ನಿರ್ಮಾಪಕ ಹಾಗೂ ನಿರ್ದೇಶಕನಾಗಿ ಚಂದನವನದಲ್ಲಿ ಚಿರಪರಿಚಿತರಾಗಿರುವ ವಿಷ್ಣುಕಾಂತ್ ಪುತ್ರ ಭರತ್ ವಿಷ್ಣುಕಾಂತ್ ನಿರ್ದೇಶಕನಾಗಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಚಿತ್ರಕ್ಕೆ `ರೇಸರ್` ಎಂದು ಟೈಟಲ್ ಇಡಲಾಗಿದೆ. ನೈಜ ಘಟನೆ ಆಧರಿಸಿದ ಈ ಚಿತ್ರ ಈಗಾಗಲೇ ಸೆಟ್ಟೇರಿದ್ದು, ಜನವರಿ 27ರಿಂದ ಚಿತ್ರೀಕರಣ ಆರಂಭವಾಗಲಿದೆ.
`ರೇಸರ್`ಭರತ್ ವಿಷ್ಣುಕಾಂತ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಮೊದಲ ಸಿನಿಮಾ. ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುವುದರ ಜೊತೆಗೆ ಭರತ್ ಫಿಲಂಸ್ ನಡಿ ನಿರ್ಮಾಣ ಕೂಡ ಮಾಡುತ್ತಿದ್ದಾರೆ. ಬೈಕ್ ರೇಸರ್ ಸುತ್ತ ಹೆಣೆದ ರೇಸಿಂಗ್ ಕಾನ್ಸೆಪ್ಟ್ ಒಳಗೊಂಡ ಚಿತ್ರವಿದು. ಬೆಂಗಳೂರಿನಲ್ಲಿ ನಡೆದ ನೈಜ ಘಟನೆ ಈ ಚಿತ್ರಕ್ಕೆ ಸ್ಪೂರ್ತಿ. ಮೆಕ್ಯಾನಿಕ್ ಅಂಡ್ ನ್ಯಾಶನಲ್ ಚಾಂಪಿಯನ್ ಒಬ್ಬರ ಲೈಫ್ ನಲ್ಲಿ ನಡೆದ ಘಟನೆಯನ್ನು ಆಧಾರವಾಗಿಟ್ಟುಕೊಂಡು ಅದಕ್ಕೆ ಒಂದಿಷ್ಟು ಸಿನಿಮ್ಯಾಟಿಕ್ ಟಚ್ ಕೊಟ್ಟು ಕಥಾಹಂದರ ಹೆಣೆದಿದ್ದಾರೆ ಭರತ್ ವಿಷ್ಣುಕಾಂತ್.
ಕಥೆಗೆ ತಕ್ಕಂತೆ ಇಂಟರ್ ನ್ಯಾಶನಲ್ ರೇಸರ್ ರನ್ನು ನಾಯಕನಟನಾಗಿ ಆಯ್ಕೆ ಮಾಡಿಕೊಂಡಿದ್ದಾರೆ ಭರತ್ ವಿಷ್ಣುಕಾಂತ್. ಇಂಟರ್ ನ್ಯಾಶನಲ್ ರೇಸರ್ ಸಂದೇಶ್ ಪ್ರಸನ್ನ ಚಿತ್ರದಲ್ಲಿ ನಾಯಕ ನಟನಾಗಿ ನಟಿಸುತ್ತಿದ್ದು, ಅದ್ವಿತಿ ಶೆಟ್ಟಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಭಜರಂಗಿ ಲೋಕಿ, ಕಾಕ್ರೋಚ್ ಸುಧಿ, ಯಶ್ ಶೆಟ್ಟಿ, ಬಾಲ ರಾಜ್ವಾಡಿ, ಕಾಮಿಡಿ ಕಿಲಾಡಿ ಸೂರಜ್ ಒಳಗೊಂಡ ಕಲಾವಿದರು ಚಿತ್ರದ ತಾರಾ ಬಳಗದಲ್ಲಿದ್ದಾರೆ. ಪ್ರೊಫೆಶನಲ್ ರೇಸರ್ ಗಳು ಕೂಡ ಚಿತ್ರದ ತಾರಾಬಳಗದಲ್ಲಿದ್ದಾರೆ.
ಜನವರಿ 27ರಿಂದ ಚಿತ್ರೀಕರಣಕ್ಕೆ ಹೊರಡಲು ಚಿತ್ರತಂಡ ಸಜ್ಜಾಗಿದೆ. ಬೆಂಗಳೂರು, ಕಾಶ್ಮೀರ ಹಾಗೂ ಬುದ್ದ್ ಇಂಟರ್ ನ್ಯಾಶನಲ್ ಸರ್ಕ್ಯೂಟ್ ನಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಸ್ವಾಮಿ ಮೈಸೂರು ಛಾಯಾಗ್ರಹಣ, ಅಮಿತ್ ಜೇವಳಕರ್ ಸಂಕಲನ ಚಿತ್ರಕ್ಕಿದೆ.