ಸಿನಿಮಾ, ಟಿವಿ ಕಾರ್ಯಕ್ರಮ ಹಾಗೂ ಸಿನಿಮಾ ತಾರೆಯರ ಅಧಿಕೃತ ಮಾಹಿತಿ ತಾಣವೆನಿಸಿಕೊಂಡಿರುವ ಇಂಟರ್ನೆಟ್ ಮೂವಿ ಡೇಟಾಬೇಸ್ (ಐಎಂಡಿಬಿ) ಈ ವರ್ಷದ ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. 20 ಚಿತ್ರಗಳ ಈ ಪಟ್ಟಿಯಲ್ಲಿ ಕನ್ನಡದಿಂದ ಉಪೇಂದ್ರ ಹಾಗೂ ಸುದೀಪ್ ಅಭಿನಯಿಸಿರುವ ಪ್ಯಾನ್ ಇಂಡಿಯಾ ಚಿತ್ರ `ಕಬ್ಜ` ಮಾತ್ರ ಇರುವುದು ವಿಶೇಷ.
`ಕಬ್ಜ`ಚಿತ್ರವು ಈ ಪಟ್ಟಿಯ ಏಳನೇ ಸ್ಥಾನದಲ್ಲಿದ್ದು, ಮಿಕ್ಕಂತೆ ಶಾರುಖ್ ಖಾನ್ ಅಭಿನಯದ `ಪಠಾಣ್`, ಅಲ್ಲು ಅರ್ಜುನ್ ಅಭಿನಯದ `ಪುಷ್ಪ - ದಿ ರೂಲ್`, ಪ್ರಭಾಸ್ ಅಭಿನಯದ `ಸಲಾರ್`ಮತ್ತು `ಆದಿಪುರುಷ್`, ವಿಜಯ್ ಅಭಿನಯದ `ವಾರಿಸು`, ಸಲ್ಮಾನ್ ಖಾನ್ ಅಭಿನಯದ `ಟೈಗರ್ 3`, ಕಮಲ್ ಹಾಸನ್ ಅಭಿನಯದ `ಇಂಡಿಯನ್ 2`ಮುಂತಾದ ಚಿತ್ರಗಳಿವೆ. ಹಿಂದಿ, ತೆಲುಗು ಮತ್ತು ತಮಿಳು ಚಿತ್ರಗಳೇ ಹೆಚ್ಚಿರುವ ಈ ಚಿತ್ರಗಳ ಪಟ್ಟಿಯಲ್ಲಿ ಕನ್ನಡದಿಂದ ಏಕೈಕ ಚಿತ್ರವಾಗಿ `ಕಬ್ಜ` ಹೊರಹೊಮ್ಮಿದೆ.
ಶ್ರೀ ಸಿದ್ಧೇಶ್ವರ ಎಂಟರ್ಪ್ರೈಸಸ್ನಡಿ ಆರ್. ಚಂದ್ರು ಬರೆದು ನಿರ್ಮಿಸಿ, ನಿರ್ದೇಶಿಸಿರುವ `ಕಬ್ಜ` ಚಿತ್ರವು ಶುರುವಾದಾಗಿನಿಂದ ಇಲ್ಲಿಯವರೆಗೂ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿವೆ. ಅದರಲ್ಲೂ ಇತ್ತೀಚೆಗೆ ಚಿತ್ರದ ಟೀಸರ್ ಬಿಡುಗಡೆಯಾದ ಮೇಲೆ ಆ ನಿರೀಕ್ಷೆಗಳು ನೂರ್ಮಡಿಯಾಗಿವೆ ಎಂದರೆ ತಪ್ಪಿಲ್ಲ. ಬರೀ ಕರ್ನಾಟಕವಷ್ಟೇ ಅಲ್ಲ, ಬೇರೆ ಭಾಷೆಗಳಲ್ಲೂ ಈ ಚಿತ್ರಕ್ಕಾಗಿ ಬೇಡಿಕೆ ಹೆಚ್ಚಿದ್ದು, ಈಗಾಗಲೇ ಹಿಂದಿ ಅವತರಣಿಕೆಯ ಹಕ್ಕುಗಳನ್ನು ಬಾಲಿವುಡ್ನ ಜನಪ್ರಿಯ ಚಿತ್ರ ನಿರ್ಮಾಣ ಹಾಗೂ ವಿತರಣಾ ಸಂಸ್ಥೆಯಾದ ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್ ಪಡೆದುಕೊಂಡಿದೆ. ಹಿಂದಿಯಷ್ಟೇ ಅಲ್ಲ, ಬೇರೆ ಅವತರಣಿಕೆಗಳ ಹಕ್ಕುಗಳಿಗೂ ಬೇಡಿಕೆ ಹೆಚ್ಚಿದೆ.
`ಕಬ್ಜ`ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪ್ರಗತಿಯಲ್ಲಿದ್ದು, ಸದ್ಯದಲ್ಲೇ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ. ಉಪೇಂದ್ರ, ಸುದೀಪ್, ಶ್ರೀಯಾ ಶರಣ್ ಸೇರಿದಂತೆ ಪ್ರತಿಭಾವಂತರ ದೊಡ್ಡ ದಂಡೇ ಇರುವ ಈ ಚಿತ್ರಕ್ಕೆ `ಕೆಜಿಎಫ್`ಖ್ಯಾತಿಯ ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ.