ಕಾಕ್ ಟೈಲ್, ಕಳೆದವಾರ ತೆರೆಕಂದಿರುವ ಚಿತ್ರಗಳಲ್ಲಿ ಅತಿಹೆಚ್ಚು ಜನ ವೀಕ್ಷಣೆ ಮಾಡಿರುವಂಥ ಸಿನಿಮಾ. ವಿಶೇಷವಾದ ನಿರೂಪಣೆ ಹಾಗೂ ತನ್ನ ಮೇಕಿಂಗ್ ಸ್ಟೈಲ್ ನಿಂದಲೇ ವೀಕ್ಷಕರನ್ನು ಸೆಳೆಯುತ್ತಿರುವ ಈ ಚಿತ್ರ ದಿನದಿಂದ ದಿನಕ್ಕೆ ಮೌತ್ ಪಬ್ಲಿಸಿಟಿಯಿಂದಲೇ ಹೆಚ್ಚು ಹೆಚ್ಚು ಜನರನ್ನು ತಲುಪುತ್ತಿದೆ. ಇತ್ತೀಚಿನ ದಿನಗಳಲ್ಲಿ ಕಂಟೆಂಟ್ ಚಿತ್ರಗಳನ್ನು ಜನ ಇಷ್ಟಪಡುತ್ತಿದ್ದು, ಈ ಚಿತ್ರದ ಉತ್ತಮ ಕಂಟೆಂಟ್ ಕೂಡ ಚಿತ್ರದ ಯಶಸ್ಸಿಗೆ ಒಂದು ಕಾರಣವಾಗಿದೆ. ಅದರ ಜೊತೆಗೆ ಚಿತ್ರದಲ್ಲಿ ನಟಿಸಿರುವ ಕಲಾವಿದರ ಅದ್ಭುತ ಅಭಿನಯ ಚಿತ್ರಕ್ಕೆ ನೈಜತೆ ತಂದುಕೊಟ್ಟಿದೆ.
ಯುವತಿಯರ ಮರ್ಡರ್ ಮಿಸ್ಟ್ರಿ, ಅದರ ಸುತ್ತ ನಡೆಯೋ ಇನ್ ವೆಸ್ಟಿಗೇಶನ್ ಪ್ರೋಸಸ್ ನೋಡುಗರನ್ನು ವಿಶೇಷವಾಗಿ ಸೆಳೆಯುತ್ತಿದೆ. ಆ ತನಿಖೆ ನಡೆಸುವವರೂ ಒಬ್ಬ ಮಹಿಳಾ ಇನ್ಸ್ ಪೆಕ್ಟರ್ ಆಗಿರುವುದು ಚಿತ್ರದ ಪ್ಲಸ್ ಪಾಯಿಂಟ್. ನಿರ್ದೇಶಕ ಶ್ರೀರಾಮ್, ಚಿತ್ರದ ಆರಂಭದಿಂದ ಕೊನೆಯವರೆಗೂ ವೀಕ್ಷಕರಲ್ಲಿ ಕುತೂಹಲವನ್ನು ಕಾಯ್ದುಕೊಂಡು ಹೋಗಿರುವುದೂ ಚಿತ್ರವನ್ನು ಜನ ಹೆಚ್ಚು ಇಷ್ಟಪಡಲು ಕಾರಣವಾದ ಅಂಶ ಎನ್ನಬಹುದು.
ಒಂದೇ ಹೆಸರಿನ ಮತ್ತು ಒಂದೇ ವಯಸಿನ ಮೂವರು ಹುಡುಗಿಯರ ಕೊಲೆಯಾದಾಗ ಜರುಗುವ ಸನ್ನಿವೇಶಗಳನ್ನು ರೋಚಕ ತಿರುವುಗಳ ಮೂಲಕ ಹೇಳುವಂಥ ಪ್ರಯತ್ನ ಕನ್ನಡಕ್ಕೆ ಹೊಸದು. ಯುವನಟ ವೀರೇನ್ ಕೇಶವ್ ತನ್ನ ಸಹಜಾಭಿನಯದ ಮೂಲಕವೇ ನೋಡುಗರಿಗೆ ಇಷ್ಟವಾಗುತ್ತಾರೆ.
ವಿಜಯಲಕ್ಷೀ ಕಂಬೈನ್ಸ್ ಮೂಲಕ ಡಾ.ಶಿವಪ್ಪ ಅವರು ಈ ಚಿತ್ರವನ್ನು ನಿರ್ಮಿಸಿದ್ದು, ಶ್ರೀರಾಮ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ನಾಯಕಿಯಾಗಿ ಚರಿಷ್ಮಾ ನಟಿಸಿದ್ದಾರೆ.
ಇನ್ನು ಶೋಭರಾಜ್, ಶಿವಮಣಿ, ಚಂದ್ರಕಲಾ ಮೋಹನ್, ಕರಿಸುಬ್ಬು, ರಮೇಶ್ ಪಂಡಿತ್ ಮುಂತಾದವರು ಅಭಿನಯಿಸಿದ್ದಾರೆ. ಲೋಕಿ ತವಸ್ಯ ಅವರ ಸಂಗೀತದ ಜೊತೆಗೆ ರವಿವರ್ಮ(ಗಂಗು) ಅವರ ಕ್ಯಾಮೆರಾ ವರ್ಕ್ ಚಿತ್ರಕ್ಕೆ ಹೊಸ ರೂಪವನ್ನೇ ತಂದುಕೊಟ್ಟಿದೆ.