ಯಾವ ಹುಡುಗಿಯೂ ಇಷ್ಟಪಡದಂಥ (ವಿ)ರೂಪವಂತ ಹುಡುಗನೊಬ್ಬ ಮದುವೆಯಾಗಲು ಹೊರಟಾಗ ಏನೇನಾಯಿತು ಎಂಬುದನ್ನು ಹಾಸ್ಯಮಯ ವಾಗಿ ಹೇಳುವಂಥ ಕಥಾಹಂದರ ಹೊಂದಿರುವ ಚಿತ್ರವೇ ಮೊದಲಮಳೆ. ಮರ್ಡರ್ ಮಿಸ್ಟ್ರಿ, ಕಾಮಿಡಿ, ಹಾರರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ರಾಜಾನರಸಿಂಹ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಚಿತ್ರಕ್ಕೆ ಬಂಡವಾಳವನ್ನೂ ಹಾಕಿದ್ದಾರೆ. ಮಮತಾಗೌಡ, ಸಾಹಿತ್ಯ, ಉಷಾ, ಪ್ರಿಯಾಶೆಟ್ಟಿ, ಸೇರಿದಂತೆ ಒಂಭತ್ತು ಜನ ನಾಯಕಿಯರಾಗಿ ಅಭಿನಸಿರುವ ಈ ಚಿತ್ರಕ್ಕೆ ರಾಜಶರಣ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಪ್ರಸನ್ನ ಭೋಜಶೆಟ್ಟರ್ ಅವರ ಸಂಗೀತ ಸಂಯೋಜನೆ, ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಈಚೆಗೆ ನಡೆದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಾಯಕ ರಾಜಾನರಸಿಂಹ ಮಾತನಾಡುತ್ತ ನಾನೊಬ್ಬ ರೈತನಮಗ, ಆಕ್ಟರ್ ಆಗಬೇಕು ಎನ್ನುವುದು ನನ್ನ ಕನಸು. ಒಂದು ಸಿನಿಮಾ ಮಾಡಲುಹೋಗಿ ಮೋಸಹೋದೆ. ಈಗ ನಾನೇ ನಿರ್ಮಾಪಕ ಹಾಗೂ ನಾಯಕನಾಗಿ ಈ ಚಿತ್ರ ಮಾಡಿದ್ದೇನೆ. ಏನೋ ಸಾಧನೆ ಮಾಡಲು ಹಳ್ಳಿಯಿಂದ ಬಂದ ಜವರಾಯ ಕೊನೆಗೆ ಏನಾದ ಎನ್ನುವುದೇ ಈ ಚಿತ್ರದ ಕಥೆ ಎಂದು ಹೇಳಿದರು. ನಿರ್ದೇಶಕ ರಾಜಶರಣ್ ಮಾತನಾಡಿ, ಹಿಂದೆ ಎಮ್ಮೆತಮ್ಮ ಎಂಬ ಚಿತ್ರ ಮಾಡಿದ್ದೆ. ಇದು ನನ್ನ ಎರಡನೇ ಚಿತ್ರ. ರಾಜಾನರಸಿಂಹ ೫ ವರ್ಷದ ಸ್ನೇಹಿತರು, ಅವರಿಗಾಗಿಯೇ ಒಂದು ಕಥೆ ಮಾಡಿದೆ, ಆ ಚಿತ್ರ ಆಗಲಿಲ್ಲ, ಇವರುಗೇನು 10 ಜನ ಹೀರೋಯಿನ್ ಇಟ್ಕೊಂಡು ಮಾಡಕ್ಕಾಗುತ್ತಾ ಎನ್ನುವ ಮಾತು ಬಂತು. ಯಾಕಾಗಲ್ಲ ಅಂತ ಚಾಲೆಂಜ್ ತಗೊಂಡು ಈ ಚಿತ್ರ ಮಾಡಿದ್ದೇನೆ, ವ್ಯಕ್ತಿಯ ಜೀವನದಲ್ಲಿ ಮದುವೆ ಎನ್ನುವುದು ಮೊದಲಮಳೆ ಇದ್ದಹಾಗೆ, ನಾಯಕನ ಲೈಫ್ ನಲ್ಲೂ ಮೊದಲಮಳೆ ಆಗುತ್ತಾ ಇಲ್ವಾ ಅನ್ನೋದೇ ಈ ಚಿತ್ರ. ಮಡಿಕೇರಿ, ಸಕಲೇಶಪುರ, ಮೈಸೂರು, ಬೆಂಗಳೂರು ಸುತ್ತಮುತ್ತ ೪೦ ದಿನ ಚಿತ್ರೀಕರಣ ನಡೆಸಿದ್ದೇವೆ. ಹಾರರ್ ಕಂಟೆಂಟ್ ಇರುವ ಕಾರಣ ಚಿತ್ರಕ್ಕೆ ಯು/ಎ ಸಿಕ್ಕಿದೆ ಎಂದು ಹೇಳಿದರು. ಉಳಿದಂತೆ ನಟ ಗಣೇಶರಾವ್, ಜೋತಿ ಮರೂರು, ರಾಜ್ ಅಲ್ಲದೆ ಹಾಜರಿದ್ದ ನಾಲ್ವರು ನಾಯಕಿಯರು ತಮ್ಮ ಪಾತ್ರಗಳ ಬಗ್ಗೆ ಹೇಳಿಕೊಂಡರು.