ಶೀರ್ಷಿಕೆಯ ಮೂಲಕವೇ ಮನೆಮಾತಾಗಿರುವ "ಕಡಲ ತೀರದ ಭಾರ್ಗವ" ಚಿತ್ರಕ್ಕಾಗಿ ಖ್ಯಾತ ಸಾಹಿತಿ ಡಾ||ವಿ.ನಾಗೇಂದ್ರಪ್ರಸಾದ್ ಬರೆದಿರುವ "ಸಮಯವೇ" ಎಂಬ ಹಾಡು ಇತ್ತೀಚಿಗೆ ಬಿಡುಗಡೆಯಾಗಿದೆ. ವಿಜಯ್ ಪ್ರಕಾಶ್ ಅವರ ಧ್ವನಿಯಲ್ಲಿ ಈ ಹಾಡನ್ನು ಕೇಳುವುದೆ ಆನಂದ. ಕರಾವಳಿಯ ಅದ್ಭುತ ಪರಿಸರ ಈ ಹಾಡಿನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.
ಇತ್ತೀಚೆಗೆ ಈ ಹಾಡು ಬಿಡುಗಡೆ ಸಮಾರಂಭ ಹಾಗೂ ಪತ್ರಿಕಾಗೋಷ್ಠಿ ನೆರವೇರಿತು.
"ಕಡಲ ತೀರದ ಭಾರ್ಗವ" ಎಂದು ಹಿರಿಯ ಸಾಹಿತಿ ಶಿವರಾಮ ಕಾರಂತರನ್ನು ಕರೆಯುತ್ತಾರೆ. ಅದರೆ ನಮ್ಮ ಚಿತ್ರದ ಕಥೆ ಅವರ ಬಗ್ಗೆ ಅಲ್ಲ. ಚಿತ್ರದಲ್ಲಿ ನಾಯಕನ ಹೆಸರು ಭಾರ್ಗವ ಎಂದು. ನಾನು ಕಡಲತೀರವನ್ನು ಮನುಷ್ಯನ ಮನಸ್ಸಿಗೆ ಹೋಲಿಸುತ್ತೇನೆ. ಪಟೇಲ್ ವರುಣ್ ರಾಜು ಭಾರ್ಗವನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭರತ್ ಗೌಡ ನಾಯಕನಾಗಿ, ಶೃತಿ ಪ್ರಕಾಶ್ ನಾಯಕಿಯಾಗಿ ನಟಿಸಿದ್ದಾರೆ. ಅನಿಲ್ ಸಿ.ಜೆ ಸಂಗೀತ ನೀಡಿರುವ ಆರು ಹಾಡುಗಳ ಪೈಕಿ ಮೂರು ಹಾಡುಗಳು ಈಗಾಗಲೇ ಬಿಡುಗಡೆಯಾಗಿ, ಜನಪ್ರಿಯವಾಗಿದೆ. ಫೆಬ್ರವರಿ 13 ಟ್ರೇಲರ್ ಬರಲಿದೆ. ಅದೇ ದಿವಸ ಬಿಡುಗಡೆ ದಿನಾಂಕ ಘೋಷಣೆ ಮಾಡುತ್ತೇವೆ ಎಂದರು ನಿರ್ದೇಶಕ ಪನ್ನಗ ಸೋಮಶೇಖರ್.
ಮದವೆ ಮಾಡಿ ನೋಡು. ಮನೆ ಕಟ್ಟಿ ನೋಡು ಎಂದು ಹೇಳುತ್ತಾರೆ. ಹಾಗೆ ಸಿನಿಮಾ ಮಾಡುವುದು ಸಹ ಅಷ್ಟು ಸುಲಭವಲ್ಲ. ನಿರ್ದೇಶಕರು ಹೇಳಿದ ಕಥೆ ಇಷ್ಟವಾಗಿ, ನಾನು ಹಾಗೂ ವರುಣ್ ಪಟೇಲ್ ರಾಜು ಸೇರಿ ಈ ಚಿತ್ರ ನಿರ್ಮಾಣ ಮಾಡಿದ್ದೇವೆ. ಜೊತೆಗೆ ನಾಯಕನಾಗೂ ಅಭಿನಯಿಸಿದ್ದೇನೆ. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ - ನಾಯಕ ಭರತ್ ಗೌಡ.
ಕೊರೋನ ಪೂರ್ವದಲ್ಲಿ ಚಿತ್ರಗಳು ಬಿಡುಗಡೆಯಾಗುತ್ತಿದ್ದ ರೀತಿಗೂ ಹಾಗೂ ಈಗಿನ ರೀತಿಗೂ ಬದಲಾವಣೆ ಇದೆ. ಈಗ ವಾರಕ್ಕೆ ಸಾಕಷ್ಟು ಚಿತ್ರಗಳು ಬರುತ್ತಿದೆ. ಅದರ ನಡುವೆ ನಮ್ಮ ಚಿತ್ರವನ್ನು ನೋಡಲು ಚಿತ್ರಮಂದಿರಕ್ಕೆ ಜನರು ಬರುವ ಪ್ರಯತ್ನ ಮಾಡಬೇಕು. ಆ ನಿಟ್ಟಿನಲ್ಲಿ ಪ್ರಚಾರ ಆರಂಭಿಸಿದ್ದೇವೆ. ಉತ್ತಮ ಕಂಟೆಂಟ್ ವುಳ್ಳ ಚಿತ್ರ ಮಾಡಿದ್ದೇವೆ. ನಮ್ಮ ಚಿತ್ರಕ್ಕೆ ನಿಮ್ಮ ಬೆಂಬಲ ಬೇಕು ಎನ್ನುತ್ತಾರೆ ನಿರ್ಮಾಪಕ ಹಾಗೂ ಭಾರ್ಗವ ಪಾತ್ರಧಾರಿ ಪಟೇಲ್ ವರುಣ್ ರಾಜು.
ಚಿತ್ರದ ಹಾಡುಗಳ ಬಗ್ಗೆ ಅನಿಲ್ ಸಿ ಜೆ ಮಾಹಿತಿ ನೀಡಿದರು. ಅನೇಕ ಕಲಾವಿದರು ಹಾಗೂ ತಂತ್ರಜ್ಞರು "ಕಡಲ ತೀರದ ಭಾರ್ಗವ" ಸಿನಿಮಾ ಬಗ್ಗೆ ಮಾತನಾಡಿದರು.