್ಯ,ಅಭಿಷೇಕ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂತೋಷ್ ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಮಹಾಸಿಂಹ ಮೂವೀಸ್ ಬ್ಯಾನರ್ ನಡಿ ವಿನಯ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನವೀನ್ ಕ್ಯಾಮೆರಾ ವರ್ಕ್, ಚೇತನ್ ಸಂಗೀತ ನಿರ್ದೇಶನ ಕೆಟಿಎಂ ಚಿತ್ರಕ್ಕಿದೆ. ಉಡುಪಿ, ಮಂಗಳೂರು, ಕಾರ್ಕಳ, ಬೆಂಗಳೂರಿನಲ್ಲಿ ಸಿನಿಮಾವನ್ನು ಸೆರೆ ಹಿಡಿಯಲಾಗಿದೆ. ಪೋಸ್ಟ್ ಪ್ರೊಡಕ್ಷನ್ ಕೊನೆಯ ಹಂತದಲ್ಲಿರುವ ಚಿತ್ರತಂಡ ಮಾರ್ಚ್ ನಲ್ಲಿ ಸಿನಿಮಾ ತೆರೆಗೆ ತರಲು ಪ್ಲ್ಯಾನ್ ಮಾಡಿಕೊಂಡಿದೆ.